ಕೊಲಂಬೊ: ಅಕ್ಟೋಬರ್ 5, ಭಾನುವಾರ — ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ಮಹಿಳಾ ತಂಡಗಳು ಮುಖಾಮುಖಿಯಾಗಿದವು. ಹರ್ಮನ್‌ಪ್ರೀತ್ ಕೌರ್ (Harmanpreet Kaur) ನಾಯಕತ್ವದ ಟೀಮ್ ಇಂಡಿಯಾ 88 ರನ್‌ಗಳ ಅಂತರದಲ್ಲಿ ಪಾಕಿಸ್ತಾನವನ್ನು ಮಣಿಸಿ ಅದ್ಭುತ ಗೆಲುವು ಸಾಧಿಸಿದೆ.
ಈ ಜಯದೊಂದಿಗೆ ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಅಜೇಯ ದಾಖಲೆ ಮುಂದುವರೆಸಿದೆ — ಇದು ಪಾಕಿಸ್ತಾನದ ವಿರುದ್ಧ ಭಾರತದ ಸತತ 12ನೇ ಜಯ.
ಭಾರತಕ್ಕೆ ಕಳಪೆ ಆರಂಭವಾದರೂ 247 ರನ್ ಗಳಿಸಿ ಬಲಿಷ್ಠ ಮೊತ್ತ
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 50 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಆರಂಭ ನಿಧಾನವಾಗಿದ್ದರೂ ಮಧ್ಯಕ್ರಮದಲ್ಲಿ ಕೆಲವು ಉತ್ತಮ ಪಾಲುದಾರಿಕೆಗಳು ಕಂಡುಬಂದವು.
ಹರ್ಲೀನ್ ಡಿಯೋಲ್ ತಂಡದ ಪರ ಅತಿ ಹೆಚ್ಚು 46 ರನ್ ಗಳಿಸಿದರು. ಅವರ ಜೊತೆಗೆ ಜೆಮಿಮಾ ರೊಡ್ರಿಗಸ್ (32), ಪ್ರತೀಕಾ ರಾವಲ್ (31), ದೀಪ್ತಿ ಶರ್ಮಾ (25), ಸ್ಮೃತಿ ಮಂಧಾನ (23), ಸ್ನೇಹ ರಾಣಾ (20) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ (19) ರನ್ ಗಳಿಸಿದರು.
ಕೊನೆಯಲ್ಲಿ ಮಿಂಚಿದ ರಿಚಾ ಘೋಷ್
ರಿಚಾ ಘೋಷ್ 20 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 35 ಅಜೇಯ ರನ್ ಗಳಿಸಿ ತಂಡದ ಮೊತ್ತವನ್ನು 247ಕ್ಕೆ ಕೊಂಡೊಯ್ದರು.
ಪಾಕಿಸ್ತಾನ ಪರ ಡಯಾನಾ ಬೇಗ್ ನಾಲ್ಕು ವಿಕೆಟ್ ಪಡೆದರೆ, ಸಾದಿಯಾ ಇಕ್ಬಾಲ್ ಮತ್ತು ಫಾತಿಮಾ ಸನಾ ತಲಾ ಎರಡು ವಿಕೆಟ್ ಪಡೆದರು.
ಪಾಕಿಸ್ತಾನ ಪರ ಏಕಾಂಗಿ ಹೋರಾಟ ನೀಡಿದ ಸಿದ್ರಾ ಅಮೀನ್
247 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಮಹಿಳಾ ತಂಡವು ಕೇವಲ 26 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತು. ಸಿದ್ರಾ ಅಮೀನ್ (81) ಏಕಾಂಗಿ ಹೋರಾಟ ನೀಡಿದರು. ನಟಾಲಿಯಾ ಪರ್ವೇಜ್ ಜೊತೆ 69 ರನ್‌ಗಳ ಪಾಲುದಾರಿಕೆ ನಿರ್ಮಿಸಿದರು. ಆದರೆ ನಟಾಲಿಯಾ ಔಟಾದ ನಂತರ ತಂಡ ಸಂಪೂರ್ಣ ಕುಸಿಯಿತು.
ಪಾಕಿಸ್ತಾನ 43 ಓವರ್‌ಗಳಲ್ಲಿ 159 ರನ್‌ಗಳಿಗೆ ಆಲೌಟ್ ಆಯಿತು.
ಬೌಲಿಂಗ್‌ನಲ್ಲಿ ಮಿಂಚಿದ ಕ್ರಾಂತಿ ಗೌಡ್ ಮತ್ತು ದೀಪ್ತಿ ಶರ್ಮಾ
ಟೀಮ್ ಇಂಡಿಯಾ ಪರ ಕ್ರಾಂತಿ ಗೌಡ್ 10 ಓವರ್‌ಗಳಲ್ಲಿ ಮೂರು ಮೇಡನ್ ಸೇರಿದಂತೆ ಕೇವಲ 20 ರನ್‌ಗಳಿಗೆ ಮೂರು ವಿಕೆಟ್ ಪಡೆದರು. ದೀಪ್ತಿ ಶರ್ಮಾ ಕೂಡ ಮೂರು ವಿಕೆಟ್ ಪಡೆದರು. ಸ್ನೇಹ್ ರಾಣಾ ಎರಡು ವಿಕೆಟ್ ಪಡೆದು ಪಾಕಿಸ್ತಾನ ತಂಡವನ್ನು ಮುರಿದರು.
ಫಲಿತಾಂಶ
ಭಾರತ 88 ರನ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದೆ.
ಈ ಜಯದೊಂದಿಗೆ ಭಾರತ ವಿಶ್ವಕಪ್‌ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು, ಇತ್ತ ಪಾಕಿಸ್ತಾನ ಸತತ ಎರಡನೇ ಸೋಲಿಗೆ ಒಳಗಾಯಿತು.
Views: 13