ಕಳೆದ 18 ವರ್ಷಗಳಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವುದು ಟೀಂ ಇಂಡಿಯಾಕ್ಕೆ (Team India) ಕನಸಾಗಿಯೇ ಉಳಿದಿದೆ. ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ನಾಯಕತ್ವದಲ್ಲಿ 2007 ರ ಪ್ರವಾಸದಲ್ಲಿ ಆಂಗ್ಲರನ್ನು ಮಣಿಸಿ ಟೆಸ್ಟ್ ಸರಣಿ ಗೆದ್ದಿದ್ದ ಟೀಂ ಇಂಡಿಯಾಕ್ಕೆ ಆ ಬಳಿಕ ಸರಣಿ ಗೆಲುವು ಮರಿಚಿಕೆಯಾಗಿ ಉಳಿದಿದೆ.
ದ್ರಾವಿಡ್ ಹೊದ ಬಳಿಕ ಧೋನಿ, ಕೊಹ್ಲಿ ರೋಹಿತ್ರಂತಹ ಪ್ರತಿಭಾವಂತ ನಾಯಕರೂ ಇಂಗ್ಲೆಂಡ್ ಪ್ರವಾಸ ಮಾಡಿದರಾದರೂ, ಆಂಗ್ಲರನ್ನು ಅವರ ನೆಲದಲ್ಲಿ ಮಣಿಸಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಇದೀಗ ಶುಭ್ಮನ್ ಗಿಲ್ (Shubman Gill) ನಾಯಕತ್ವದಲ್ಲಿ ಇಂಗ್ಲೆಂಡ್ ಪ್ರವಾಸ ಮಾಡಿರುವ ಯಂಗ್ ಇಂಡಿಯಾ ತನ್ನ ಸರಣಿ ಗೆಲುವಿನ ಬರವನ್ನು ನೀಗಿಸುತ್ತಾ ಎಂದು ಕೋಟ್ಯಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಸರಣಿಯಲ್ಲಿ ಈಗಾಗಲೇ 1- 2 ಅಂತರದಿಂದ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾಕ್ಕೆ ಅದೊಂದು ಅಂಕಿ-ಅಂಶಗಳ ಆತಂಕ ಕಾಡಲಾರಂಭಿಸಿದೆ
ಯುವ ನಾಯಕ ಶುಭಮನ್ ಗಿಲ್ ನೇತೃತ್ವದಲ್ಲಿ ಯುವ ಮತ್ತು ಅನನುಭವಿ ಭಾರತೀಯ ತಂಡ ಈ ಬಾರಿಯ ಇಂಗ್ಲೆಂಡ್ ಪ್ರವಾಸಕ್ಕೆ ಬಂದಿದೆ. ಅಂತಹ ಪರಿಸ್ಥಿತಿಯಲ್ಲಿ, ಆರಂಭದಿಂದಲೂ ಟೀಂ ಇಂಡಿಯಾದಿಂದ ಹೆಚ್ಚಿನ ನಿರೀಕ್ಷೆಗಳಿರಲಿಲ್ಲ. ಆದರೆ ಸರಣಿಯ ಮೊದಲ ಪಂದ್ಯದಿಂದ ಟೀಂ ಇಂಡಿಯಾ ನೀಡಿದ ಬಲವಾದ ಪ್ರದರ್ಶನ ಎಲ್ಲರನ್ನೂ ಅಚ್ಚರಿಗೊಳಿಸಿತು. ಗಿಲ್ ಪಡೆ ಲೀಡ್ಸ್ ಪಂದ್ಯವನ್ನು ಸೋತರೂ, ತಂಡದಿಂದ ನಿರೀಕ್ಷೆಗೂ ಮೀರಿದ ಪ್ರದರ್ಶನ ಕಂಡುಬಂದಿತ್ತು. ಆದಾಗ್ಯೂ ತಂಡ ಸೋಲನ್ನು ಅನುಭವಿಸಬೇಕಾಯಿತು. ಆದರೆ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿದ್ದ ಗಿಲ್ ಪಡೆ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲುವಿನ ಅಂಚಿನಲ್ಲಿ ಕೈಚೆಲ್ಲಿತ್ತು.
