ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯವು ಗುರುವಾರ, ಅಕ್ಟೋಬರ್ 23, 2025 ರಂದು ಐತಿಹಾಸಿಕ ಅಡಿಲೇಡ್ (Adelaide) ಓವಲ್‌ನಲ್ಲಿ ನಡೆಯಲಿದೆ. ಸರಣಿಯಲ್ಲಿ 0-1 ಹಿನ್ನಡೆಯಲ್ಲಿರುವ ಭಾರತ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಏಕೆಂದರೆ ಭಾರತ ತಂಡವು ಮೊದಲ ಪಂದ್ಯವನ್ನು ಏಳು ವಿಕೆಟ್‌ಗಳಿಂದ ಸೋತಿತು. ಹೀಗಾಗಿ ಗಿಲ್ ಪಡೆ ಸರಣಿಯಲ್ಲಿ ಉಳಿಯಬೇಕಾದರೆ ಗೆಲುವು ಅತ್ಯಗತ್ಯ. ವಾಸ್ತವವಾಗಿ ಮೊದಲ ಪಂದ್ಯದಲ್ಲಿ ಮಳೆ ಖಳನಾಯಕನ ಪಾತ್ರವನ್ನು ನಿರ್ವಹಿಸಿತು.
ಭಾರತದ ಬ್ಯಾಟಿಂಗ್ ವೇಳೆ ಪದೇ ಪದೇ ಆಟಕ್ಕೆ ಅಡ್ಡಪಡಿಸಿದ ವರುಣ ರಾಯ, ಆಟಗಾರರು ಲಯ ಕಂಡುಕೊಳ್ಳಲು ಬಿಡಲಿಲ್ಲ. ಇದರ ಲಾಭ ಪಡೆದ ಆಸ್ಟ್ರೇಲಿಯಾ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತ್ತು. ಇದೀಗ 2ನೇ ಏಕದಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸುತ್ತಾ? ಅಡಿಲೇಡ್‌ನಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಭಾರತ- ಆಸ್ಟ್ರೇಲಿಯಾ ಮುಖಾಮುಖಿ
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇಲ್ಲಿಯವರೆಗೆ 159 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ ಆಸ್ಟ್ರೇಲಿಯಾದ ದಾಖಲೆ ಭಾರತಕ್ಕಿಂತ ಭಾರವಾಗಿದೆ. ಆಸ್ಟ್ರೇಲಿಯಾ 85 ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿದರೆ, ಭಾರತ 58 ಪಂದ್ಯಗಳನ್ನು ಗೆದ್ದಿದೆ. 10 ಪಂದ್ಯಗಳು ಡ್ರಾದಲ್ಲಿ ಅಥವಾ ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಅಡಿಲೇಡ್ ಹವಾಮಾನ ಮುನ್ಸೂಚನೆ
ಅಕ್ಯೂವೆದರ್ ಪ್ರಕಾರ, ಅಕ್ಟೋಬರ್ 23, 2025 ರಂದು ಅಡಿಲೇಡ್‌ನ ಹವಾಮಾನ ಮುನ್ಸೂಚನೆಯ ಪ್ರಕಾರ, ದಿನವಿಡೀ ಯಾವುದೇ ಮಳೆಯಾಗುವ ಸಾಧ್ಯತೆಗಳಿಲ್ಲ. ಅಂದರೆ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ತಾಪಮಾನವು 11 ರಿಂದ 20 ಡಿಗ್ರಿ ಸೆಲ್ಸಿಯಸ್ ನಡುವೆ ಇರುವ ನಿರೀಕ್ಷೆಯಿದೆ. ಮಳೆಯಾಗುವ ಸಾಧ್ಯತೆ ಕೇವಲ ಒಂದು ಪ್ರತಿಶತ ಮಾತ್ರ. ಇದಕ್ಕೆ ವ್ಯತಿರಿಕ್ತವಾಗಿ, ಪರ್ತ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯಕ್ಕೆ ಮಳೆ ಹಲವಾರು ಬಾರಿ ಅಡ್ಡಿಪಡಿಸಿತು.
ಅಡಿಲೇಡ್ ಪಿಚ್ ವರದಿ
ಅಡಿಲೇಡ್ ಓವಲ್ ಪಿಚ್ ಬ್ಯಾಟಿಂಗ್ ಮತ್ತು ಬಾಲಿಂಗ್ ಎರಡಕ್ಕೂ ಸಮನಾಗಿ ಸಹಾಯ ಮಾಡಲಿದೆ. ಈ ಮೈದಾನದಲ್ಲಿ ನಡೆದ ಇತ್ತೀಚಿನ ಪಂದ್ಯಗಳಲ್ಲಿ, ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಅನುಕೂಲಕರವಾಗಿರುವುದನ್ನು ಗಮನಿಸಬಹುದು. ಇದು ಉತ್ತಮ ಬೌನ್ಸ್ ಮತ್ತು ಸ್ಪಿನ್ನರ್‌ಗಳಿಗೆ ಸ್ವಲ್ಪ ಸಹಾಯವನ್ನು ನೀಡುತ್ತದೆ. ಆದಾಗ್ಯೂ, ಪಂದ್ಯ ಮುಂದುವರೆದಂತೆ, ಇದು ಹೆಚ್ಚು ಬ್ಯಾಟಿಂಗ್ ಸ್ನೇಹಿಯಾಗಬಹುದು. ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಬಹುದು.
ಅಡಿಲೇಡ್‌ನಲ್ಲಿ ಭಾರತದ ದಾಖಲೆ
50 ಓವರ್‌ಗಳ ಮಾದರಿಯಲ್ಲಿ ಭಾರತ ತಂಡ ಅಡಿಲೇಡ್ ಓವಲ್‌ನಲ್ಲಿ ಮೇಲುಗೈ ಸಾಧಿಸಿದೆ. 2015 ರ ಐಸಿಸಿ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಗೆಲುವು ಸೇರಿದಂತೆ ಅಡಿಲೇಡ್ ಓವಲ್‌ನಲ್ಲಿ ಭಾರತ ಆಡಿದ 15 ಪಂದ್ಯಗಳಲ್ಲಿ ಒಂಬತ್ತು ಪಂದ್ಯಗಳನ್ನು ಗೆದ್ದಿದೆ.
ಸಂಭಾವ್ಯ ಪ್ಲೇಯಿಂಗ್ 11
ಭಾರತದ ಸಂಭಾವ್ಯ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಶುಭ್ಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಆಸ್ಟ್ರೇಲಿಯಾದ ಸಂಭಾವ್ಯ ಪ್ಲೇಯಿಂಗ್ 11: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್ಶಾ, ಕೂಪರ್ ಕಾನೊಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹೇಜಲ್‌ವುಡ್.
Views: 6