ಭಾರತ – ಇಂಗ್ಲೆಂಡ್ 2ನೇ ಟೆಸ್ಟ್‌: ಆಕಾಶ್‌ – ಸಿರಾಜ್‌ ದಾಳಿಗೆ ಕುಸಿದ ಆಂಗ್ಲರು – ಇಬ್ಬರೂ ವೇಗಿಗಳು ಕಬಳಿಸಿದ ವಿಕೆಟ್ ಎಷ್ಟು?

ರ್ಮಿಂಗ್‌ಹ್ಯಾಮ್‌: ವೇಗಿಗಳಾದ ಮೊಹಮ್ಮದ್‌ ಸಿರಾಜ್‌ (70ಕ್ಕೆ 6) ಮತ್ತು ಆಕಾಶ್‌ ದೀಪ್‌(88ಕ್ಕೆ 4)ಅವರ ಕರಾರುವಾಕ್‌ ಬೌಲಿಂಗ್‌ ಬಲದಿಂದ ಭಾರತ ತಂಡ ದ್ವಿತೀಯ ಟೆಸ್ಟ್‌ನಲ್ಲಿಇಂಗ್ಲೆಂಡ್‌ ವಿರುದ್ಧ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ. ಹ್ಯಾರಿ ಬ್ರೂಕ್‌ (158; 234 ಎಸೆತ, 17 ಫೋರ್‌, 1 ಸಿಕ್ಸರ್‌) ಮತ್ತು ಜಾಮೀ ಸ್ಮಿತ್‌(184*; 207 ಎಸೆತ, 21 ಫೋರ್‌, 4 ಸಿಕ್ಸರ್‌) ಆರನೇ ವಿಕೆಟ್‌ಗೆ 303 ರನ್‌ಗಳ ಜತೆಯಾಟ ನಿರ್ವಹಿಸಿದ ಹೊರತಾಗಿಯೂ ಇಂಗ್ಲೆಂಡ್‌ ಹಿನ್ನಡೆ ಅನುಭವಿಸಿತು.

ಎಜ್‌ಬಾಸ್ಟನ್‌ನಲ್ಲಿನಡೆಯುತ್ತಿರುವ ಪಂದ್ಯದ 3ನೇ ದಿನವಾದ ಶುಕ್ರವಾರ 3 ವಿಕೆಟ್‌ಗಳಿಗೆ 77 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುರಿಸಿದ ಇಂಗ್ಲೆಂಡ್‌, 89.3 ಓವರ್‌ಗಳಲ್ಲಿ407 ರನ್‌ಗಳಿಗೆ ಮೊದಲ ಇನಿಂಗ್ಸ್‌ ಪೂರ್ಣಗೊಳಿಸಿತು. ಬಳಿಕ 180 ರನ್‌ಗಳ ಮಹತ್ವದ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ, 13 ಓವರ್‌ಗಳಲ್ಲಿ 1 ವಿಕೆಟ್‌ಗೆ 64 ರನ್‌ ಗಳಿಸಿತ್ತು.

ಇದಕ್ಕೂ ಮುನ್ನ ಭಾರತ ಮೊದಲ ಇನಿಂಗ್ಸ್‌ನಲ್ಲಿಕಲೆಹಾಕಿದ 587 ರನ್‌ಗಳಿಗೆ ಪ್ರತಿಯಾಗಿ 2ನೇ ದಿನದಂತ್ಯದಲ್ಲಿಇನಿಂಗ್ಸ್‌ ಆರಂಭಿಸಿದ ಆತಿಥೇಯ ಇಂಗ್ಲೆಂಡ್‌, ಆಕಾಶ್‌ ದೀಪ್‌ ಅವರ ಮಾರಕ ದಾಳಿಗೆ ತತ್ತರಿಸಿ ಮೂರು ವಿಕೆಟ್‌ ಕಳೆದುಕೊಂಡು ಹಿನ್ನಡೆ ಅನುಭವಿಸಿತ್ತು. ಮೂರನೇ ದಿನದಾಟದ ಆರಂಭದಲ್ಲೇ ಅನುಭವಿ ಜೋ ರೂಟ್‌ ಮತ್ತು ನಾಯಕ ಬೆನ್‌ಸ್ಟೋಕ್ಸ್‌ ಅವರನ್ನು ಔಟ್‌ ಮಾಡಿದ ಭಾರತೀಯರು ಪಂದ್ಯದ ಮೇಲೆ ಹಿಡಿತ ಸಾಧಿಸುವ ಯತ್ನ ಮಾಡಿದರು. ಆದರೆ ಭೋಜನ ವಿರಾಮದ ನಂತರ ಆತಿಥೇಯರ ಮೇಲೆ ಒತ್ತಡ ಹೇರುವ ಭಾರತೀಯರ ಯೋಜನೆ ಫಲ ನೀಡಲಿಲ್ಲ. 84ಕ್ಕೆ 5 ವಿಕೆಟ್‌ ಕಳೆದುಕೊಂಡು ಇನಿಂಗ್ಸ್‌ ಹಿನ್ನಡೆ ಅನುಭವಿಸುವ ಭೀತಿ ಎದುರಿಸಿದ ಆತಿಥೇಯ ತಂಡಕ್ಕೆ ಬ್ರೂಕ್‌ ಮತ್ತು ಸ್ಮಿತ್‌ ಆಸರೆಯಾದರು.

