IND vs ENG 4th T20: ರಾಜ್‌ಕೋಟ್‌ನಲ್ಲಿ ಟೀಂ ಇಂಡಿಯಾದ ಸೋಲಿನ ನಂತರ ಪುಣೆಯಲ್ಲಿ ನಡೆಯಲಿರುವ ನಾಲ್ಕನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಲು ತಂಡ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ಮತ್ತು ಧ್ರುವ್ ಜುರೇಲ್‌ಗೆ ವಿಶ್ರಾಂತಿ ನೀಡಿ ಶಿವಂ ದುಬೆ ಮತ್ತು ರಿಂಕು ಸಿಂಗ್ ಅವರನ್ನು ಆಡಿಸುವ ಸಾಧ್ಯತೆ ಇದೆ. ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್ ಮತ್ತು ಮೊಹಮ್ಮದ್ ಶಮಿ ನಡುವೆ ಸ್ಥಾನಕ್ಕಾಗಿ ಪೈಪೋಟಿ ಇದೆ.
![](https://samagrasuddi.co.in/wp-content/uploads/2025/01/image-112-1024x576.png)
ಜನವರಿ 28 ರಂದು ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೋತಿರುವ ಟೀಂ ಇಂಡಿಯಾಕ್ಕೆ ಗೆಲುವಿನ ಹಾದಿಗೆ ಮರಳಲು ಮತ್ತೊಂದು ಅವಕಾಶ ಎದುರಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಆಂಗ್ಲರನ್ನು ಆರಾಮಾಗಿ ಮಣಿಸಿದ್ದ ಯುವ ಪಡೆ, ಮೂರನೇ ಟಿ20 ಪಂದ್ಯದಲ್ಲಿ ಎಡವಿತ್ತು. ಹೀಗಾಗಿ ಗೆಲುವಿನ ಲಯ ಕಂಡುಕೊಂಡಿರುವ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಬಗ್ಗುಬಡಿಯುವುದರೊಂದಿಗೆ ಸರಣಿ ಗೆಲ್ಲುವ ಅವಕಾಶ ಹೊತ್ತು ನಾಲ್ಕನೇ ಟಿ20 ಪಂದ್ಯಕ್ಕೆ ಟೀಂ ಇಂಡಿಯಾ ಕಾಲಿಡುತ್ತಿದೆ. ಉಭಯ ತಂಡಗಳ ನಡುವಿನ ನಾಲ್ಕನೇ ಪಂದ್ಯ ಜನವರಿ 31 ರಂದು ನಡೆಯಲಿದೆ. ಪುಣೆಯಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ ಬದಲಾವಣೆಗಳಾಗುವ ಸಾಧ್ಯತೆಗಳು ಹೆಚ್ಚಿವೆ.
ರಾಜ್‌ಕೋಟ್‌ನಲ್ಲಿ ಸತತ ಮೂರನೇ ಗೆಲುವಿನೊಂದಿಗೆ ಟೀಂ ಇಂಡಿಯಾ ಸರಣಿ ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿತ್ತು. ಹಾಗಾಗಿ ಇಂಗ್ಲೆಂಡ್‌ಗೆ ಇದು ‘ಮಾಡು ಇಲ್ಲವೇ ಮಡಿ’ ಪರಿಸ್ಥಿತಿಯಾಗಿತ್ತು. ಆದಾಗ್ಯೂ, ಸತತ ಎರಡು ಸೋಲುಗಳ ನಂತರ ಇಂಗ್ಲೆಂಡ್ ಪ್ರತಿದಾಳಿ ನಡೆಸಿ ಟೀಂ ಇಂಡಿಯಾವನ್ನು ಸೋಲಿಸಿತು. ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾದ ಸೋಲಿಗೆ ಬ್ಯಾಟ್ಸ್‌ಮನ್‌ಗಳ ವೈಫಲ್ಯವೇ ಕಾರಣವಾಗಿತ್ತು. ಅದರಲ್ಲೂ ಸತತ ಅವಕಾಶ ಸಿಕ್ಕರೂ ಕೆಲವು ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವುತ್ತಿದ್ದಾರೆ. ಹೀಗಾಗಿ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸೂರ್ಯಕುಮಾರ್ ಯಾವ್ಯಾವ ಬದಲಾವಣೆ ಮಾಡಬಹುದು ಎಂಬುದನ್ನು ನೋಡುವುದಾದರೆ..
ಅರ್ಷದೀಪ್ ಇನ್
ವಾಸ್ತವವಾಗಿ ಮೂರನೇ ಟಿ20 ಪಂದ್ಯದಿಂದ ಅರ್ಷದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಲಾಗಿತ್ತು. ಅರ್ಷದೀಪ್ ಬದಲಿಗೆ ಮೊಹಮ್ಮದ್ ಶಮಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಶಮಿ ತಾನು ಫಿಟ್ ಎಂಬುದನ್ನು ಸಾಭೀತುಪಡಿಸಿದರಾದರೂ ವಿಕೆಟ್ ಪಡೆಯುವಲ್ಲಿ ವಿಫಲರಾದರು. ಆದರೆ ಈ ನಂತರವೂ ಶಮಿಗೆ ನಾಲ್ಕನೇ ಪಂದ್ಯಕ್ಕೆ ಅವಕಾಶ ಸಿಗಬಹುದು. ಇತ್ತ ಅರ್ಷದೀಪ್ ಕೂಡ ತಂಡದಲ್ಲಿ ಸ್ಥಾನ ಪಡೆಯಲಿದ್ದು, ರವಿ ಬಿಷ್ಣೋಯ್ಗೆ ತಂಡದಿಂದ ಗೇಟ್ಪಾಸ್ ಸಿಗಬಹುದು.
ಹಾರ್ದಿಕ್-ಜುರೆಲ್ ಔಟ್?
ಅಲ್ಲದೆ, ಮುಂಬರುವ ಚಾಂಪಿಯನ್ಸ್ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಬಹುದು. ಹಾರ್ದಿಕ್ ಸ್ಥಾನದಲ್ಲಿ ಮುಂಬೈ ಆಲ್‌ರೌಂಡರ್ ಶಿವಂ ದುಬೆ ಅವರನ್ನು ಕಣಕ್ಕಿಳಿಸಬಹುದು. ಗಾಯದ ಕಾರಣದಿಂದಾಗಿ ರಿಂಕು ಸಿಂಗ್ ಎರಡನೇ ಮತ್ತು ಮೂರನೇ ಪಂದ್ಯಗಳಲ್ಲಿ ಆಡಿರಲಿಲ್ಲ. ಆದರೀಗ ಸಂಪೂರ್ಣ ಚೇತರಿಸಿಕೊಂಡಿರುವ ರಿಂಕು ಕಣಕ್ಕಿಳಿಯುವುದು ಖಚಿತವಾಗಿರುವುದರಿಂದ ಧ್ರುವ್ ಜುರೇಲ್ ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ.
ಭಾರತ ಸಂಭಾವ್ಯ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ ಮತ್ತು ವರುಣ್ ಚಕ್ರವರ್ತಿ.