
ಮೊದಲು ಬ್ಯಾಟಿಂಗ್ ಮಾಡಿ 247 ರನ್ಗಳಿಸಿದ್ದ ಭಾರತ, ಇಂಗ್ಲೆಂಡ್ ತಂಡವನ್ನು ಕೇವಲ 97 ರನ್ಗಳಿಗೆ ಆಲೌಟ್ ಮಾಡುವ ಮೂಲಕ 150 ರನ್ಗಳ ಬೃಹತ್ ಜಯ ಸಾಧಿಸಿತು. ಈ ಜಯದ ಮೂಲಕ ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನ 4-1ರಲ್ಲಿ ವಶಪಡಿಸಿಕೊಂಡಿತು.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ (T20 Series) ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿ 247 ರನ್ಗಳಿಸಿದ್ದ ಭಾರತ, ಇಂಗ್ಲೆಂಡ್ (India vs England) ತಂಡವನ್ನು ಕೇವಲ 97 ರನ್ಗಳಿಗೆ ಆಲೌಟ್ ಮಾಡುವ ಮೂಲಕ 150 ರನ್ಗಳ ಬೃಹತ್ ಜಯ ಸಾಧಿಸಿತು. ಈ ಜಯದ ಮೂಲಕ ಟೀಮ್ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನ 4-1ರಲ್ಲಿ ವಶಪಡಿಸಿಕೊಂಡಿತು. ಇದು ಭಾರತದ ಇತಿಹಾಸದಲ್ಲಿ ಭಾರತಕ್ಕೆ ಸಿಕ್ಕಂತಹ ರನ್ಗಳ ಅಂತರದಲ್ಲಿ ಅತಿ ದೊಡ್ಡ ಜಯವಾಗಿದೆ.
97ಕ್ಕೆ ಆಲೌಟ್
ಭಾರತ ನೀಡಿದ್ದ 248 ರನ್ಗಳ ಬೃಹತ್ ಗುರಿಯನ್ನ ಬೆನ್ನಟ್ಟಿದ ಇಂಗ್ಲೆಂಡ್ 10.3 ಓವರ್ಗಳಲ್ಲಿ 97ಕ್ಕೆ ಆಲೌಟ್ ಆಯಿತು. ಫಿಲ್ ಸಾಲ್ಟ್ 23 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ಗಳೊಂದಿಗೆ 55 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇಡೀ ತಂಡದಲ್ಲಿ ಸಾಲ್ಟ್ ಹೊರೆತುಪಡಿಸಿ ಬೆಥೆಲ್ (10) ಮಾತ್ರ ಎರಡಂಕಿ ಮೊತ್ತ ಗಳಿಸಿದರು. ಉಳಿದವರೆಲ್ಲಾ ಮೊಬೈಲ್ ನಂಬರ್ನಂತೆ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದರು.
9 ಮಂದಿ ಸಿಂಗಲ್ ನಂಬರ್ಗೆ ಔಟ್
248ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್ ದೊಡ್ಡ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಕಳೆದುಕೊಂಡಿತು. ದೊಡ್ಡ ಮೊತ್ತವಾಗಿರುವುದರಿಂದ ಚೇಸಿಂಗ್ ಮಾಡಲು ದೊಡ್ಡ ಹೊಡೆತ ಸಿಡಿಸುವುದು ಅನಿವಾರ್ಯವಾಗಿತ್ತು. ಆದರೆ ಅಭಿಷೇಕ್ ಶರ್ಮಾರಂತೆ ಬೌಂಡರಿ ಗೆರೆ ದಾಟಿಸುವುದಕ್ಕೆ ಆಂಗ್ಲ ಬ್ಯಾಟರ್ಗಳು ವಿಫಲರಾದರು. ಬೆನ್ ಡಕೆಟ್ (0), ಬಟ್ಲರ್ (7) ಹ್ಯಾರಿ ಬ್ರೂಕ್ (2), ಲಿಯಾಮ್ ಲಿವಿಂಗ್ಸ್ಟೋನ್ (9), ಬ್ರಿಡನ್ ಕಾರ್ಸ್ (3), ಜೇಮಿ ಓವರ್ಟನ್ (1), ಜೋಫ್ರಾ ಆರ್ಚರ್ (1), ಆದಿಲ್ ರಶೀದ್ (6) ಮಾರ್ಕ್ವುಡ್(0) ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದರು.
