Paris Olympics 2024; 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನ ಎರಡನೇ ದಿನ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಈ ಮಹಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ.
![](https://samagrasuddi.co.in/wp-content/uploads/2024/07/image-211-1024x576.png)
33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ನ ಎರಡನೇ ದಿನ ಭಾರತಕ್ಕೆ ಶುಭ ಸುದ್ದಿ ಸಿಕ್ಕಿದೆ. ಈ ಮಹಾ ಕ್ರೀಡಾಕೂಟದಲ್ಲಿ ಭಾರತ ತನ್ನ ಪದಕದ ಖಾತೆಯನ್ನು ತೆರೆದಿದೆ. ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಶೂಟರ್ ಮನು ಭಾಕರ್ ಕಂಚಿನ ಪದಕಕ್ಕೆ ಕೊರಳ್ಳೊಡಿದ್ದಾರೆ. ಈ ಮೂಲಕ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎಂಬ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಕಳೆದ ಒಲಿಂಪಿಕ್ಸ್‌ನಲ್ಲಿ ಅಂದರೆ 2020 ರಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಯಾವುದೇ ವಿಭಾಗದಲ್ಲೂ ಅರ್ಹತೆ ಪಡೆಯಲು ವಿಫಲರಾಗಿದ್ದ 22 ವರ್ಷದ ಮನು ಭಾಕರ್ ಅವರಿಗೆ ಇದು ಒಲಿಂಪಿಕ್ಸ್‌ನಲ್ಲಿ ಮೊದಲ ಪದಕವಾಗಿದೆ.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯ ಫೈನಲ್‌ನಲ್ಲಿ 221.7 ಪಾಯಿಂಟ್‌ಗಳನ್ನು ಸಂಪಾಧಿಸಿದ ಮನು ಭಾಕರ್ ಮೂರನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಮುತ್ತಿಕ್ಕಿದರೆ, ಕೊರಿಯಾದ ಓಹ್ ಯೆ ಜಿನ್ 243.2 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಮುತ್ತಿಟ್ಟರು. ಉಳಿದಂತೆ 241.3 ಅಂಕ ಗಳಿಸಿದ ಕೊರಿಯಾದ ಮತ್ತೊಬ್ಬ ಸ್ಪರ್ಧಿ ಕೊರಿಯಾದ ಕಿಮ್ ಯೆಜಿ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡರು.
ಮೋದಿ ಪ್ರಶಂಸೆ
ಭಾರತಕ್ಕೆ ಮೊದಲ ಪದಕದ ಕಿರೀಟ ತೊಡಿಸಿದ ಮನು ಭಾಕರ್ಗೆ ದೇಶದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮನು ಭಾಕರ್ ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ, ತಮ್ಮ ಎಕ್ಸ್ ಖಾತೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಶೂಟಿಂಗ್‌ನಲ್ಲಿ 5ನೇ ಪದಕ
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಲ್ಲಿಯವರೆಗೆ ಶೂಟಿಂಗ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದಿತ್ತು. ಆದರೆ ಈ ನಾಲ್ಕೂ ಪದಗಳು ಪುರುಷ ಶೂಟರ್‌ಗಳಿಂದ ಬಂದಿದ್ದವು. ಭಾರತಕ್ಕೆ ಶೂಟಿಂಗ್‌ನಲ್ಲಿ ಮೊದಲ ಪದಕವನ್ನು ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು 2004 ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಗೆದ್ದುಕೊಟ್ಟಿದ್ದರು. ಇದಾದ ನಂತರ, 2008 ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಅಭಿನವ್ ಬಿಂದ್ರಾ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದುಕೊಟ್ಟಿದ್ದರು.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಭಾರತಕ್ಕೆ ಮೂರನೇ ಪದಕ ಸಿಕ್ಕಿದ್ದು, ಈ ಬಾರಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಗಗನ್ ನಾರಂಗ್ ಕಂಚಿನ ಪದಕ ಗೆದ್ದಿದ್ದರು. ಇದಾದ ನಂತರ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ವಿಜಯ್ ಕುಮಾರ್ 25 ಮೀಟರ್ ರ್ಯಾಪಿಡ್ ಫೈರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಈಗ ಮನು ಭಾಕರ್ ಇತಿಹಾಸ ಸೃಷ್ಟಿಸಿ ಭಾರತಕ್ಕಾಗಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಶೂಟರ್ ಎನಿಸಿಕೊಂಡಿದ್ದಾರೆ.