ಪ್ರವಾಸಿ ತಂಡದ ಎಲ್ಲಾಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಈ ಜೋಡಿ ಇನ್ನಿಲ್ಲದಂತೆ ಕಾಡಿತು. ಅಪಾಯಕಾರಿಯಾಗುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸಲು ನಾಯಕ ಶುಬ್ಮನ್‌ ಗಿಲ್‌ ಹಲವು ಕಾರ್ಯತಂತ್ರಗಳನ್ನು ಹೆಣದರು. ಆದರೆ ಯಾವುದೂ ಕೈಗೂಡಲಿಲ್ಲ. ಬಿರುಸಿನ ಆಟಕ್ಕೆ ಒತ್ತು ನೀಡಿದ ಸ್ಮಿತ್‌ ಇನಿಂಗ್ಸ್‌ನ 47ನೇ ಓವರ್‌ನಲ್ಲಿಶತಕ ಸಿಡಿಸಿ, ಟೆಸ್ಟ್‌ನಲ್ಲಿ2ನೇ ಶತಕದ ಸಂಭ್ರಮ ಆಚರಿಸಿದರು. ಕೇವಲ 80 ಎಸೆತಗಳಲ್ಲಿಈ ಸಾಧನೆ ಮಾಡಿದ ಅವರು, ಅತಿ ವೇಗವಾಗಿ ಶತಕ ಗಳಿಸಿದ ಇಂಗ್ಲೆಂಡ್‌ನ ನಾಲ್ಕನೇ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು. ಈ ಸಂಭ್ರಮ ಮಾಸುವ ಮುನ್ನವೇ ಬ್ರೂಕ್‌ ಸಹ ಟೆಸ್ಟ್‌ನಲ್ಲಿ9ನೇ ಶತಕ ಗಳಿಸಿ ತಂಡದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.

ಈ ಜೋಡಿ 6ನೇ ವಿಕೆಟ್‌ಗೆ 368 ಎಸೆತಗಳಲ್ಲಿ303 ರನ್‌ಗಳ ಪಾಲುದಾರಿಕೆ ಆಟವಾಡಿ ತಂಡಕ್ಕೆ ಚೇತರಿಕೆ ನೀಡಿತು. ಆದರೆ ಇವರಿಬ್ಬರು ಔಟಾದ ನಂತರ ಆತಿಥೇಯ ತಂಡದ ಕೆಳ ಕ್ರಮಾಂಕದ ಬ್ಯಾಟರ್‌ಗಳು ಭಾರತೀಯ ವೇಗಿಗಳಿಗೆ ತರಗೆಲೆಯಂತೆ ಉದುರಿದರು. 387ಕ್ಕೆ 6 ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಂಗ್ಲರು, ಸಿರಾಜ್‌ ಮತ್ತು ಆಕಾಶ್‌ ದಾಳಿಗೆ ತತ್ತರಿಸಿದರು. ಕೊನೆಯ 12 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಳ್ಳುವ ಮೂಲಕ ಹಿನ್ನಡೆಗೆ ಒಳಗಾದರು. ತಂಡದ ಹೋರಾಟಕ್ಕೆ ಬಲ ನೀಡಿದ ಬ್ರೂಕ್‌ ಅಜೇಯರಾಗುಳಿದರು. ಜಸ್‌ಪ್ರಿತ್‌ ಬುಮ್ರಾ ಅವರ ಸ್ಥಾನಕ್ಕೆ ಆಯ್ಕೆಯಾದ ಆಕಾಶ್‌ ದೀಪ್‌ ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರೆ, ಸಿರಾಜ್‌ ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಿದರು.

ಸಂಕ್ಷಿಪ್ತ ಸ್ಕೋರ್‌ಭಾರತ: ಮೊದಲ ಇನಿಂಗ್ಸ್‌ 587;
ಇಂಗ್ಲೆಂಡ್‌: ಮೊದಲ ಇನಿಂಗ್ಸ್‌ 89.3 ಓವರ್‌ಗಳಲ್ಲಿ 407(ಹ್ಯಾರಿ ಬ್ರೂಕ್‌ 158, ಜಾಮಿ ಸ್ಮಿತ್‌ 184*; ಸಿರಾಜ್‌ 70ಕ್ಕೆ 6, ಆಕಾಶ್‌ ದೀಪ್‌ 88ಕ್ಕೆ 4);
ಭಾರತ 2ನೇ ಇನಿಂಗ್ಸ್: 64ಕ್ಕೆ 1 (ಯಶಸ್ವಿ ಜೈಸ್ವಾಲ್ 28, ಕೆಎಲ್ ರಾಹುಲ್ (ಔಟಾಗದೇ) 28, ಕರುಣ್ ನಾಯರ್ ಔಟಾಗದೇ 7), ಜೋಶ್ ಟಂಗ್ 12ಕ್ಕೆ 1.

