ಜಪಾನ್‌ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ: ನೀತಿ ಆಯೋಗ

WORLDS 4TH LARGEST ECONOMY : ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಮೂರು ವರ್ಷಗಳಲ್ಲಿ ಮೂರನೇ ಸ್ಥಾನವನ್ನು ತಲುಪಲಿದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ.

ನವದೆಹಲಿ: ಭಾರತವು ಅಧಿಕೃತವಾಗಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ. ಇದು ಆರ್ಥಿಕ ಹಾದಿಯಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಪ್ರತಿನಿಧಿಸುತ್ತದೆ ಎಂದು ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಹೇಳಿದ್ದಾರೆ.

ನೀತಿ ಆಯೋಗದ 10 ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಇತ್ತೀಚಿನ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಭಾರತವು $4 ಟ್ರಿಲಿಯನ್ ಒಟ್ಟು ದೇಶೀಯ ಉತ್ಪನ್ನವನ್ನು (GDP) ಹೊಂದಿದೆ ಎಂದು ತಿಳಿಸಿದ್ದಾರೆ.

ಐಎಂಎಫ್ ದತ್ತಾಂಶವನ್ನು ಉಲ್ಲೇಖಿಸಿದ ಅವರು, ಇದೀಗ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ಜರ್ಮನಿ ದೇಶಗಳು ಮಾತ್ರ ಭಾರತಕ್ಕಿಂತ ಮುಂದಿವೆ. ಮುಂದಿನ ಮೂರು ವರ್ಷಗಳಲ್ಲಿ ನಾವು ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುತ್ತೇವೆ ಎಂಬ ಭರವಸೆಯನ್ನು ನೀಡಿದ್ದಾರೆ.

‘ಕಳೆದ ಹತ್ತು ವರ್ಷಗಳಲ್ಲಿ, ರಾಜ್ಯಗಳು ಕೇವಲ ಅನುಷ್ಠಾನಗೊಳಿಸಲಷ್ಟೇ ಸೀಮಿತವಾಗದೇ ಕಾರ್ಯತಂತ್ರದ ಪಾಲುದಾರರಾಗುವ ವೇದಿಕೆಯನ್ನು ನಾವು ರಚಿಸಿದ್ದೇವೆ’ ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.

“ವಿಕಸಿತ್ ಭಾರತ್@2047 ಕೇವಲ ಮಹತ್ವಾಕಾಂಕ್ಷೆಯಲ್ಲ, ಸಾಧಿಸಬಹುದಾದದ್ದು ಎಂಬ ವಿಶ್ವಾಸವನ್ನು ನಮಗೆ ನೀಡುತ್ತದೆ” ಎಂದು ತಿಳಿಸಿದ್ದಾರೆ.

“ವಿಕಸಿತ್ ಭಾರತ@2047” ಎಂಬ ಘೋಷಣೆ ಕೇವಲ ಒಂದು ಘೋಷಣೆಯಲ್ಲ. ಅದರ ಹಿಂದೆ ಒಂದು ಕ್ರಮಬದ್ಧ, ವಿಕೇಂದ್ರೀಕೃತ ಯೋಜನಾ ಕಸರತ್ತು ಇದೆ. 17 ರಾಜ್ಯಗಳು ಈಗಾಗಲೇ ತಮ್ಮ ವಿಷನ್ 2047 ದಾಖಲೆಗಳನ್ನು ಸಿದ್ಧಪಡಿಸಿವೆ. ಗುಜರಾತ್, ಆಂಧ್ರಪ್ರದೇಶ, ಉತ್ತರ ಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಮುಂಚೂಣಿಯಲ್ಲಿವೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದು, ‘ನಾವು ಇದನ್ನು ಜನರ ಚಳುವಳಿಯಾಗಿ ಪರಿವರ್ತಿಸಬೇಕಾಗಿದೆ. ಪ್ರತಿಯೊಂದು ರಾಜ್ಯವು ವಿಕಸಿತವಾದಾಗ, ಭಾರತವು ಸ್ವಯಂಚಾಲಿತವಾಗಿ ವಿಕಸಿತವಾಗುತ್ತದೆ’ ಎಂದು ಹೇಳಿದ್ದಾರೆ.

‘ಭವಿಷ್ಯಕ್ಕೆ ಸಿದ್ಧವಾಗಿರುವ ನಗರಗಳಿಗೆ ನಾವು ಯೋಜನೆ ರೂಪಿಸಬೇಕು. ಬೆಳವಣಿಗೆ, ನಾವೀನ್ಯತೆ ಮತ್ತು ಸುಸ್ಥಿರತೆಯು ಇಂಜಿನ್ ಆಗಿರಬೇಕು” ಎಂದು ಪ್ರಧಾನಿ ತಿಳಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಪ್ರಗತಿಪರ ಕಾನೂನುಗಳು ಮತ್ತು ನೀತಿ ಮಧ್ಯಸ್ಥಿಕೆಗಳ ಮೂಲಕ ಮಹಿಳೆಯರನ್ನು ಕಾರ್ಯಪಡೆಯಲ್ಲಿ ಸಂಯೋಜಿಸಲು ಕರೆ ನೀಡಿದ ಅವರು, ಮಹಿಳೆಯರು ಗೌರವಯುತವಾಗಿ ಮತ್ತು ಸುರಕ್ಷಿತವಾಗಿ ಕಾರ್ಯಪಡೆಯಲ್ಲಿ ಭಾಗವಹಿಸಲು ನಾವು ಸಾಧ್ಯವಾಗಿಸಬೇಕು ಎಂದು ಹೇಳಿದ್ದಾರೆ.

ETV Bharat

Leave a Reply

Your email address will not be published. Required fields are marked *