IND vs NZ: ಮಿಂಚಿದ ವರುಣ್, ಕುಲ್ದೀಪ್ ಯಾದವ್; ಕಿವೀಸ್ ವಿರುದ್ಧ ಭಾರತಕ್ಕೆ 44 ರನ್​ಗಳ ಜಯ

Champions Trophy 2025: ಭಾರತ ತಂಡವು 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ ಭಾರತ 249 ರನ್ ಗಳಿಸಿತು. ವರುಣ್ ಅವರ ಅದ್ಭುತ ಬೌಲಿಂಗ್ (5/42) ಮತ್ತು ಕಿವೀಸ್ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನದಿಂದ ನ್ಯೂಜಿಲೆಂಡ್ 205 ರನ್‌ಗಳಿಗೆ ಆಲೌಟ್ ಆಯಿತು. ಈ ಜಯದೊಂದಿಗೆ ಭಾರತ ಸೆಮಿಫೈನಲ್‌ಗೆ ಅಜೇಯ ತಂಡವಾಗಿ ಪ್ರವೇಶಿಸಿದೆ.

2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ (Champions Trophy 2025) ಟೀಂ ಇಂಡಿಯಾ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಇಂದು ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾರತ ತಂಡ, ನ್ಯೂಜಿಲೆಂಡ್ ತಂಡವನ್ನು (India vs New Zealand) 44 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ, ಟೀಂ ಇಂಡಿಯಾ ಟೂರ್ನಿಯಲ್ಲಿ ಸತತ ಮೂರು ಗೆಲುವುಗಳನ್ನು ಸಾಧಿಸುವ ಮೂಲಕ ತನ್ನ ಗುಂಪಿನಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿತು. ಇದೀಗ ಮಂಗಳವಾರ ನಡೆಯುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಶ್ರೇಯಸ್- ಅಕ್ಷರ್ ಜೊತೆಯಾಟ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ನೆರವಿನಿಂದ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 249 ರನ್ ಗಳಿಸಿತು. ಆದರೆ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಪವರ್ ಪ್ಲೇ ಅಂತ್ಯಕ್ಕೂ ಮುನ್ನವೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದಾದ ನಂತರ ಶ್ರೇಯಸ್ ಮತ್ತು ಅಕ್ಷರ್ ಪಟೇಲ್ ನಾಲ್ಕನೇ ವಿಕೆಟ್‌ಗೆ 98 ರನ್‌ಗಳ ಜೊತೆಯಾಟ ನೀಡಿದರು. ಅಕ್ಷರ್ ಮತ್ತು ಶ್ರೇಯಸ್ ಔಟಾದ ನಂತರ ಭಾರತದ ಇನ್ನಿಂಗ್ಸ್ ಕುಸಿತ ಕಂಡಿತು.

3/3 ✅ #TeamIndia will face Australia in the first Semi Final

Scoreboard ▶️ https://t.co/Ba4AY30p5i#NZvIND | #ChampionsTrophy pic.twitter.com/QxG9ZWeVMN

— BCCI (@BCCI) March 2, 2025

ಶತಕ ವಂಚಿತ ಶ್ರೇಯಸ್

ಭಾರತದ ಪರ ಶ್ರೇಯಸ್ 98 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ನೆರವಿನಿಂದ 79 ರನ್ ಗಳಿಸಿದರು. ಅವರಲ್ಲದೆ, ಹಾರ್ದಿಕ್ ಪಾಂಡ್ಯ 45 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 45 ರನ್​ಗಳ ಕಾಣಿಕೆ ನೀಡಿದರು. ಆಲ್​​ರೌಂಡರ್ ಅಕ್ಷರ್ ಪಟೇಲ್ ಕೂಡ 61 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ 42 ರನ್ ಬಾರಿಸಿದರೆ, ಕೆಎಲ್ ರಾಹುಲ್ 23 ರನ್, ರವೀಂದ್ರ ಜಡೇಜಾ 16 ರನ್, ನಾಯಕ ರೋಹಿತ್ ಶರ್ಮಾ 15 ರನ್​ಗಳ ಇನ್ನಿಂಗ್ಸ್ ಆಡಿದರು. 300 ನೇ ಏಕದಿನ ಪಂದ್ಯವನ್ನು ಆಡುತ್ತಿದ್ದ ವಿರಾಟ್ ಕೊಹ್ಲಿ 11 ರನ್ ಗಳಿಸಿದರೆ, ಮೊಹಮ್ಮದ್ ಶಮಿ 5 ರನ್, ಶುಭ್​ಮನ್ ಗಿಲ್ ಎರಡು ರನ್ ಗಳಿಸಲಷ್ಟೇ ಶಕ್ತರಾದರು. ನ್ಯೂಜಿಲೆಂಡ್ ಪರ ಮ್ಯಾಟ್ ಹೆನ್ರಿ ಎಂಟು ಓವರ್‌ಗಳಲ್ಲಿ 42 ರನ್‌ ನೀಡಿ ಐದು ವಿಕೆಟ್‌ಗಳನ್ನು ಪಡೆದರೆ, ಕೈಲ್ ಜೇಮಿಸನ್, ವಿಲಿಯಂ ಒ’ರೂರ್ಕ್, ಮಿಚೆಲ್ ಸ್ಯಾಂಟ್ನರ್ ಮತ್ತು ರಾಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.

