
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 21 ರನ್ಗಳ ಸೋಲು ಅನುಭವಿಸಿರುವ ಭಾರತ (India vs New Zealand) ಇದೀಗ ಮಾಡು ಇಲ್ಲವೇ ಮಡಿ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇಂದು ಲಕ್ನೋದ ಭಾರತ್ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದೆ. ವಿಶೇಷ ಎಂದರೆ ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದಲ್ಲಿ ಭಾರತ ಇದುವರೆಗೆ ಒಂದೇ ಒಂದು ಟಿ20 ಸರಣಿ ಸೋತಿಲ್ಲ. ಇದೇ ದಾಖಲೆ ಮುಂದುವರೆಯುತ್ತಾ ಎಂಬುದು ಇಂದು ತಿಳಿಯಲಿದೆ. ಮೊದಲ ಟಿ20 ಯಲ್ಲಿ ಬ್ಯಾಟಿಂಗ್ – ಬೌಲಿಂಗ್ ಎರಡೂ ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದ್ದ ಟೀಮ್ ಇಂಡಿಯಾ ಈಗ ಬಲಿಷ್ಠವಾಗಿ ಬರಬೇಕಿದೆ. ಇದಕ್ಕಾಗಿ ಮಾಸ್ಟರ್ ಪ್ಲಾನ್ ಕೂಡ ರೆಡಿ ಮಾಡಿಕೊಂಡಿದೆ. ಮುಖ್ಯವಾಗಿ ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ (India Playing XI) ಬಹುದೊಡ್ಡ ಬದಲಾವಣೆ ನಿರೀಕ್ಷಿಸಲಾಗಿದೆ.
ಭಾರತದ ಓಪನರ್ ಜೋಡಿಗಳಾದ ಇಶಾನ್ ಕಿಶನ್ ಹಾಗೂ ಶುಭ್ಮನ್ ಗಿಲ್ ಉತ್ತಮ ಆರಂಭ ಒದಗಿಸುತ್ತಿಲ್ಲ. ಇವರಿಬ್ಬರು ಆಡಿದ ನಾಲ್ಕು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ 23 ವರ್ಷದ ಮುಂಬೈ ಬ್ಯಾಟರ್ ಪೃಥ್ವಿ ಶಾ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಭಾರತ ಪರ ಇದುವರೆಗೆ ಕೇವಲ ಒಂದು ಟಿ20 ಪಂದ್ಯವನ್ನು ಆಡಿರುವ ಶಾ ಆ ಪಂದ್ಯದಲ್ಲಿ ಡಕ್ಗೆ ನಿರ್ಗಮಿಸಿದ್ದರು. ಇದೀಗ 18 ತಿಂಗಳ ಬಳಿಕ ಪುನಃ ಅಗ್ನಿಪರೀಕ್ಷೆಗೆ ಪೃಥ್ವಿ ಇಳಿಯಲಿದ್ದಾರೆ. ಏಕದಿನದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಗಿಲ್ ಟಿ20 ಯಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಹೀಗಾಗಿ ಗಿಲ್ ಇಂದಿನ ಮ್ಯಾಚ್ನಲ್ಲಿ ಬೆಂಚ್ ಕಾಯಬೇಕಾಗಿ ಬರಬಹುದು.
