IND vs ENG: ಇಂಡೊ-ಇಂಗ್ಲೆಂಡ್ ಟೆಸ್ಟ್ ಸರಣಿಗೆ ಹೆಸರು ಫೈನಲ್: ಪಟೌಡಿಗೆ ವಿಶೇಷ ಗೌರವ.

ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಗೆ ತೆಂಡೂಲ್ಕರ್-ಅಯಂಡರ್ಸನ್ ಎಂದು ಹೆಸರಿಡಲು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಹಿಂದೆ ಇದ್ದ ಪಟೌಡಿ ಟ್ರೋಫಿ ಹೆಸರನ್ನು ಕೈ ಬಿಡಲು ನಿರ್ಧರಿಸಲಾಗಿದ್ದು, ಬದಲಿಗೆ ಆ ಹೆಸರಿನಲ್ಲಿ ವಿಶೇಷ ಪ್ರಶಸ್ತಿ ನೀಡಲಿದ್ದಾರೆ ಎಂದು ವರದಿಯಾಗಿದೆ.

ಇದಕ್ಕೂ ಮುನ್ನ ಭಾರತ-ಇಂಗ್ಲೆಂಡ್ ಸರಣಿಗೆ ತನ್ನ ಹೆಸರನ್ನು ಇಡುವುದಾದರೆ, ಪಟೌಡಿ ಪರಂಪರೆಯನ್ನು ಮುಂದುವರೆಸಬೇಕೆಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಿಸಿಸಿಐಗೆ ಮನವಿ ಮಾಡಿದ್ದರು.

ಈ ಮನವಿಯನ್ನು ಪುರಸ್ಕರಿಸಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಹಾಗೂ ಬಿಸಿಸಿಐ, ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಣ ಸರಣಿಗೆ ತೆಂಡೂಲ್ಕರ್-ಅಯಂಡರ್ಸನ್ ಟ್ರೋಫಿ ಎಂದು ಹೆಸರಿಡಲು ತೀರ್ಮಾನಿಸಿದ್ದಾರೆ. ಅಲ್ಲದೆ ಭಾರತದ ಕ್ರಿಕೆಟ್​ ದಂತಕಥೆಗಳಾದ ಇಫ್ತಿಕರ್ ಅಲಿ ಖಾನ್ ಪಟೌಡಿ ಮತ್ತು ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಗೌರವಾರ್ಥಕವಾಗಿ ಟ್ರೋಫಿಗೆ ಗೆದ್ದ ತಂಡದ ನಾಯಕನಿಗೆ ಪಟೌಡಿ ಹೆಸರಿನಲ್ಲಿ ಪದಕ ನೀಡಲಿದ್ದಾರೆ.

ಈ ಮೂಲಕ ಸಚಿನ್ ತೆಂಡೂಲ್ಕರ್ ಅವರ ಆಗ್ರಹದಂತೆ ಭಾರತ-ಇಂಗ್ಲೆಂಡ್ ಸರಣಿಯಲ್ಲಿ ಪಟೌಡಿ ಪರಂಪರೆಯನ್ನು ಮುಂದುವರೆಸಲು ಭಾರತೀಯ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.

2007 ರಲ್ಲಿ ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಗೆ ಪಟೌಡಿ ಟ್ರೋಫಿ ಎಂದು ಹೆಸರಿಡಲಾಗಿತ್ತು. ಆದರೆ ಈ ಬಾರಿ ಸರಣಿಯ ಹೆಸರನ್ನು ಬದಲಿಸಲು ಉಭಯ ತಂಡಗಳ ಕ್ರಿಕೆಟ್ ಮಂಡಳಿಗಳು ನಿರ್ಧರಿಸಿದ್ದರು.

ಅಲ್ಲದೆ ಈ ಶತಮಾನದ ಶ್ರೇಷ್ಠ ಕ್ರಿಕೆಟಿಗರೆನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಹಾಗೂ ಜೇಮ್ಸ್ ಅಯಂಡರ್ಸನ್ ಹೆಸರನ್ನು ಟ್ರೋಫಿಗೆ ಇಡಲು ನಿರ್ಧರಿಸಲಾಯಿತು. ಆದರೆ ಪಟೌಡಿ ಹೆಸರನ್ನು ತೆಗೆದು ಹಾಕುವುದು ಅಗೌರವ ಎಂದು ಸುನಿಲ್ ಗವಾಸ್ಕರ್ ಸೇರಿದಂತೆ ಕೆಲ ಮಾಜಿ ಆಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಕೂಡ ಭಾರತ ಮತ್ತು ಇಂಗ್ಲೆಂಡ್ ಸರಣಿಯಲ್ಲಿ ಪಟೌಡಿ ಪರಂಪರೆಯನ್ನು ಮುಂದುವರೆಸುವುದಾದರೆ ಮಾತ್ರ, ನನ್ನ ಹೆಸರಿಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿರುವ ಇಸಿಬಿ-ಬಿಸಿಸಿಐ ಇದೀಗ ಇಂಡೊ-ಇಂಗ್ಲೆಂಡ್ ಸರಣಿ ಗೆಲ್ಲುವ ತಂಡದ ನಾಯಕನಿಗೆ ಪಟೌಡಿ ಮೆಡಲ್ ನೀಡುವ ಮೂಲಕ ಟೀಮ್ ಇಂಡಿಯಾದ ಮಾಜಿ ಆಟಗಾರನಿಗೆ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:

  • ಮೊದಲ ಟೆಸ್ಟ್: 20-24 ಜೂನ್, 2025 – ಹೆಡ್ಲಿಂಗ್ಲೆ, ಲೀಡ್ಸ್
  • 2ನೇ ಟೆಸ್ಟ್: ಜುಲೈ 2-6, 2025 – ಎಡ್ಜ್‌ಬಾಸ್ಟನ್, ಬರ್ಮಿಂಗ್​ಹ್ಯಾಮ್
  • 3ನೇ ಟೆಸ್ಟ್: ಜುಲೈ 10-14, 2025 – ಲಾರ್ಡ್ಸ್, ಲಂಡನ್
  • 4ನೇ ಟೆಸ್ಟ್: 23-27 ಜುಲೈ, 2025 – ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
  • 5ನೇ ಟೆಸ್ಟ್: 31 ಜುಲೈ-4 ಆಗಸ್ಟ್, 2025 – ದಿ ಓವಲ್, ಲಂಡನ್.

Leave a Reply

Your email address will not be published. Required fields are marked *