ಗಿಲ್ ದಾಖಲೆಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಬ್ಬರದ 269 ರನ್ ಗಳಿಸಿ ಹಲವು ದಾಖಲೆಗಳನ್ನು ಪುಡಿಗಟ್ಟಿದರು. ಅವರ ಈ ಸ್ಫೋಟಕ ಆಟದ ಹೊರತಾಗಿಯೂ ತ್ರಿಶತಕ ವಂಚಿತರಾದರು. ಪಂದ್ಯದ ನಂತರ ತಂದೆ ಮತ್ತು ತಾಯಿಯಿಂದ ಬಂದ ಅಭಿನಂದನಾ ಸಂದೇಶ ಗಿಲ್‌ರನ್ನು ಭಾವುಕರನ್ನಾಗಿಸಿದೆ.

ರವೀಂದ್ರ ಜಡೇಡಾ ವಿರುದ್ಧ ಬಿಸಿಸಿಐ ಕ್ರಮ?ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ಆಲ್‌ರೌಂಡರ್ ರವೀಂದ್ರ ಜಡೇಜಾ ಇದೀಗ ಬಿಸಿಸಿಐ ನಿಯಮ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ, ತಂಡದ ಎಲ್ಲಾ ಆಟಗಾರರು ವಾಸ್ತವ್ಯವಿರುವ ಹೋಟೆಲ್‌ನಿಂದ ಪಂದ್ಯದ ಸ್ಥಳಕ್ಕೆ ತಂಡದ ಬಸ್‌ನಲ್ಲಿ ಒಟ್ಟಾಗಿ ಪ್ರಯಾಣಿಸಬೇಕು. ಆದರೆ, ಗುರುವಾರ (ಜುಲೈ 3, 2025) ಜಡೇಜಾ ಅವರು ತಂಡದ ಬಸ್‌ ಬದಲು ಪ್ರತ್ಯೇಕವಾಗಿ ಪ್ರಯಾಣಿಸಿದ್ದರು ಎಂದು ವರದಿಯಾಗಿದೆ. ಇದು ಬಿಸಿಸಿಐ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ರವೀಂದ್ರ ಜಡೇಜಾ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆ ಇದೆ.

ರವೀಂದ್ರ ಜಡೇಜಾ ವಿರುದ್ಧ ಮತ್ತೊಂದು ಶಿಸ್ತು ಕ್ರಮ?ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಪಿಚ್‌ನ ಮಧ್ಯಭಾಗದಲ್ಲಿ ಓಡಿದ ಕಾರಣ ವಿವಾದಕ್ಕೆ ಸಿಲುಕಿದ್ದಾರೆ. ಇದು ಇಂಗ್ಲೆಂಡ್ ಆಟಗಾರರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ದಿನದಾಟದ ಆರಂಭದಲ್ಲೇ ಅಂಪೈರ್ ಶರ್ಫುದ್ದೌಲಾ ಜಡೇಜಾಗೆ ಪಿಚ್‌ನ ಅಪಾಯಕಾರಿ ವಲಯದಲ್ಲಿ ಓಡದಂತೆ ಎಚ್ಚರಿಕೆ ನೀಡಿದ್ದರು. ಆದಾಗ್ಯೂ, 89ನೇ ಓವರ್‌ನಲ್ಲಿ ಜಡೇಜಾ ಮತ್ತೆ ಪಿಚ್ ಮಧ್ಯಭಾಗದಲ್ಲಿ ಓಡಿದಾಗ, ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಅವರೊಂದಿಗೆ ಜಡೇಜಾ ಬಿಸಿಬಿಸಿ ಮಾತುಕತೆ ನಡೆಸಿದರು. ಈ ಘಟನೆ ಪಂದ್ಯದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಸಿತು. ಬಿಸಿಸಿಐ ಜಡೇಜಾ ವಿರುದ್ಧ ಈಗಾಗಲೇ ಪ್ರತ್ಯೇಕ ಪ್ರಯಾಣದ ಆರೋಪದ ಮೇಲೆ ಕ್ರಮಕ್ಕೆ ಚಿಂತಿಸುತ್ತಿರುವ ಬೆನ್ನಲ್ಲೇ ಈ ಹೊಸ ವಿವಾದ ತಲೆದೋರಿದೆ.

Leave a Reply

Your email address will not be published. Required fields are marked *