India Vs New Zealand Final: ಅಬ್ಬಬ್ಬಾ ಲಾಭವೋ ಲಾಭ! 10 ಸೆಕೆಂಡ್‌ ಜಾಹೀರಾತಿಗೆ ಇಷ್ಟೊಂದು ದುಡ್ಡಾ?

ಹೈಲೈಟ್ಸ್‌:

  • ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ನೇರಪ್ರಸಾರದ ವೇಳೆಯ ಜಾಹೀರಾತಿನ ಬೆಲೆ ಏಕಾಏಕಿ ಡಬಲ್
  • ಕೇವಲ 10 ಸೆಕೆಂಡ್ ನ ಜಾಹೀಕಾತಿಗೆ 35 ಲಕ್ಷ ಡಿಮ್ಯಾಂಡ್ ಮಾಡುತ್ತಿರುವ ಜಿಯೋ ಹಾಟ್ ಸ್ಟಾರ್
  • ಬಲಿಷ್ಠ ಟೀಂ ಇಂಡಿಯಾ ಟೂರ್ನಮೆಂಟ್ ನ ಫೈನಲ್ ಗೆ ಏರಿದ್ದೇ ಏಕಾಏಕಿ ಜಾಹೀರಾತು ದರ ಏರಿಕೆಗೆ ಕಾರಣ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿರುವ ಪಾಕಿಸ್ತಾನ ಹಣೆ ಹಣೆ ಬಡಿದುಕೊಳ್ಳುತ್ತಿದ್ದರೆ ಅದರ ನೇರಪ್ರಸಾರದ ಹಕ್ಕು ಪಡೆದಿರುವ ಕಂಪನಿಗಳು ಕೋಟಿಗಟ್ಟಲೆ ದುಡ್ಡು ಬಾಚುತ್ತಿವೆ. ಭಾರತ ತಂಡ ಇದೀಗ ಫೈನಲ್ ಪ್ರವೇಶಿಸಿದ ಬಳಿಕವಂತೂ ಇಲ್ಲಿನ ಕ್ರಿಕೆಟ್ ಪ್ರೇಮಿಗಳು ಭಾನುವಾರದ ಪಂದ್ಯವನ್ನು ವೀಕ್ಷಿಸಲು ಚಾತಕ ಪಕ್ಷಿಯಂತೆ ಕಾದು ಕುಳಿತಿರುವುದರಿಂದ ಜಾಹೀರಾತಿಗೆ ಡಿಮ್ಯಾಂಡಿ ಕೂಡ ಹೆಚ್ಚಿದೆ. ಇದೇ ಸಂದರ್ಭವನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಿರುವ ಟಿವಿ, ಆ್ಯಪ್ ಕಂಪನಿಗಳು ಜಾಹೀರಾತಿನ ದರವನ್ನೂ ದ್ವಿಗುಣಗೊಳಿಸಿದ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ತಿಳಿಸಿದ.

ನೇರ ಪ್ರಸಾರದ ಹಕ್ಕು ಪಡೆದಿರುವ ಜಿಯೋ ಹಾಟ್ ಸ್ಟಾರ್‌ನಲ್ಲಿ 10 ಸೆಕೆಂಡ್‌ ಜಾಹೀರಾತಿನ ಮೌಲ್ಯವೀಗ ಏಕಾಏಕಿ 35 ಲಕ್ಷ ರೂಪಾಯಿಗೆ ಏರಿಕೆಯಾಗಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಒಂದು ಸಾವಿರ ವ್ಯೂಸ್‌ಗೆ (ಇಂಪ್ರೆಶನ್ಸ್‌) 725 ರೂ. ಆಗಿದೆ. ಇದರೊಂದಿಗೆ 19 ದಿನಗಳ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಜಿಯೋಸ್ಟಾರ್‌ ಒಟ್ಟು 1,800 ಕೋಟಿ ರೂಪಾಯಿ ಲಾಭ ಗಳಿಸಲಿದೆ ಎಂದು ವರದಿಗಳು ತಿಳಿಸಿವೆ.

ಭಾರತ ಫೈನಲ್ ಗೇರಿದ್ದೇ ಕಾರಣ!

