India vs West Indies Test: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಭಾರಿ ಮುನ್ನಡೆ ಸಾಧಿಸಿದೆ. ಕೆಎಲ್ ರಾಹುಲ್, ಧ್ರುವ್ ಜುರೇಲ್ ಮತ್ತು ರವೀಂದ್ರ ಜಡೇಜಾ ಶತಕಗಳನ್ನು ಸಿಡಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ವೆಸ್ಟ್ ಇಂಡೀಸ್ ಅನ್ನು 162 ರನ್‌ಗಳಿಗೆ ಆಲೌಟ್ ಮಾಡಿದ ಭಾರತ, ಎರಡನೇ ದಿನದಾಟದ ಕೊನೆಗೆ 448 ರನ್‌ಗಳನ್ನು ಗಳಿಸಿ, 286 ರನ್‌ಗಳ ಪ್ರಬಲ ಮುನ್ನಡೆ ಪಡೆದುಕೊಂಡಿದೆ.
ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಭಾರಿ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ವೆಸ್ಟ್ ಇಂಡೀಸ್ ತಂಡವನ್ನು ಕೇವಲ 162 ರನ್‌ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಎರಡನೇ ದಿನದಾಟದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಕಲೆಹಾಕಿದೆ. ಈ ಮೂಲಕ 286 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಭಾರತದ ಪರ ಒಂದೇ ದಿನ ಮೂರು ಶತಕ ಸಿಡಿಸಿದ್ದು, ತಂಡದ ಬೃಹತ್ ಮುನ್ನಡೆಗೆ ಕಾರಣವಾಗಿದೆ.
ಎರಡನೇ ದಿನದಾಟದ ಆರಂಭಿದಲ್ಲಿ ಆರಂಭಿ ಕೆಎಲ್ ರಾಹುಲ್ ತಮ್ಮ ಟೆಸ್ಟ್ ವೃತ್ತಿಜೀವನದ 11ನೇ ಶತಕವನ್ನು ದಾಖಲಿಸಿದರು. ತಮ್ಮ ಇನ್ನಿಂಗ್ಸ್ನಲ್ಲಿ 197 ಎಸೆತಗಳನ್ನು ಎದುರಿಸಿದ ರಾಹುಲ್ 12 ಬೌಂಡರಿ ಸಹಿತ 100 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆ ನಂತರ ರಾಹುಲ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದ್ದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೇಲ್ ಕೂಡ ಎರಡನೇ ದಿನದಾಟದ ಮೂರನೇ ಸೆಷನ್ನಲ್ಲಿ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕವನ್ನು ಪೂರೈಸಿದರು.
ತಮ್ಮ ಇನ್ನಿಂಗ್ಸ್ನಲ್ಲಿ 210 ಎಸೆತಗಳನ್ನು ಎದುರಿಸಿದ ಜುರೇಲ್ 15 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 125 ರನ್ ಬಾರಿಸಿ ಔಟಾದರು. ಇವರಿಬ್ಬರ ಬಳಿಕ ತಾನೇನು ಕಡಿಮೆ ಎಂಬುವಂತೆ ಬ್ಯಾಟ್ ಬೀಸಿದ ಉಪನಾಯಕ ರವೀಂದ್ರ ಜಡೇಜಾ ಕೂಡ ತಮ್ಮ ಟೆಸ್ಟ್ ವೃತ್ತಿಜೀವನದ 6ನೇ ಶತಕವನ್ನು ದಾಖಲಿಸಿದರು. ಮಾತ್ರವಲ್ಲದೆ ಧ್ರುವ್ ಜುರೇಲ್ ಅವರೊಂದಿಗೆ ಐದನೇ ವಿಕೆಟ್‌ಗೆ 206 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.
ಎರಡನೇ ದಿನದಾಟದಂತ್ಯಕ್ಕೆ ಅಜೇಯರಾಗಿ ಉಳಿದಿರುವ ಜಡೇಜಾ 176 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 104 ರನ್ ಬಾರಿಸಿದ್ದಾರೆ. ಇನ್ನು ಟೀಂ ಇಂಡಿಯಾದ ಮೊದಲ ಇನ್ನಿಂಗ್ಸ್ ಬಗ್ಗೆ ಹೇಳುವುದಾದರೆ.. ಇದುವರೆಗೆ ತಂಡದಿಂದ 3 ಶತಕ ಹಾಗೂ 1ಅರ್ಧಶತಕ ಸಿಡಿದಿದೆ. ನಾಯಕ ಶುಭ್ಮನ್ ಗಿಲ್ ಕೂಡ ವಿಂಡೀಸ್ ವಿರುದ್ಧ ಅರ್ಧಶತಕದ ಕಾಣಿಕೆ ನೀಡಿದ್ದಾರೆ. ಉಳಿದಂತೆ ಯಶಸ್ವಿ ಜೈಸ್ವಾಲ್ 36 ರನ್, ಸಾಯಿ ಸುದರ್ಶನ್ 7 ರನ್ ಹಾಗೂ ವಾಷಿಂಗ್ಟನ್ ಸುಂದರ್ ಅಜೇಯ 9 ರನ್ ಬಾರಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Views: 8