IND vs ENG: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 4 ವಿಕೆಟ್‌ಗಳ ಜಯ

India vs England 1st ODI: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು 4 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 248 ರನ್ ಗಳಿಸಿದರೆ, ಭಾರತ 38.4 ಓವರ್‌ಗಳಲ್ಲಿ ಗೆಲುವು ಸಾಧಿಸಿತು. ಭಾರತದ ಪರ ಶುಭ್ಮನ್ ಗಿಲ್ (87, ಶ್ರೇಯಸ್ ಅಯ್ಯರ್ (59) ಮತ್ತು ಅಕ್ಷರ್ ಪಟೇಲ್ (52) ಅವರ ಅಮೂಲ್ಯ ಕೊಡುಗೆಯಿಂದ ಭಾರತ ಗೆಲುವು ಸಾಧಿಸಿತು.

ಟೀಂ ಇಂಡಿಯಾ, ಇಂಗ್ಲೆಂಡ್​ ವಿರುದ್ಧದ ಟಿ20 ಸರಣಿಯನ್ನು ಯಾವ ರೀತಿಯಲ್ಲಿ ಆರಂಭಿಸಿತ್ತೋ ಇದೀಗ ಇಂದಿನಿಂದ ಆರಂಭವಾಗಿರುವ ಏಕದಿನ ಸರಣಿಯನ್ನೂ ಅದೇ ರೀತಿ ಆರಂಭಿಸಿದೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯುತ್ತಿರುವ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಟೀಂ ಇಂಡಿಯಾ 4 ವಿಕೆಟ್‌ಗಳಿಂದ ಸುಲಭವಾಗಿ ಗೆದ್ದುಕೊಂಡಿದೆ. ನಾಗ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿ 47.4 ಓವರ್‌ಗಳಲ್ಲಿ 248 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ 38.4 ಓವರ್‌ಗಳಲ್ಲಿ ಆರು ವಿಕೆಟ್‌ಗಳಿಗೆ 251 ರನ್ ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತು. ಈಗ, ಟೀಮ್ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಗೆಲುವಿನೊಂದಿಗೆ ಅಜೇಯ ಮುನ್ನಡೆ ಸಾಧಿಸುವ ಗುರಿ ಹೊಂದಿದ್ದು, ಈ ಪಂದ್ಯ ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿದೆ.

ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆಯ ದೃಷ್ಟಿಯಿಂದ ಬಹಳ ಮಹತ್ವ ಪಡೆದುಕೊಂಡಿರುವ ಈ ಸರಣಿಯಲ್ಲಿನ ಗೆಲುವು ಟೀಂ ಇಂಡಿಯಾಗೆ ಬಹಳ ಮುಖ್ಯವಾಗಿದೆ. ಏಕೆಂದರೆ ಇದಕ್ಕೂ ಮೊದಲು ಕಳೆದ ವರ್ಷ ಜುಲೈ-ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಮೂರು ಏಕದಿನ ಪಂದ್ಯಗಳನ್ನಾಡಿದ್ದ ಭಾರತ ಹೀನಾಯವಾಗಿ ಸೋಲು ಕಂಡಿತ್ತು. ಹೀಗಾಗಿ ಟೀಂ ಇಂಡಿಯಾದ ಆಟಗಾರರು ಈ ಸ್ವರೂಪಕ್ಕೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಆದರೆ ಇಂದಿನ ಪಂದ್ಯದಲ್ಲಿ ಇಡೀ ತಂಡ ಸಾಂಘೀಕ ಪ್ರದರ್ಶನವನ್ನು ನೀಡಿ ಏಕದಿನ ಮಾದರಿಯಲ್ಲಿ ಮತ್ತೆ ತನ್ನ ಹಳೆಯ ಲಯಕ್ಕೆ ಮರಳಿದೆ ಎನ್ನಬಹುದು.

