IND vs ENG: ರಣ ರೋಚಕ ಪಂದ್ಯದಲ್ಲಿ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ಭಾರತ.

IND vs ENG: ಪುಣೆಯಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 15 ರನ್‌ಗಳ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಅವರ ಅದ್ಭುತ ಬ್ಯಾಟಿಂಗ್ ಮತ್ತು ವರುಣ್ ಚಕ್ರವರ್ತಿ ಹಾಗೂ ಹರ್ಷಿತ್ ರಾಣಾ ಅವರ ಅತ್ಯುತ್ತಮ ಬೌಲಿಂಗ್ ಗೆಲುವಿಗೆ ಕಾರಣವಾಯಿತು. ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಅವರ ಅರ್ಧಶತಕದ ಹೊರತಾಗಿಯೂ ಭಾರತ ತಂಡ ಗೆಲುವಿನತ್ತ ಸಾಗಿದೆ. ಈ ಗೆಲುವಿನೊಂದಿಗೆ ಭಾರತ 2019 ರಿಂದ ತವರಿನಲ್ಲಿ ನಡೆದ 17 ಟಿ20 ಸರಣಿಗಳನ್ನೂ ಗೆದ್ದಿದೆ.

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಟಿ20ಯಲ್ಲಿ ಭಾರತ ಅದ್ಭುತ ಜಯ ದಾಖಲಿಸುವ ಮೂಲಕ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ. ನಾಲ್ಕನೇ ಟಿ20ಯಲ್ಲಿ ಟೀಂ ಇಂಡಿಯಾ 15 ರನ್‌ಗಳ ಜಯ ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 181 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ 166 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಂ ಇಂಡಿಯಾ ಪರ ಬ್ಯಾಟಿಂಗ್​ನಲ್ಲಿ ಮಿಂಚಿದ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಹಾಗೂ ಬೌಲಿಂಗ್​ನಲ್ಲಿ ಮಿಂಚಿದ ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪುಣೆ ಟಿ20 ರೋಚಕತೆ

ಒಂದು ಹಂತದಲ್ಲಿ ಇಂಗ್ಲೆಂಡ್ ತಂಡ ಗೆಲುವಿನ ಹಾದಿಯಲ್ಲಿತ್ತು. ಹ್ಯಾರಿ ಬ್ರೂಕ್ ಕೇವಲ 26 ಎಸೆತಗಳಲ್ಲಿ 51 ರನ್ ಗಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನ ಹಾದಿಗೆ ತಂದರು. ಆದರೆ ವರುಣ್ ಚಕ್ರವರ್ತಿ ಒಂದೇ ಓವರ್‌ನಲ್ಲಿ ಹ್ಯಾರಿ ಬ್ರೂಕ್ ಮತ್ತು ಬ್ರೇಡನ್ ಕಾರ್ಸ್ ಅವರನ್ನು ಔಟ್ ಮಾಡುವ ಮೂಲಕ ಭಾರತದ ಕಡೆಗೆ ಪಂದ್ಯದ ದಿಕ್ಕನ್ನು ಬದಲಾಯಿಸಿದರು. ಇದಾದ ಬಳಿಕ ಹರ್ಷಿತ್ ರಾಣಾ 19ನೇ ಓವರ್‌ನಲ್ಲಿ ಕೇವಲ 6 ರನ್ ನೀಡಿ ಜೇಮಿ ಓವರ್​ಟನ್ ವಿಕೆಟ್ ಪಡೆದರು. ಕೊನೆಯ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಸಕೀಬ್ ಮಹಮೂದ್ ಅವರನ್ನು ಔಟ್ ಮಾಡಿ ಟೀಂ ಇಂಡಿಯಾಗೆ ಅಮೋಘ ಜಯ ತಂದುಕೊಟ್ಟರು.

ಭಾರತಕ್ಕೆ ಕಳಪೆ ಆರಂಭ

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾದ ಆರಂಭ ತುಂಬಾ ಕೆಟ್ಟದಾಗಿತ್ತು. ಎರಡನೇ ಓವರ್‌ನಲ್ಲಿಯೇ ತಂಡದ ಮೂರು ವಿಕೆಟ್‌ಗಳು ಪತನಗೊಂಡವು. ಆರಂಭಿಕ ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನು ಒಂದೇ ಓವರ್‌ನಲ್ಲಿ ಔಟ್ ಮಾಡುವ ಮೂಲಕ ಸಾಕಿಬ್ ಮಹಮೂದ್ ಸಂಚಲನ ಮೂಡಿಸಿದರು. ಇದಾದ ಬಳಿಕ ರಿಂಕು ಸಿಂಗ್ 30 ರನ್ ಗಳಿಸಿ ತಂಡದ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. ರಿಂಕು ಔಟಾದ ನಂತರ ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿದರು. ಇಬ್ಬರೂ ಆಟಗಾರರು ತಲಾ 53 ರನ್ ಕಲೆಹಾಕಿ ಟೀಂ ಇಂಡಿಯಾ 181 ರನ್‌ಗಳಿಗೆ ಕೊಂಡೊಯ್ದರು.

ದುಬೆ ಗಾಯ ಭಾರತಕ್ಕೆ ವರವಾಯ್ತು

ವಾಸ್ತವವಾಗಿ ಶಿವಂ ದುಬೆ ಬ್ಯಾಟಿಂಗ್ ಮಾಡುವಾಗ ಕೊನೆಯ ಓವರ್‌ನಲ್ಲಿ ಗಾಯಗೊಂಡರು. ಹೀಗಾಗಿ ಟೀಂ ಇಂಡಿಯಾ ಮ್ಯಾಚ್ ರೆಫರಿಯಿಂದ ಬದಲಿ ಆಟಗಾರನಿಗೆ ಲಿಖಿತ ಅರ್ಜಿ ಸಲ್ಲಿಸಿತ್ತು. ಈ ಮೂಲಕ ಆಡುವ ಅವಕಾಶ ಪಡೆದ ಹರ್ಷಿತ್ ರಾಣಾ 33 ರನ್ ನೀಡಿ 3 ವಿಕೆಟ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡವನ್ನು ಮಂಡಿಯೂರುವಂತೆ ಮಾಡಿದರು. ರಾಣಾ ಅಲ್ಲದೆ ಚಕ್ರವರ್ತಿ 2 ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಕೂಡ 3 ವಿಕೆಟ್ ಪಡೆದರು.

17 ಟಿ20 ಸರಣಿಗಳಲ್ಲಿ ಅಜೇಯ

ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ತನ್ನ ಪ್ರಾಬಲ್ಯವನ್ನು ಮುಂದುವರೆಸಿದ. 2019ರಿಂದ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಸೋಲು ಕಂಡಿಲ್ಲ. ಟೀಂ ಇಂಡಿಯಾ 2019 ರಿಂದ ಇದುವರೆಗೆ 17 ಟಿ20 ಸರಣಿಗಳನ್ನಾಡಿದ್ದು, ಎಲ್ಲಾ ಸರಣಿಗಳನ್ನು ಗೆದ್ದುಕೊಂಡಿದೆ.

Leave a Reply

Your email address will not be published. Required fields are marked *