ಭಾರತದ ಪರ ಅಭಿಷೇಕ್ ಶರ್ಮಾ 3ಕ್ಕೆ 2, ಶಿವಂ ದುಬೆ 11ಕ್ಕೆ2, ಮೊಹಮ್ಮದ್ ಶಮಿ 25ಕ್ಕೆ 3, ವರುಣ್ ಚಕ್ರವರ್ತಿ 25ಕ್ಕೆ 2 ವಿಕೆಟ್ ಪಡೆದು ಮಿಂಚಿದರು.
ಅಭಿಷೇಕ್ ಶರ್ಮಾ ಸಿಡಿಲಬ್ಬರ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 2ನೇ ಓವರ್ನಲ್ಲೇ ಸಂಜು ಸ್ಯಾಮ್ಸನ್ (16) ವಿಕೆಟ್ ಕಳೆದುಕೊಂಡಿತು. ಮೊದಲ ಓವರ್ನಲ್ಲೇ ಜೋಫ್ರಾ ಆರ್ಚರ್ ಬೌಲಿಂಗ್ನಲ್ಲಿ 2 ಸಿಕ್ಸರ್, 1 ಬೌಂಡರಿ ಸಹಿತ 16 ರನ್ ಸಿಡಿಸಿದ ಸ್ಯಾಮ್ಸನ್ 2ನೇ ಓವರ್ನಲ್ಲಿ ಔಟ್ ಆದರು. ಆದರೆ ಅಭಿಷೇಕ್ ಶರ್ಮಾ ಮಾತ್ರ ತಮ್ಮ ಅಬ್ಬರವನ್ನು ಮುಂದುವರಿಸಿದರು. ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ತಿಲಕ್ ವರ್ಮಾ ಜೊತೆಗೆ ಸೇರಿ 43 ಎಸೆತಗಳಲ್ಲಿ 115ರನ್ಗಳ ಜೊತೆಯಾಟ ನಡೆಸಿದರು. ತಿಲಕ್ ವರ್ಮಾ 15 ಎಸೆತಗಳಲ್ಲಿ 24 ರನ್ಗಳಿಸಿದರು.
ನಂತರ ಬಂದ ನಾಯಕ ಸೂರ್ಯಕುಮಾರ್ ಯಾದವ್ (2) ಮತ್ತೊಮ್ಮೆ ವಿಫಲರಾದರು. 5ನೇ ಕ್ರಮಾಂಕದಲ್ಲಿ ಬಂದ ಶಿವಂ ದುಬೆ ಕೇವಲ 13 ಎಸೆತಗಳಲ್ಲಿ 30 ರನ್ ಸಿಡಿಸಿದರು. ದುಬೆ ಔಟಾದ ನಂತರ ರನ್ ಗತಿಗೆ ಕಡಿವಾಣ ಬಿದ್ದಿತು. ಅಭಿಷೇಕ್ ಶರ್ಮಾ 54 ಎಸೆತಗಳಲ್ಲಿ 7 ಬೌಂಡರಿ, 13 ಸಿಕ್ಸರ್ಗಳೊಂದಿಗೆ 135 ರನ್ಗಳಿಸಿ ಔಟ್ ಆದರು. ನಂತರ ಬಂದ ರಿಂಕು ಸಿಂಗ್ (9), ಹಾರ್ದಿಕ್ ಪಾಂಡ್ಯ (9) ವಿಫಲರಾದರು. ಅಕ್ಷರ್ ಪಟೇಲ್ (15) ಮಾತ್ರ ಅಭಿಷೇಕ್ ಜೊತೆಗೆ 30 ರನ್ ಜೊತೆಯಾಟ ನಡೆಸಿದರು.
ಇಂಗ್ಲೆಂಡ್ ಪರ ಬ್ರಿಡನ್ ಕಾರ್ಸ್ 38ಕ್ಕೆ 3, ಮಾರ್ಕ್ ವುಡ್ 32ಕ್ಕೆ 2, ಜೋಫ್ರಾ ಆರ್ಚರ್ 55ಕ್ಕೆ1, ಆದಿಲ್ ರಶೀದ್ 41ಕ್ಕೆ1 ವಿಕೆಟ್ ಪಡೆದರು.