ಇಂಗ್ಲೆಂಡ್​ಗೆ ಉತ್ತಮ ಆರಂಭ

ಈ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಭಾರತ ತಂಡಕ್ಕೆ ಮೊಹಮ್ಮದ್ ಶಮಿ ಉತ್ತಮ ಆರಂಭ ನೀಡಿದರು. ಆದರೆ ಮತ್ತೊಂದೆಡೆ, ಏಕದಿನ ಪಂದ್ಯಕ್ಕೆ ಪಾದಾರ್ಪಣೆ ಮಾಡುತ್ತಿದ್ದ ಹರ್ಷಿತ್ ರಾಣಾ ಮೇಲೆ ಇಂಗ್ಲಿಷ್ ಆರಂಭಿಕರು ದಾಳಿ ನಡೆಸಿದರು. ಈ ಜೋಡಿ ಕೇವಲ ಒಂಬತ್ತು ಓವರ್‌ಗಳಲ್ಲಿ 75 ರನ್ ಕಲೆಹಾಕಿತು. ಆದರೆ ಫಿಲ್ ಸಾಲ್ಟ್ 45 ರನ್​ಗಳಿಗೆ ರನೌಟ್​ಗೆ ಬಲಿಯಾದ ನಂತರ ಟೀಂ ಇಂಡಿಯಾ ಮೇಲುಗೈ ಸಾಧಿಸಲು ಪ್ರಾರಂಭಿಸಿತು. ಇದರಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಷಿತ್ ರಾಣಾ, ಮೊದಲು ಬೆನ್ ಡಕೆಟ್ (32), ನಂತರ ಹ್ಯಾರಿ ಬ್ರೂಕ್ (0) ಅವರ ವಿಕೆಟ್‌ಗಳನ್ನು ಪಡೆದರು. ಇದೇ ವೇಳೆ ರವೀಂದ್ರ ಜಡೇಜಾ ಕೂಡ ಜೋ ರೂಟ್ (19) ಅವರನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಸತತ ವಿಕೆಟ್​ಗಳ ಪತನದ ಬಳಿಕ ಜೊತೆಯಾದ ನಾಯಕ ಜೋಸ್ ಬಟ್ಲರ್ ಮತ್ತು ಯುವ ಆಲ್‌ರೌಂಡರ್ ಜಾಕೋಬ್ ಬೆಥೆಲ್ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ಇದೇ ವೇಳೆ ಬಟ್ಲರ್ (52) ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರೆ, ಬೆಥೆಲ್ (51) ಕೆಳ ಕ್ರಮಾಂಕದ ಬ್ಯಾಟರ್​​ಗಳೊಂದಿಗೆ ಜೊತೆಯಾಟ ನಡೆಸಿ ತಂಡವನ್ನು 200 ರ ಗಡಿ ದಾಟಿಸಿದರು. ಕೊನೆಯಲ್ಲಿ, ಜೋಫ್ರಾ ಆರ್ಚರ್ (21) ಸ್ಫೋಟಕ ಬ್ಯಾಟಿಂಗ್ ಮಾಡಿ ತಂಡವನ್ನು 248 ರನ್‌ಗಳಿಗೆ ಕೊಂಡೊಯ್ದರು. ಇತ್ತ ಭಾರತದ ಪರ ಹರ್ಷಿತ್ ಮತ್ತು ಜಡೇಜಾ ತಲಾ 3 ವಿಕೆಟ್ ಪಡೆದರೆ, ಶಮಿ, ಅಕ್ಷರ್ ಮತ್ತು ಕುಲ್ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು.

ರೋಹಿತ್ ಫೇಲ್, ಗಿಲ್-ಅಯ್ಯರ್ ಬೊಂಬಾಟ್ ಬ್ಯಾಟಿಂಗ್

248 ರನ್​ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಗಾಯದ ಕಾರಣ ವಿರಾಟ್ ಕೊಹ್ಲಿ ಪಂದ್ಯದಿಂದ ಹೊರಗುಳಿದಿದ್ದರಿಂದ ಯಶಸ್ವಿ ಜೈಸ್ವಾಲ್ (15) ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಆದಾಗ್ಯೂ ಜೈಸ್ವಾಲ್​ಗೆ ಚೊಚ್ಚಲ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇತ್ತ ನಾಯಕ ರೋಹಿತ್ (2) ಕೂಡ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಆದರೆ ಇಲ್ಲಿಂದ ಜೊತೆಯಾದ ಶ್ರೇಯಸ್ ಅಯ್ಯರ್ ಮತ್ತು ಶುಭ್​ಮನ್ ಗಿಲ್ (87) ಬಲವಾದ ಬ್ಯಾಟಿಂಗ್ ಪ್ರದರ್ಶಿಸಿ ಗೆಲುವಿಗೆ ಅಡಿಪಾಯ ಹಾಕಿದರು.

ಆರಂಭದಿಂದಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಅಯ್ಯರ್ (59), ಆರ್ಚರ್ ಅವರ ಓವರ್‌ನಲ್ಲಿ ಎರಡು ಸಿಕ್ಸರ್‌ ಮತ್ತು ಒಂದು ಬೌಂಡರಿ ಬಾರಿಸಿ ಎದುರಾಳಿ ತಂಡದಲ್ಲಿ ನಡುಕ ಹುಟ್ಟಿಸಿದರು. ಈ ಮೂಲಕ ಅಯ್ಯರ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದರಾದರೂ, ಆ ನಂತರವೇ ಔಟಾದರು. ಅಯ್ಯರ್ ವಿಕೆಟ್ ಬಳಿಕ ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದು ಕ್ರೀಸ್​ಗಿಳಿದ ಅಕ್ಷರ್ (52), ಗಿಲ್ ಅವರೊಂದಿಗೆ 108 ರನ್‌ಗಳ ಜೊತೆಯಾಟ ನಡೆಸಿ ಗೆಲುವನ್ನು ಖಚಿತಪಡಿಸಿದರು. ಅರ್ಧಶತಕ ಗಳಿಸಿದ ನಂತರ ಅಕ್ಸರ್ ಅವರನ್ನು ಆದಿಲ್ ರಶೀದ್ ಪೆವಿಲಿಯನ್​ಗಟ್ಟಿದರೆ, ಆ ಬಳಿಕ ಶುಭ್​ಮನ್ ಗಿಲ್ ಕೂಡ ಕೇವಲ 13 ರನ್‌ಗಳ ಅಂತರದಲ್ಲಿ ಶತಕ ವಂಚಿತರಾದರು. ಅಂತಿಮವಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

Leave a Reply

Your email address will not be published. Required fields are marked *