
India vs New Zealand: ಭಾರತ-ನ್ಯೂಜಿಲೆಂಡ್ ನಡುವಣ ಏಕದಿನ ಸರಣಿಯು ಬುಧವಾರದಿಂದ (ಜ.18) ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವು ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ (Team India) ಗೆಲುವಿನ ಲಯವನ್ನು ಮುಂದುವರೆಸುವ ಇರಾದೆಯಲ್ಲಿದೆ. ಏಕೆಂದರೆ ಈ ಸರಣಿಯನ್ನು 3-0 ಅಂತರದಿಂದ ಟೀಮ್ ಇಂಡಿಯಾ ಗೆದ್ದರೆ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಲಿದೆ.
ಈಗಾಗಲೇ ಶ್ರೀಲಂಕಾ ತಂಡವನ್ನು 3-0 ಅಂತರದಿಂದ ಬಗ್ಗು ಬಡಿದಿರುವ ಟೀಮ್ ಇಂಡಿಯಾ ಸದ್ಯ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ 4ನೇ ಸ್ಥಾನದಲ್ಲಿದೆ. ಭಾರತ ತಂಡವು ಒಟ್ಟು 110 ಅಂಕಗಳನ್ನು ಪಡೆದಿದ್ದರೆ, ಅತ್ತ 117 ಅಂಕಗಳೊಂದಿಗೆ ನ್ಯೂಜಿಲೆಂಡ್ ಅಗ್ರಸ್ಥಾನದಲ್ಲಿದೆ. ಇದೀಗ ಟೀಮ್ ಇಂಡಿಯಾ ನಂಬರ್ 1 ಏಕದಿನ ತಂಡವಾಗಿ ಗುರುತಿಸಿಕೊಂಡಿರುವ ನ್ಯೂಜಿಲೆಂಡ್ ವಿರುದ್ಧ ಕಣಕ್ಕಿಳಿಯುತ್ತಿದೆ.
ಇಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳಲ್ಲೂ ನ್ಯೂಜಿಲೆಂಡ್ ತಂಡವನ್ನು ಸೋಲಿಸಿದರೆ ಭಾರತ ತಂಡದ ಪಾಯಿಂಟ್ ಗಳಿಕೆಯಲ್ಲಿ ಏರಿಕೆ ಕಾಣಲಿದೆ. ಅತ್ತ ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ಕೇವಲ 7 ಅಂಕಗಳ ವ್ಯತ್ಯಾಸ ಮಾತ್ರವಿದ್ದು, ಹೀಗಾಗಿ ಟೀಮ್ ಇಂಡಿಯಾ 3-0 ಅಂತರದಿಂದ ಸರಣಿ ಜಯಿಸಿದರೆ ಅಂಕ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಬಹುದು.
ವಿಶೇಷ ಎಂದರೆ ಈಗಾಗಲೇ ಟೀಮ್ ಇಂಡಿಯಾ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೆ ಏಕದಿನ ರ್ಯಾಂಕಿಂಗ್ನಲ್ಲೂ ನಂಬರ್ 1 ಸ್ಥಾನಕ್ಕೇರಬಹುದು. ಹಾಗೆಯೇ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನದಲ್ಲಿರುವ ಭಾರತ ತಂಡವು ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಜಯ ಸಾಧಿಸುವ ಮೂಲಕ ಅಗ್ರಸ್ಥಾನಕ್ಕೇರಬಹುದು.
ಅಂದರೆ ಇಲ್ಲಿ ಮೂರು ಮಾದರಿಯಲ್ಲೂ ನಂಬರ್ 1 ತಂಡವಾಗಿ ಗುರುತಿಸಿಕೊಳ್ಳಲು ಟೀಮ್ ಇಂಡಿಯಾಗೆ ಉತ್ತಮ ಅವಕಾಶವಿದೆ. ಅದಕ್ಕಾಗಿ ನ್ಯೂಜಿಲೆಂಡ್ ತಂಡವನ್ನು ಮೂರು ಪಂದ್ಯಗಳಲ್ಲಿ ಬಗ್ಗು ಬಡಿಯಬೇಕು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನದೊಂದಿಗೆ ಸರಣಿ ಗೆಲ್ಲಬೇಕಷ್ಟೇ. ಹೀಗಾಗಿಯೇ ಟೀಮ್ ಇಂಡಿಯಾಗೆ ಈ ಎರಡು ಸರಣಿಗಳು ಇದೀಗ ತುಂಬಾ ಮುಖ್ಯ ಎನಿಸಿಕೊಂಡಿದೆ.
ಟೀಮ್ ಇಂಡಿಯಾ ಏಕದಿನ ತಂಡ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ವಾಷಿಂಗ್ಟನ್ ಸುಂದರ್, ಶಹಬಾಝ್ ಅಹ್ಮದ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ನ್ಯೂಜಿಲೆಂಡ್ ಏಕದಿನ ತಂಡ:
ಟಾಮ್ ಲ್ಯಾಥಮ್ (ನಾಯಕ) , ಫಿನ್ ಅಲೆನ್ , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ಡೇರಿಲ್ ಮಿಚೆಲ್ , ಮೈಕೆಲ್ ಬ್ರೇಸ್‌ವೆಲ್ , ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಇಶ್ ಸೋಧಿ , ಲಾಕಿ ಫರ್ಗುಸನ್ , ಬ್ಲೇರ್ ಟಿಕ್ನರ್ , ಜೇಕಬ್ ಡಫ್ಫಿ, ಡೌಗ್ ಬ್ರೇಸ್‌ವೆಲ್, ಮಾರ್ಕ್ ಚಾಪ್ಮನ್, ಹೆನ್ರಿ ಶಿಪ್ಲೆ.