
ಲೀಡ್ಸ್: ಭಾರತ ತಂಡ ಮೊದಲ ಟೆಸ್ಟ್‌ನ ನಾಲ್ಕನೇ ದಿನವಾದ ಸೋಮವಾರ ಕಠಿಣ ಪರೀಕ್ಷೆ ಎದುರಿಸಿತ್ತು. ಆದರೆ ಕೆ.ಎಲ್.ರಾಹುಲ್ ಮತ್ತು ರಿಷಭ್ ಪಂತ್ ಅವರು ಅಮೋಘ ಶತಕಗಳನ್ನು ಬಾರಿಸಿ ಅನುಭವಿ ಆಟಗಾರರ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದರು. ಈಗ ತಂಡ ಮನೋಬಲ ಹೆಚ್ಚಿಸುವಂಥ ಗೆಲುವಿಗೆ ಪ್ರಯತ್ನಿಸುವ ಸ್ಥಿತಿಗೆ ತಲುಪಿದೆ.
ತಂಪಾದ ಗಾಳಿ ಬೀಸುತ್ತಿದ್ದ ವಾತಾವರಣದಲ್ಲಿ, ಕಾವೇರಿದ ಇಂಗ್ಲೆಂಡ್ ದಾಳಿಯನ್ನು ಎದುರಿಸುವಾಗ ಕೊಂಚ ಎಡವಟ್ಟಾದರೂ ಅಪಾಯ ಎದುರಾಗುವ ಸಾಧ್ಯತೆಯಿತ್ತು. ಆದರೆ ಮಾಜಿ ನಾಯಕ ರಾಹುಲ್ (ಬ್ಯಾಟಿಂಗ್ 120, 227ಎ, 4×15) ಮತ್ತು ಹಾಲಿ ಉಪನಾಯಕ ಪಂತ್ (118, 140ಎ, 4×15, 6×3) ಅನುಭವಿ ಯೋಧರ ರೀತಿ ಹೋರಾಡಿದರು; ಗುಣಮಟ್ಟದ ಶತಕ ದಾಖಲಿಸಿದರು. ಚಹಾ ವೇಳೆಗೆ ಭಾರತ 4 ವಿಕೆಟ್‌ಗೆ 298 (ಮೊದಲ ಇನಿಂಗ್ಸ್ ಮುನ್ನಡೆ ಸೇರಿ 304) ರನ್ ಗಳಿಸಿದೆ.
ಬೆಳಿಗ್ಗೆ ಏಳು ಎಸೆತಗಳಾಗುವಷ್ಟರಲ್ಲಿ ತಂಡವು ನಾಯಕ ಶುಭಮನ್ ಗಿಲ್ ಅವರನ್ನು ಕಳೆದುಕೊಂಡಿತ್ತು. ಅವರು ವೇಗಿ ಬ್ರೈಡನ್ ಕಾರ್ಸ್ ಬೌಲಿಂಗ್‌ನಲ್ಲಿ ಚೆಂಡನ್ನು ಸ್ಟಂಪ್ಸ್‌ಗೆ ಎಳೆದುಕೊಂಡರು. ಅನನುಭವಿ ಎನ್ನಬಹುದಾದ ಇಂಗ್ಲೆಂಡ್ ದಾಳಿಗೆ ಅವಕಾಶದ ವಾಸನೆ ಬಡಿದಿತ್ತು. ತಂಡದ ಅನುಭವಿ ವೇಗಿ ವೋಕ್ಸ್ ಮತ್ತು ಯುವ ಬೌಲರ್ ಕಾರ್ಸ್ ಬ್ಯಾಟರ್‌ಗಳ ಸಹನೆ ಮತ್ತು ರಕ್ಷಣೆ ಪರೀಕ್ಷಿಸಿದರು. ಬೆನ್ ಸ್ಟೋಕ್ಸ್ ಮತ್ತು ಜೋಶ್ ಟಂಗ್ ಅವರನ್ನು ಸೇರಿಕೊಂಡರು. ಸ್ಪಿನ್ನರ್ ಶೋಯೆಬ್ ಬಶೀರ್ ಕೂಡ ಬಿಗುವಾಗಿ ಬೌಲ್ ಮಾಡಿದ್ದರು. ಆದರೆ ಭಾರತದ ಆಟಗಾರರು ತಾಳ್ಮೆ ಕಳೆದುಕೊಳ್ಳಲಿಲ್ಲ.
33 ವರ್ಷ ವಯಸ್ಸಿನ ರಾಹುಲ್ ಆಟ ಶ್ರೇಷ್ಠ ದರ್ಜೆಯದಾಗಿತ್ತು. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ 27 ವರ್ಷ ವಯಸ್ಸಿನ ಪಂತ್ ಕೆಲವು ಸಾಹಸದ ಹೊಡೆತಗಳಿಗೆ ಹೋಗಿ ತಂಡದ ಆಟಗಾರರ ಎದೆಬಡಿತ ಹೆಚ್ಚಿಸಿದರು. ಕೆಲವು ಬಾರಿ ಅಪಾಯ ಆಹ್ವಾನಿಸಿದಂತೆ ಕಂಡರೂ ವಿಕೆಟ್ ಉಳಿಸಿಕೊಂಡರು.
