IND W vs IRE W: ಭಾರತಕ್ಕೆ 304 ರನ್​ಗಳ ದಾಖಲೆಯ ಜಯ; ಸರಣಿ ಕ್ಲೀನ್ ಸ್ವೀಪ್.

IND W vs IRE W: ಐರ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಮಹಿಳಾ ತಂಡ 304 ರನ್‌ಗಳ ಗೆಲುವು ದಾಖಲಿಸಿದೆ. ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ. ಅದೇ ಸಮಯದಲ್ಲಿ ಭಾರತ ತಂಡವು ಈ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಕೊಂಡಿದೆ.

ರಾಜ್‌ಕೋಟ್‌ನಲ್ಲಿ ನಡೆದ ಭಾರತ ಹಾಗೂ ಐರ್ಲೆಂಡ್ ಮಹಿಳಾ ತಂಡಗಳ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವಲ್ಲಿ ಆತಿಥೇಯ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಕೇವಲ 131 ರನ್​ಗಳಿಗೆ ಆಲೌಟ್ ಮಾಡಿದ ಸ್ಮೃತಿ ಮಂಧಾನ ಪಡೆ ಬರೋಬ್ಬರಿ 304 ರನ್​ಗಳ ದಾಖಲೆಯ ಜಯ ದಾಖಲಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಐರ್ಲೆಂಡ್ ವಿರುದ್ಧದ ತನ್ನ ಪಾರುಪತ್ಯವನ್ನು ಟೀಂ ಇಂಡಿಯಾ ಮುಂದುವರೆಸಿದಂತ್ತಾಗಿದೆ. ಈ ಮೊದಲು ನಡೆದಿದ್ದ ಎರಡು ಪಂದ್ಯಗಳನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿದ್ದ ಭಾರತ ಮಹಿಳಾ ತಂಡ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ಕೈವಶ ಮಾಡಿಕೊಂಡಿತ್ತು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಭಾರಿ ಜಯ ದಾಖಲಿಸುವುದರೊಂದಿಗೆ ಸರಣಿಯನ್ನು 3-0 ಅಂತರದಲ್ಲಿ ಗೆದ್ದುಬೀಗಿದೆ.

435 ರನ್​ಗಳ ಬೃಹತ್ ಟಾರ್ಗೆಟ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 50 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ ದಾಖಲೆಯ 435 ರನ್ ಕಲೆಹಾಕಿತು. ತಂಡದ ಪರ ಆರಂಭಿಕರಾದ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ಶತಕ ಸಿಡಿಸಿದರೆ, ವಿಕೆಟ್ ಕೀಪರ್ ರಿಚಾ ಘೋಷ್ ಕೂಡ ಅರ್ಧಶತಕ ದಾಖಲಿಸಿದರು. ಈ ಮೂಲಕ ಭಾರತ ಮಹಿಳಾ ಏಕದಿನದಲ್ಲಿ 400 ಸ್ಕೋರ್ ದಾಟಿದ ಏಷ್ಯಾದ ಮೊದಲ ತಂಡ ಎಂಬ ಇತಿಹಾಸವನ್ನು ಸೃಷ್ಟಿಸಿತು. ಇದಲ್ಲದೆ ಕಳೆದ ಪಂದ್ಯದಲ್ಲೂ ಟೀಂ ಇಂಡಿಯಾ 350ಕ್ಕೂ ಹೆಚ್ಚು ರನ್ ಗಳಿಸಿತ್ತು.

131 ರನ್​ಗಳಿಗೆ ಆಲೌಟ್

ಈ ದೊಡ್ಡ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಇಡೀ ತಂಡ ಕೇವಲ 31.4 ಓವರ್‌ಗಳನ್ನು ಮಾತ್ರ ಆಡಲಷ್ಟೇ ಶಕ್ತವಾಗಿ 131 ರನ್​ಗಳಿಗೆ ಆಲೌಟ್ ಆಯಿತು. ಭಾರತದ ಭಿಗಿ ಬೌಲಿಂಗ್​ಗೆ ನಲುಗಿದ ಐರೀಶ್ ತಂಡದ ಪರ ಯಾವುದೇ ಬ್ಯಾಟರ್​ಗೆ 50 ರನ್ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಇತ್ತ ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ ಗರಿಷ್ಠ 3 ವಿಕೆಟ್ ಪಡೆದರೆ, ತನುಜಾ ಕನ್ವರ್ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಟಿಟಾಸ್ ಸಾಧು, ಸಯಾಲಿ ಸತ್ಘರೆ, ಮಿನ್ನು ಮಣಿ ತಲಾ 1 ವಿಕೆಟ್ ಪಡೆದರು.

ದಾಖಲೆಯ ಜೊತೆಯಾಟ

ಈ ಪಂದ್ಯದಲ್ಲಿ ಪ್ರತೀಕಾ ರಾವಲ್ ಮತ್ತು ಸ್ಮೃತಿ ಮಂಧಾನ ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್ ಆಗಿದ್ದರು. ಮೊದಲ ವಿಕೆಟ್‌ಗೆ ಈ ಇಬ್ಬರ ನಡುವೆ 233 ರನ್‌ಗಳ ಜೊತೆಯಾಟವಿತ್ತು. ಈ ವೇಳೆ ಪ್ರತೀಕಾ ರಾವಲ್ 129 ಎಸೆತಗಳಲ್ಲಿ 20 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡಂತೆ 154 ರನ್ ಗಳಿಸಿದರೆ, ನಾಯಕಿ ಸ್ಮೃತಿ ಮಂಧಾನ 80 ಎಸೆತಗಳಲ್ಲಿ 135 ರನ್‌ಗಳ ಬಿರುಗಾಳಿಯ ಇನ್ನಿಂಗ್ಸ್ ಆಡಿದರು. ಇದರೊಂದಿಗೆ ಏಕದಿನದಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಈ ಇನ್ನಿಂಗ್ಸ್‌ನಲ್ಲಿ ಅವರು 12 ಬೌಂಡರಿ ಮತ್ತು 7 ಸಿಕ್ಸರ್‌ಗಳನ್ನು ಬಾರಿಸಿದರು.

Source : https://tv9kannada.com/sports/cricket-news/ind-w-vs-ire-w-india-women-beat-ireland-by-304-runs-clinch-the-series-psr-964424.html

Leave a Reply

Your email address will not be published. Required fields are marked *