ಟೀಂ ಇಂಡಿಂ ಎಂದಿಗೂ ಗೆದ್ದಿಲ್ಲ
ಲಾರ್ಡ್ಸ್ ಟೆಸ್ಟ್‌ನಲ್ಲಿನ ಸೋಲಿನೊಂದಿಗೆ, ಟೀಂ ಇಂಡಿಯಾ 5 ಪಂದ್ಯಗಳ ಸರಣಿಯಲ್ಲಿ 1-2 ರಿಂದ ಹಿನ್ನಡೆ ಅನುಭವಿಸಿದೆ. ಆದಾಗ್ಯೂ ಸರಣಿ ಜಯಿಸಲು ಭಾರತಕ್ಕೆ ಇನ್ನು ಅವಕಾಶವಿದೆ. ಏಕೆಂದರೆ ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಬಾಕಿ ಉಳಿದಿದ್ದು, ಈ ಎರಡೂ ಪಂದ್ಯಗಳನ್ನು ಭಾರತ ಗೆಲ್ಲುವಲ್ಲಿ ಯಶಸ್ವಿಯಾದರೆ, ಟೆಸ್ಟ್ ಸರಣಿ ಗಿಲ್ ಪಡೆಯ ಕೈಸೇರಲಿದೆ. ಆದರೆ ಇತಿಹಾಸವನ್ನು ಕೆದಕುತ್ತಾ ಹೋದರೆ, ಅಂಕಿ ಅಂಶಗಳು ಭಾರತದ ವಿರುದ್ಧ ಇರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.
ಇಂಗ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾದ ಈ ಹಿಂದಿನ ಸರಣಿಗಳ ದಾಖಲೆಗಳನ್ನು ಗಮನಿಸಿದಾಗ, ಭಾರತ ತಂಡ ಯಾವಾಗ ಸರಣಿಯಲ್ಲಿ 1-2 ಅಂತರದಿಂದ ಹಿನ್ನಡೆ ಅನುಭವಿಸಿದೆಯೋ ಆಗೆಲ್ಲ ಸರಣಿಯನ್ನು ಸೋತಿದೆ. ಇದು ಮಾತ್ರವಲ್ಲದೆ ಭಾರತ ತಂಡಕ್ಕೆ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಸಹ ಸಾಧ್ಯವಾಗಿಲ್ಲ. ಇದೀಗ ಈ ಸರಣಿಯಲ್ಲಿ 1-2 ಅಂತರದಿಂದ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾ 90 ವರ್ಷಗಳ ಇತಿಹಾಸವನ್ನು ಬದಲಿಸುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಭಾರತಕ್ಕೆ ಮ್ಯಾಂಚೆಸ್ಟರ್ ಸವಾಲು
ಒಂದೆಡೆ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾದ ದಾಖಲೆ ಹೇಳಿಕೊಳ್ಳುವಂತಿಲ್ಲ. ಇದೀಗ ಇದರ ಜೊತೆಗೆ ಮ್ಯಾಂಚೆಸ್ಟರ್ ಸವಾಲು ಟೀಂ ಇಂಡಿಯಾ ಮುಂದಿದೆ. ಅದೆನೇಂದರೆ ಈ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿಲ್ಲ. ಭಾರತವು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದೆ, ಅದರಲ್ಲಿ 4 ರಲ್ಲಿ ಸೋತಿದ್ದರೆ, ಉಳಿದ 5 ಪಂದ್ಯಗಳು ಡ್ರಾ ಆಗಿವೆ. ಆದ್ದರಿಂದ, ಟೀಂ ಇಂಡಿಯಾ ಮ್ಯಾಂಚೆಸ್ಟರ್ ಕೋಟೆಯನ್ನು ಬೇದಿಸುವುದರ ಜೊತೆಗೆ ಇತಿಹಾಸವನ್ನು ಬದಲಿಸಲು ಸರಣಿಯನ್ನು ಸಹ ಗೆಲ್ಲಬೇಕಾಗಿದೆ.