ಲಂಚ್‌ಗೆ ಮೊದಲು ಭಾರತದ ರನ್ ವೇಗ ಆಮೆಗತಿಯಲ್ಲಿದ್ದು 24.1 ಓವರುಗಳಲ್ಲಿ 63 ರನ್‌ಗಳು ಬಂದಿದ್ದವು. ಪಂದ್ಯದಲ್ಲಿ ಮೊದಲ ಬಾರಿ ರನ್‌ವೇಗ ಈ ಪ್ರಮಾಣಕ್ಕೆ ಇಳಿದಿತ್ತು. ಆದರೆ ನಂತರ ಇಬ್ಬರೂ ವಿಶ್ವಾಸ ಗಳಿಸಿಕೊಂಡರು. ರನ್‌ಗಳು ಹರಿಯತೊಡಗಿದವು. ರಾಹುಲ್ ಅವರ ಡ್ರೈವ್ ಮತ್ತು ಕಟ್‌ಗಳು ಆಕರ್ಷಕವಾಗಿದ್ದವು. ಪಂತ್ ಎಂದಿನಂತೆ ಮುನ್ನುಗ್ಗಿ ಮೂರು ಸಿಕ್ಸರ್‌ಗಳನ್ನೂ ಬಾರಿಸಿದರು.
ಟೆಸ್ಟ್ ಜೀವನದಲ್ಲಿ ಏಳುಬೀಳು ಕಂಡಿರುವ ರಾಹುಲ್ ಮೊದಲನೆಯವರಾಗಿ ಶತಕ ದಾಟಿದರು. ‘ನರ್ವಸ್ ನೈಂಟೀಸ್’ ಅವಧಿಯಲ್ಲಿ 26 ಎಸೆತ ಎದುರಿಸಿದ್ದ ಪಂತ್ ನಂತರ ಶತಕ ಗಳಿಸಿ ಸಂಭ್ರಮಿಸಿದರು. ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎನಿಸಿದರು. ಈ ಬಾರಿ ಅವರು ಲಾಗ ಹಾಕಲಿಲ್ಲ. ಲಾಗ್ ಹಾಕುವಂತೆ ಸ್ಟ್ಯಾಂಡ್‌ನಲ್ಲಿದ್ದ ಸುನೀಲ್ ಗಾವಸ್ಕರ್ ಇಶಾರೆ ಮಾಡಿದರೂ, ‘ಮುಂದಿನ ಬಾರಿ’ ಎಂಬ ಸಂಜ್ಞೆ ಮಾಡಿದರು. ಪಂತ್ ಜೊತೆಗೆ ರಾಹುಲ್ ನಾಲ್ಕನೇ ವಿಕೆಟ್‌ಗೆ 198 ರನ್ (283ಎ) ಸೇರಿಸಿದರು.
ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಭಾರತ 471. ಇಂಗ್ಲೆಂಡ್ 465. ಎರಡನೇ ಇನಿಂಗ್ಸ್: ಭಾರತ 75 ಓವರ್‌ಗಳಲ್ಲಿ 4 ವಿಕೆಟ್ 298 (ಟೀ ವಿರಾಮದ ವೇಳೆಗೆ) (ಕೆ.ಎಲ್.ರಾಹುಲ್ ಔಟಾಗದೇ 120, ರಿಷಭ್ ಪಂತ್ 118; ಬ್ರೈಡನ್ ಕಾರ್ಸ್ 62ಕ್ಕೆ 2)
ಫ್ಲವರ್ ಸಾಧನೆ ಸರಿಗಟ್ಟಿದ ಪಂತ್
ಪಂತ್ ಅವರು ಟೆಸ್ಟ್ ಪಂದ್ಯವೊಂದರ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್-ಬ್ಯಾಟರ್ ಎನಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಅವರು 134 ರನ್ ಬಾರಿಸಿದ್ದರು. 2001ರಲ್ಲಿ ಜಿಂಬಾಬ್ವೆಯ ಆಯಂಡಿ ಫ್ಲವರ್ ಹರಾರೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 141 ಮತ್ತು ಅಜೇಯ 199 ರನ್ ಗಳಿಸಿದ್ದರು.
2019ರಲ್ಲಿ ಸ್ಟೀವನ್ ಸ್ಮಿತ್ ನಂತರ ಆಂಗ್ಲರ ನೆಲದಲ್ಲಿ ಪಂದ್ಯವೊಂದರಲ್ಲಿ ಎರಡು ಶತಕ ಬಾರಿಸಿದ ಮೊದಲ ಬ್ಯಾಟರ್ ಎನಿಸಿದರು.
ಐದು ಮಂದಿ ಶತಕ: ಇದೇ ಮೊದಲು
ಒಂದೇ ಟೆಸ್ಟ್ ಪಂದ್ಯದಲ್ಲಿ ಭಾರತದ ಐದು ಮಂದಿ ಶತಕ ಬಾರಿಸಿದ್ದು ಇದೇ ಮೊದಲು. ಮೊದಲ ಇನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ಪಂತ್, ಎರಡನೇ ಇನಿಂಗ್ಸ್‌ನಲ್ಲಿ ಪಂತ್ ಮತ್ತು ರಾಹುಲ್ ಶತಕ ದಾಖಲಿಸಿದರು.
ಈ ಹಿಂದೆ ಆಸ್ಟ್ರೇಲಿಯಾ ತಂಡ ಮಾತ್ರ ದೇಶದಿಂದ ಹೊರಗೆ ಈ ಸಾಧನೆ ಮಾಡಿತ್ತು. 1951ರಲ್ಲಿ ಜಮೈಕಾದಲ್ಲಿ ಒಂದೇ ಇನಿಂಗ್ಸ್‌ನಲ್ಲಿ ಐವರು ಕಾಲಿನ್ ಮೆಕ್‌ಡೊನಾಲ್ಡ್, ನೀಲ್ ಹಾರ್ವಿ, ಕೀತ್ ಮಿಲ್ಲರ್, ರಾನ್ ಅರ್ಚರ್ ಮತ್ತು ರಿಚಿ ಬೆನೊ) ಶತಕ ಬಾರಿಸಿದ್ದರು.