ಕಿವೀಸ್​ಗೂ ಆರಂಭಿಕ ಆಘಾತ

ಗುರಿಯನ್ನು ಬೆನ್ನಟ್ಟಿದ ಕಿವೀಸ್​ಗೂ​ ಟೀಂ ಇಂಡಿಯಾ ವೇಗಿಗಳು ಕಾಟ ನೀಡಿದರು. ಆಗಾಗ್ಗೆ ವಿಕೆಟ್‌ಗಳನ್ನು ಕಳೆದುಕೊಂಡ ನ್ಯೂಜಿಲೆಂಡ್ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ 45.3 ಓವರ್‌ಗಳಲ್ಲಿ 205 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್ ಪರ ಕೇನ್ ವಿಲಿಯಮ್ಸನ್ 81 ರನ್ ಬಾರಿಸಿದರು. ವಿಲಿಯಮ್ಸನ್ ಹೊರತುಪಡಿಸಿ, ನ್ಯೂಜಿಲೆಂಡ್‌ನ ಯಾವುದೇ ಬ್ಯಾಟ್ಸ್‌ಮನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ನಾಯಕ ಮಿಚೆಲ್ ಸ್ಯಾಂಟ್ನರ್ 28 ರನ್, ಟಾಮ್ ಲ್ಯಾಥಮ್ 14, ಡ್ಯಾರಿಲ್ ಮಿಚೆಲ್ 17, ವಿಲ್ ಯಂಗ್ 22, ರಾಚಿನ್ ರವೀಂದ್ರ 6, ಗ್ಲೆನ್ ಫಿಲಿಪ್ಸ್ 12 ಮತ್ತು ಮ್ಯಾಟ್ ಹೆನ್ರಿ 2 ರನ್​ ಕಲೆಹಾಕಲಷ್ಟೇ ಶಕ್ತರಾದರು.

ಮೊದಲ ಪಂದ್ಯದಲ್ಲೇ ಮಿಂಚಿದ ವರುಣ್

ಭಾರತ ಪರ ವರುಣ್ ಅದ್ಭುತ ಪ್ರದರ್ಶನ ನೀಡಿ 10 ಓವರ್‌ಗಳಲ್ಲಿ 42 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಪಡೆದರು. ಚಾಂಪಿಯನ್ಸ್ ಟ್ರೋಫಿಯಲ್ಲಿ ಇದು ವರುಣ್ ಅವರ ಮೊದಲ ಪಂದ್ಯವಾಗಿದ್ದು, ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ ವರುಣ್ ಮಿಂಚುವಲ್ಲಿ ಯಶಸ್ವಿಯಾದರು. ಭಾರತದ ಪರ ವರುಣ್ ಹೊರತುಪಡಿಸಿ, ಕುಲ್ದೀಪ್ ಯಾದವ್ ಎರಡು ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದರು. ಕುತೂಹಲಕಾರಿಯಾಗಿ, ಭಾರತ ಈ ಪಂದ್ಯಕ್ಕೆ ನಾಲ್ವರು ಸ್ಪಿನ್ನರ್‌ಗಳು ಮತ್ತು ಇಬ್ಬರು ವೇಗಿಗಳೊಂದಿಗೆ ಕಣಕ್ಕಿಳಿದಿತ್ತು. ನ್ಯೂಜಿಲೆಂಡ್‌ನ ಒಂಬತ್ತು ವಿಕೆಟ್‌ಗಳನ್ನು ಸ್ಪಿನ್ನರ್‌ಗಳೇ ಉರುಳಿಸಿದ್ದು, ಗಂಭೀರ್ ಹಾಗೂ ರೋಹಿತ್ ತಂತ್ರಕ್ಕೆ ಫಲ ಸಿಕ್ಕಂತ್ತಾಗಿದೆ.

Source: https://tv9kannada.com/sports/cricket-news/india-wins-champions-trophy-match-new-zealand-psr-985754.html

Leave a Reply

Your email address will not be published. Required fields are marked *