IPL 2023: ಹಿಂದೆಂದೂ ಕಂಡರಿಯದ ಚೇಸಿಂಗ್: ಐಪಿಎಲ್​ನಲ್ಲಿ ದಾಖಲೆ ನಿರ್ಮಿಸಿದ ರಿಂಕು ಸಿಂಗ್

IPL 2023: ಕೊನೆಯ ಓವರ್​ನಲ್ಲಿ 29 ರನ್​ಗಳ ಗುರಿ...ಸ್ಟ್ರೈಕ್​ನಲ್ಲಿ ಉಮೇಶ್ ಯಾದವ್...ಗೆಲುವಿನ ವಿಶ್ವಾಸದಲ್ಲಿ ಗುಜರಾತ್ ಟೈಟಾನ್ಸ್...ಸೋಲುವ ಭೀತಿಯಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್...ಯಶ್ ದಯಾಳ್ ಎಸೆದ ಕೊನೆಯ ಓವರ್​ನ ಮೊದಲ ಎಸೆತದಲ್ಲಿ ಉಮೇಶ್ ಯಾದವ್ 1 ರನ್​ ತೆಗೆದರು....ಆ ಬಳಿಕ ನಡೆದಿದ್ದು ಈಗ ಇತಿಹಾಸ.ಹೌದು, ಐಪಿಎಲ್​ ಇತಿಹಾಸದಲ್ಲೇ ಹಿಂದೆಂದೂ ಕಂಡಿಯರದ ಚೇಸಿಂಗ್​ಗೆ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗಿತ್ತು. ಕೊನೆಯ 5 ಎಸೆತಗಳಲ್ಲಿ 28 ರನ್​ಗಳ ಗುರಿಯನ್ನು ರಿಂಕು ಸಿಂಗ್ ನಿರಾಯಾಸವಾಗಿ ಚಚ್ಚಿ ಬಿಸಾಕಿದ್ದರು. ಇದು ಈಗ ಐತಿಹಾಸಿಕ ದಾಖಲೆ ಎಂಬುದು ವಿಶೇಷ.ಯಶ್ ದಯಾಳ್ ಎಸೆದ ಕೊನೆಯ ಓವರ್​ನ 5 ಎಸೆತಗಳಿಗೆ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸುವ ಮೂಲಕ ರಿಂಕು ಸಿಂಗ್ ಕೆಕೆಆರ್ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದರು. ಇದರೊಂದಿಗೆ ಐಪಿಎಲ್​ ಇತಿಹಾಸದಲ್ಲಿ ಕೊನೆಯ ಓವರ್​ನಲ್ಲಿ ಅತ್ಯಧಿಕ ರನ್​ ಬಾರಿಸಿ ಪಂದ್ಯ ಗೆದ್ದ ದಾಖಲೆ ಕೊಲ್ಕತ್ತಾ ನೈಟ್​ ರೈಡರ್ಸ್ ಪಾಲಾಯಿತು.ಇದಕ್ಕೂ ಮುನ್ನ ಈ ದಾಖಲೆ ರೈಸಿಂಗ್ ಪುಣೆ ಜೈಂಟ್ಸ್ ಹೆಸರಿನಲ್ಲಿತ್ತು. 2016 ರಲ್ಲಿ ರೈಸಿಂಗ್ ಪುಣೆ ಜೈಂಟ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೊನೆಯ ಓವರ್​ನಲ್ಲಿ 23 ರನ್​ಗಳನ್ನು ಬಾರಿಸಿ ಗೆದ್ದುಕೊಂಡಿದ್ದು ದಾಖಲೆಯಾಗಿತ್ತು.ಇದೀಗ ರಿಂಕು ಸಿಂಗ್ ಕೊನೆಯ ಓವರ್​ನ 5 ಎಸೆತಗಳಲ್ಲಿ 30 ರನ್​ ಬಾರಿಸುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಲ್ಲದೆ ಕೊನೆಯ ಓವರ್​ನಲ್ಲಿ 31 ರನ್​ ಕಲೆಹಾಕುವ ಮೂಲಕ ಅಂತಿಮ ಓವರ್​ನಲ್ಲಿ ಅತೀ ಹೆಚ್ಚು ರನ್​ಗಳ ಗುರಿ ಬೆನ್ನತ್ತಿ ಗೆದ್ದ ವಿಶೇಷ ದಾಖಲೆಯನ್ನು ಕೆಕೆಆರ್ ತನ್ನದಾಗಿಸಿಕೊಂಡಿದೆ.ಇದಲ್ಲದೆ ಐಪಿಎಲ್​ನಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿದ ಸಿಕ್ಸರ್ ಸರದಾರರ ಪಟ್ಟಿಗೂ ರಿಂಕು ಸಿಂಗ್ ಸೇರ್ಪಡೆಯಾಗಿದ್ದಾರೆ. ಇದಕ್ಕೂ ಮುನ್ನ ಕ್ರಿಸ್ ಗೇಲ್, ರಾಹುಲ್ ತೆವಾಠಿಯಾ, ರವೀಂದ್ರ ಜಡೇಜಾ ಮಾತ್ರ ಒಂದೇ ಓವರ್​ನಲ್ಲಿ 5 ಸಿಕ್ಸ್​ಗಳನ್ನು ಸಿಡಿಸಿದ್ದರು. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ರಿಂಕು ಸಿಂಗ್.
ಹಾಗೆಯೇ ಐಪಿಎಲ್​ನ ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ರಿಂಕು ಸಿಂಗ್ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಅಂತಿಮ ಓವರ್​ನಲ್ಲಿ ಅಬ್ಬರಿಸುವ ಮೂಲಕ ರಿಂಕು ಸಿಂಗ್ ಇದೀಗ ಹಲವು ದಾಖಲೆಗಳನ್ನು ನಿರ್ಮಿಸಿರುವುದು ವಿಶೇಷ.

source https://tv9kannada.com/photo-gallery/cricket-photos/ipl-2023-rinku-singh-creates-new-record-in-ipl-kannada-news-zp-au50-552761.html

Leave a Reply

Your email address will not be published. Required fields are marked *