ಗಿಲ್ ಜೊತೆಗೆ ರಾಹುಲ್ ತ್ರಿಪಾಠಿ ಸ್ಥಾನ ಕೂಡ ತೂಗುಯ್ಯಾಲೆಯಲ್ಲಿದೆ. ಸಿಕ್ಕ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವಲ್ಲಿ ತ್ರಿಪಾಠಿ ವಿಫಲರಾಗಿದ್ದಾರೆ. ಗಿಲ್ಗೆ ಮತ್ತೊಂದು ಅವಕಾಶ ನೀಡುವ ಯೋಜನೆಯಿದ್ದರೆ ತ್ರಿಪಾಠಿ ಜಾಗದಲ್ಲಿ ಪೃಥ್ವಿ ಶಾ ಆಡಬಹುದು. ಮೊದಲ ಟಿ20ಯಲ್ಲಿ 4 ಓವರ್ಗೆ ಬರೋಬ್ಬರಿ 51 ರನ್ ನೀಡಿ ಬೌಲಿಂಗ್ ಸಾಕಷ್ಟು ದುಬಾರಿ ಆಗಿದ್ದ ಅರ್ಶ್ದೀಪ್ ಸಿಂಗ್ ಪ್ಲೇಯಿಂಗ್ ಇಲೆವೆನ್ನಿಂದ ಸ್ಥಾನ ಕಳೆದುಕೊಳ್ಳಬಹುದು. ಇವರ ಜಾಗಕ್ಕೆ ಹೊಸ ಮುಖ ಮುಖೇಶ್ ಕುಮಾರ್ಗೆ ಮಣೆ ಹಾಕಬಹುದು. ಕುಲ್ದೀಪ್ ಯಾದವ್ 4 ಓವರ್ಗೆ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದ ಕಾರಣ ಯುಜ್ವೇಂದ್ರ ಚಹಲ್ ಮತ್ತೊಮ್ಮೆ ಬೆಂಚ್ ಕಾಯಬೇಕಿದೆ. ಉಳಿದಂತೆ ಭಾರತ ತಂಡದಲ್ಲಿ ಏನು ಬದಲಾವಣೆ ಆಗುತ್ತೆ ನೋಡಬೇಕಿದೆ.
MS Dhoni: ರಾಂಚಿ ಮೈದಾನದಲ್ಲಿ ಮೊಳಗಿದ ಧೋನಿ ಕೂಗು: ಬಾಲ್ಕನಿಯಲ್ಲಿದ್ದ ಎಂಎಸ್ಡಿ ಏನು ಮಾಡಿದ್ರು ನೋಡಿ
ಇತ್ತ ನ್ಯೂಜಿಲೆಂಡ್ ತಂಡದ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಅನುಮಾನ. ಎಲ್ಲ ಆಟಗಾರರು ಭರ್ಜರಿ ಫಿಟ್ ಆಗಿದ್ದು ಫಾರ್ಮ್ಗೆ ಕೂಡ ಬಂದಿದ್ದಾರೆ. ಅದರಲ್ಲೂ ಡೇರಿಲ್ ಮಿಚೆಲ್, ಡೆವೊನ್ ಕಾನ್ವೇ ಹಾಗೂ ಫಿನ್ ಅಲೆನ್ ಭಾರತಕ್ಕೆ ಕಂಟಕವಾಗಿ ಪರಿಣಮಿಸಿದ್ದಾರೆ. ಉಳಿದ ಬ್ಯಾಟರ್ಗಳು ಇವರಿಗೆ ಸಾಥ್ ನೀಡಿದರೆ ಕಿವೀಸ್ ಪಡೆಗೆ ಮತ್ತೊಂದು ಜಯ ಖಚಿತ. ನ್ಯೂಜಿಲೆಂಡ್ ಬೌಲಿಂಗ್ ಕೂಡ ಸಂಘಟಿತವಾಗಿದೆ. ಬ್ರೆಸ್ವೆಲ್, ಸ್ಯಾಂಟನರ್ ಹಾಗೂ ಫರ್ಗುಸನ್ ಕಳೆದ ಪಂದ್ಯದಲ್ಲಿ ತಂಡಕ್ಕೆ ಜಯ ತಂದುಕೊಡುವಲ್ಲಿ ಮುಖ್ಯ ಪಾತ್ರವಹಿಸಿದ್ದರು. ನಾಯಕನ ಜವಾಬ್ದಾರಿ ವಹಿಸಿರುವ ಮಿಚೆಲ್ ಸ್ಯಾಂಟನರ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.
ಭಾರತ ಸಂಭಾವ್ಯ ಪ್ಲೇಯಿಂಗ್ XI: ಶುಭ್ಮನ್ ಗಿಲ್, ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ) ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಶಿವಂ ಮಾವಿ, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.
ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ XI: ಫಿನ್ ಅಲೆನ್, ಡೆವೊನ್ ಕಾನ್ವೇ, ಮಾರ್ಕ್ ಚಾಪ್ಮನ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮೈಕೆಲ್ ಬ್ರೇಸ್ವೆಲ್, ಜಾಕೋಬ್ ಡಫಿ, ಇಶ್ ಸೋಧಿ, ಲಾಕಿ ಫರ್ಗುಸನ್, ಬ್ಲೇರ್ ಟಿಕ್ನರ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