ಮಿನಿ ವಿಶ್ವ ಕಪ್ ಎಂದೇ ಖ್ಯಾತವಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬರೋಬ್ಬರಿ ಎಂಟು ವರ್ಷಗಳ ಬಳಿಕ ಆಯೋಜನೆಗೊಂಡಿದೆ. ಇದರಲ್ಲಿ ಭಾರತವು ಫೈನಲ್‌ಗೆ ಲಗ್ಗೆ ಇಟ್ಟಿರುವುದೇ ಜಾಹೀರಾತು ಮೊತ್ತ ಜಾಸ್ತಿಯಾಗಿರುವುದು ಕಾರಣ ಎಂದು ತಿಳಿದುಬಂದಿದೆ.
ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಅಂಕಿಅಂಶಗಳ ಪ್ರಕಾರ, ಐಸಿಸಿ ಚಾಂಪಿಯನ್ಸ್ ಟ್ರೋಫಿಯು 10 ಪಂದ್ಯಗಳನ್ನು 2 ವರ್ಷಕ್ಕಿಂತ ಹೆಚ್ಚು ವಯಸ್ಸಿನ 20.4 ಕೋಟಿಗೂ ಅಧಿಕ ನಂದಿ ವೀಕ್ಷಿಸಿದ್ದಾರೆ. ಭಾರತ vs ಪಾಕಿಸ್ತಾನ ಪಂದ್ವೊಂದನ್ನೇ ಸುಮಾರು 15.4 ಕೋಟಿ ಮಂದಿ ವೀಕ್ಷಿಸಿದ್ದಾರೆ. ಟೂರ್ನಿಯಲ್ಲಿ ಒಟ್ಟು ಎರಡು ಪಂದ್ಯಗಳು ಮಳೆಯ ಕಾರಣದಿಂದಾಗಿ ಒಂದೇ ಒಂದು ಎಸೆತವನ್ನೂ ಕಾಣದೆ ರದ್ದಾದವು, ಜೊತೆಗೆ ಮತ್ತೊಂದು ಪಂದ್ಯ ನಡೆಯುತ್ತಿರುವ ವೇಳೆ ಮಳೆ ಸುರಿದಿದ್ದರಿಂದ ರದ್ದುಗೊಳಿಸಲಾಯಿತು. ಮೂರೂ ಪಂದ್ಯಗಳಲ್ಲೂ ಇತ್ತಂಡಗಳಿಗೂ ತಲಾ ಒಂದು ಅಂಕಗಳನ್ನು ಹಂಚಲಾಯಿತು. ಇಲ್ಲವಾಗಿದ್ದರೆ ವೀಕ್ಷಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿತ್ತು.

ಡಿಜಿಟಲ್ ಪ್ರೇಕ್ಷಕರ ಹೆಚ್ಚಳ

ಆ ಟೂರ್ನಿಯಲ್ಲಿ ಡಿಜಿಟಲ್ ಪ್ರೇಕ್ಷಕರ ಸಂಖ್ಯೆಯಂತೂ ಹೊಸ ದಾಖಲೆಯನ್ನೇ ನಿರ್ಮಿಸಿದೆ. ಜಿಯೋ ಹಾಟ್‌ಸ್ಟಾರ್‌ನಲ್ಲಿ ಒಟ್ಟು 60. 2 ಕೋಟಿ ಮಂದಿ ವೀಕ್ಷಿಸಿರುವುದೇ ಟಿವಿ ವೀಕ್ಷಕರು ಯಾವ ರೀತಿಯಲ್ಲಿ ಒಟಿಟಿಗೆ ಶಿಫ್ಟ್ ಆಗಿದ್ದಾರೆ ಎಂಬುದಕ್ಕೆ ಉದಾಹರಣೆಯಾಗಿದೆ.

ಇನ್ನು 15 ವರ್ಷಕ್ಕೆ ಮೇಲ್ಪಟ್ಟ ಪುರುಷ ವೀಕ್ಷಕರ ವಿಭಾಗದಲ್ಲಿ ಲೆಕ್ಕಾಚಾರ ಹಾಕುವುದಾದರೆ 10 ಪಂದ್ಯಗಳನ್ನು ಒಟ್ಟು 8.2 ಕೋಟಿ ಮಂದಿ ವೀಕ್ಷಿಸಿದ್ದಾರೆ. ಅದೇ ರೀತಿ ಭಾರತ vs ಪಾಕಿಸ್ತಾನ ಪಂದ್ಯವನ್ನು 6.4 ಕೋಟಿ ಮಂದಿ ವೀಕ್ಷಿಸಿದ್ದಾರೆ. ಇಷ್ಟೇ ಅಲ್ಲದೆ ಜಿಯೋ ಸ್ಟಾರ್ ಈಗ ಸಂಪರ್ಕಿತ ಟಿವಿ (ಸಿಟಿವಿ) ಯ 10 ಸೆಕೆಂಡ್ ಸ್ಪಾಟ್ ಗಾಗಿ 20 ಲಕ್ಷ ರೂಪಾಯಿ ಪಡೆಯುವ ಗುರಿಯನ್ನು ಹೊಂದಿದೆ. ಈ ಹಿಂದೆ ಈ ದರ 15 ಲಕ್ಷ ಇತ್ತು. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಲು ಜಿಯೋಸ್ಟಾರ್ ನಿರಾಕರಿಸಿದೆ.

Source : https://vijaykarnataka.com/sports/cricket/news/icc-champions-trophy-2025-match-advertisement-rates-increase-with-team-india-final-entry/articleshow/118769029.cms

Leave a Reply

Your email address will not be published. Required fields are marked *