Amazon Stops Taking Rs. 2,000 Notes: ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಹಿಂದಿರುಗಿಸಲು ಸೆಪ್ಟೆಂಬರ್ 30ಕ್ಕೆ ಡೆಡ್ಲೈನ್ ಎಂದು ಆರ್ಬಿಐ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಅಮೇಜಾನ್ ಇಂಡಿಯಾ ತನ್ನ ಪ್ಲಾಟ್ಫಾರ್ಮ್ನಲ್ಲಿ ಈ ನೋಟುಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದೆ. ತನ್ನ ಕ್ಯಾಷ್ ಆನ್ ಡೆಲಿವರಿ ವ್ಯವಸ್ಥೆಯಲ್ಲಿ ಹಣ ಪಾವತಿಗೆ ಇಂದಿನಿಂದ 2,000 ರೂ ನೋಟುಗಳನ್ನು ಸ್ವೀಕರಿಸದೇ ಇರಲು ಅಮೇಜಾನ್ ನಿರ್ಧರಿಸಿದೆ.

ನವದೆಹಲಿ, ಸೆಪ್ಟೆಂಬರ್ 19: ಭಾರತದ ಅತಿದೊಡ್ಡ ಇಕಾಮರ್ಸ್ ಪ್ಲಾಟ್ಫಾರ್ಮ್ ಆಗಿರುವ ಅಮೇಜಾನ್ ಇಂಡಿಯಾ (Amazon India) ಸಂಸ್ಥೆ 2,000 ರೂ ಸ್ವೀಕರಿಸುವುದನ್ನು ಇಂದಿನಿಂದ ನಿಲ್ಲಿಸಿದೆ. ಕ್ಯಾಷ್ ಆನ್ ಡೆಲಿವರಿಯಲ್ಲಿ (Cash on Delivery) ಅಮೇಜಾನ್ ತನ್ನ ಗ್ರಾಹಕರಿಂದ ಹಣಪಾವತಿಗೆ 2,000 ರೂ ನೋಟು ಪಡೆಯದಿರಲು ನಿರ್ಧರಿಸಿದೆ. ಇದು ಅಮೇಜಾನ್ನಿಂದ ಅನುಮೋದಿಸಲ್ಪಟ್ಟ ಆರ್ಡರ್ಗಳಿಗೆ ಮಾತ್ರ ಈ ನಿರ್ಬಂಧ ಇರುತ್ತದೆ. ಅಮೇಜಾನ್ ಪ್ಲಾಟ್ಫಾರ್ಮ್ನಲ್ಲಿರುವ ಥರ್ಡ್ ಪಾರ್ಟಿ ಕೊರಿಯರ್ಗಳಿಗೆ ಈ ನಿರ್ಬಂಧ ಇರುವುದಿಲ್ಲ. ಅವುಗಳು 2,000 ರೂ ನೋಟುಗಳನ್ನು ಸ್ವೀಕರಿಸುವ ಅವಕಾಶಗಳಿರಬಹುದು. ಇದು ಆಯಾ ಕೊರಿಯರ್ ಕಂಪನಿಗಳ ನಿರ್ಧಾರಕ್ಕೆ ಬಿಟ್ಟಿದ್ದು.
ಆರ್ಬಿಐ 2,000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳನ್ನು ಹಿಂದಿರುಗಿಸಲು ಸೆಪ್ಟೆಂಬರ್ 30ರವರೆಗೆ ಮಾತ್ರವೇ ಕಾಲಾವಕಾಶ ಇದೆ. ಈಗಾಗಲೇ ಬಹುಪಾಲು 2,000 ರೂ ಮುಖಬೆಲೆಯ ನೋಟುಗಳು ಬ್ಯಾಂಕ್ಗಳಿಗೆ ಮರಳಿವೆ. ಇನ್ನು, ಕೆಲವೇ ಸಾವಿರ ರೂ ಮೊತ್ತದ ನೋಟುಗಳು ಮಾತ್ರವೇ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗಿರುವ ಅಂದಾಜಿದೆ.
ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಮಾತ್ರವೇ ಹಿಂಪಡೆಯಲಾಗಿದೆಯೇ ಹೊರತು ಅದನ್ನು ನಿಷೇಧಿಸಿಲ್ಲ ಎಂದು ಆರ್ಬಿಐ ಹೇಳಿದೆ. ಆದರೆ, ಸೆಪ್ಟೆಂಬರ್ 30ರ ಬಳಿಕ ಈ ನೋಟುಗಳನ್ನು ಏನು ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ.
ಸದ್ಯ, 2,000 ರೂ ನೋಟುಗಳನ್ನು ಹೊಂದಿರುವವರು ಬ್ಯಾಂಕುಗಳಿಗೆ ಮರಳಿಸಬಹುದು. ಈ ನೋಟುಗಳನ್ನು ಮರಳಿಸಿ, ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡಿಸಿಕೊಳ್ಳಬಹುದು. ಅಥವಾ ಈ ನೋಟುಗಳ ಬದಲಿಗೆ ಬೇರೆ ನೋಟುಗಳನ್ನು ಪಡೆಯಬಹುದು.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii