IML 2025: ಸಚಿನ್, ಯುವಿ ಸಿಡಿಲಬ್ಬರ; ಆಸ್ಟ್ರೇಲಿಯಾವನ್ನು ಬಗ್ಗುಬಡಿದು ಫೈನಲ್​ಗೇರಿದ ಇಂಡಿಯಾ.

ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಅಂತರರಾಷ್ಟ್ರೀಯ ಮಾಸ್ಟರ್ಸ್​ ಲೀಗ್ ಟಿ20 ಲೀಗ್​ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ನಾಯಕತ್ವದ ಇಂಡಿಯಾ ಮಾಸ್ಟರ್ಸ್​ ತಂಡವು, ಶೇನ್ ವಾಟ್ಸನ್ ನಾಯಕತ್ವದ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡವನ್ನು ಹೀನಾಯವಾಗಿ ಮಣಿಸಿ ಮೊದಲ ತಂಡವಾಗಿ ಫೈನಲ್​ಗೇರಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್​ ತಂಡ 20 ಓವರ್‌ಗಳಲ್ಲಿ 220 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡ, ಇಂಡಿಯಾ ಬೌಲರ್​ಗಳ ಮಾರಕ ದಾಳಿಗೆ ತತ್ತರಿಸಿ ಕೇವಲ 126 ರನ್​ಗಳಿಗೆ ಆಲೌಟ್ ಆಯಿತು.

ಭಾರತಕ್ಕೆ ಆರಂಭಿಕ ಆಘಾತ

ಈ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಇಂಡಿಯಾ ಮಾಸ್ಟರ್ಸ್​ ತಂಡಕ್ಕೆ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಅಂಬಾಟಿ ರಾಯುಡು ಕೇವಲ 5 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಜೊತೆಯಾದ ನಾಯಕ ಸಚಿನ್ ತೆಂಡೂಲ್ಕರ್ ಹಾಗೂ ಪವನ್ ನೇಗಿ 46 ರನ್​ಗಳ ಜೊತೆಯಾಟ ಕಟ್ಟಿದರು. ಈ ವೇಳಿ ನೇಗಿ 14 ರನ್ ಬಾರಿಸಿ ಔಟಾದರು.

ಸಚಿನ್- ಯುವಿ ಸ್ಫೋಟಕ ಬ್ಯಾಟಿಂಗ್

ನಂತರ ಬಂದ ಯುವರಾಜ್ ಸಿಂಗ್ ತಮ್ಮ ಹೊಡಿಬಡಿ ಆಟದ ಮೂಲಕ ಬೌಂಡರಿಗಳ ಮಳೆಗರೆದರು. ಯುವಿ ಕೇವಲ 30 ಎಸೆತಗಳಲ್ಲಿ 1 ಬೌಂಡರಿ ಹಾಗೂ 7 ಭರ್ಜರಿ ಸಿಕ್ಸರ್​ಗಳ ಸಹಿತ 59 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಆದರೆ ಯುವಿ ವಿಕೆಟ್ ಪತನಕ್ಕೂ ಮುನ್ನ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ನಾಯಕ ಸಚಿನ್ ಕೂಡ 30 ಎಸೆತಗಳಲ್ಲಿ 7 ಬೌಂಡರಿಗಳ ಸಹಿತ 42 ರನ್ ಬಾರಿಸಿ ಬ್ಯಾಟ್ ಎತ್ತಿಟ್ಟರು. ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಸ್ಟುವರ್ಟ್​ ಬಿನ್ನಿ 36 ರನ್, ಯೂಸುಫ್ ಪಠಾಣ್ 36 ರನ್, ಇರ್ಫಾನ್ ಪಠಾಣ್ 19 ರನ್ ಬಾರಿಸಿ ತಂಡವನ್ನು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 220 ರನ್​ಗಳಿಗೆ ಕೊಂಡೊಯ್ದರು.

ತತ್ತರಿಸಿದ ಆಸ್ಟ್ರೇಲಿಯಾ ಇನ್ನಿಂಗ್ಸ್

ಗೆಲ್ಲಲು 221 ರನ್​ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡಕ್ಕೆ ಯಾವ ಹಂತದಲ್ಲೂ ಒಂದು ಉತ್ತಮ ಜೊತೆಯಾಟ ಸಿಕ್ಕಲಿಲ್ಲ. ತಂಡ 15 ರನ್​ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆ ನಂತರ ಶಾನ್ ಮಾರ್ಷ್, ಬೆನ್ ಡಂಕ್ ಹಾಗೂ ನಾಥನ್ ರಿಯರ್ಡನ್ ತಲಾ 21 ರನ್​ಗಳನ್ನು ಕಲೆಹಾಕಿ ಇನ್ನಿಂಗ್ಸ್ ನಿಭಾಯಿಸುವ ಕೆಲಸಕ್ಕೆ ಮುಂದಾದರಾದರೂ ಅದಕ್ಕೆ ಭಾರತದ ಬೌಲರ್​ಗಳು ಅವಕಾಶ ನೀಡಲಿಲ್ಲ. ತಂಡದ ಪರ ಏಕಾಂಗಿ ಹೋರಾಟ ನಿಡಿದ ಬೆನ್ ಕಟ್ಟಿಂಗ್ 39 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಆಸ್ಟ್ರೇಲಿಯಾ ಮಾಸ್ಟರ್ಸ್​ ತಂಡ 18.1 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಲಷ್ಟೇ ಶಕ್ತವಾಗಿ 94 ರನ್​ಗಳಿಂದ ಸೋಲೊಪ್ಪಿಕೊಂಡಿತು.

Source : https://tv9kannada.com/sports/cricket-news/sachin-tendulkar-leads-india-to-t20-masters-final-psr-991128.html

Leave a Reply

Your email address will not be published. Required fields are marked *