IPL 2023: ಮೋಸದಾಟ ಆಡಿದ್ರಾ ಧೋನಿ? ಒಬ್ಬ ಬೌಲರ್​ಗಾಗಿ 4 ನಿಮಿಷ ಆಟ ನಿಲ್ಲಿಸಿದ ಸಿಎಸ್​ಕೆ ಕ್ಯಾಪ್ಟನ್..!

IPL 2023: ಮೋಸದಾಟ ಆಡಿದ್ರಾ ಧೋನಿ? ಒಬ್ಬ ಬೌಲರ್​ಗಾಗಿ 4 ನಿಮಿಷ ಆಟ ನಿಲ್ಲಿಸಿದ ಸಿಎಸ್​ಕೆ ಕ್ಯಾಪ್ಟನ್..!

ಚೆನ್ನೈ ಸೂಪರ್ ಕಿಂಗ್ಸ್ (Chennai Super King) ತಂಡ 10ನೇ ಬಾರಿ ಫೈನಲ್ ತಲುಪಿದೆ. ಎಂಎಸ್ ಧೋನಿ (MS Dhoni) ಸಾರಥ್ಯದ ಚೆನ್ನೈ ತಂಡ ಕ್ವಾಲಿಫೈಯರ್-1ರಲ್ಲಿ ಪ್ರಸ್ತುತ ವಿಜೇತ ಗುಜರಾತ್ ಟೈಟಾನ್ಸ್ (Gujarat Titans) ತಂಡವನ್ನು 15 ರನ್‌ಗಳಿಂದ ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ. ರುತುರಾಜ್ ಗಾಯಕ್ವಾಡ್ ಅವರ 60 ರನ್‌ಗಳ ಇನಿಂಗ್ಸ್ ಆಧಾರದ ಮೇಲೆ ಮೊದಲು ಬ್ಯಾಟ್ ಮಾಡಿದ ಚೆನ್ನೈ ಏಳು ವಿಕೆಟ್‌ಗಳನ್ನು ಕಳೆದುಕೊಂಡು 172 ರನ್ ಗಳಿಸಿತು. ಗುಜರಾತ್​ನ ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ನೋಡಿದಾಗ ಈ ಗುರಿ ಕಡಿಮೆ ಎನಿಸಿದರೂ ಚೆನ್ನೈನ ಅಮೋಘ ಬೌಲಿಂಗ್ ಮುಂದೆ ಈ ತಂಡ ಕೇವಲ 157 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ದಾಖಲೆಯ 10ನೇ ಬಾರಿಗೆ ಚೆನ್ನೈ ತಂಡವನ್ನು ಫೈನಲ್​ಗೆ ಕರೆದುಕೊಂಡು ಹೋದ ಶ್ರೇಯದ ನಡುವೆ ಕ್ಯಾಪ್ಟನ್ ಕೂಲ್ ದೊಡ್ಡ ವಿವಾದವೊಂದನ್ನು (MS Dhoni Controversy) ಮೈಮೇಲೆ ಎಳೆದುಕೊಂಡಿದ್ದಾರೆ. ಐಪಿಎಲ್ ನಿಯಮಗಳ ಪ್ರಕಾರ ಹೇಳುವುದಾದರೆ ಧೋನಿಯ ಈ ನಡೆ ಅವರನ್ನು 1 ಪಂದ್ಯದಿಂದ ಹೊರಗಿಡಬಹುದು ಅಥವಾ ದಂಡ ಕಟ್ಟುವಂತೆ ಮಾಡಬಹುದಾಗಿದೆ.

ಕನಿಷ್ಠ 5 ನಿಮಿಷಗಳ ಕಾಲ ಮೈದಾನದಲ್ಲಿರಬೇಕು

ವಾಸ್ತವವಾಗಿ ಗುಜರಾತ್ ಇನಿಂಗ್ಸ್‌ನ 16ನೇ ಓವರ್‌ನಲ್ಲಿ ಧೋನಿ ಲಂಕಾ ವೇಗಿ ಮತಿಶಾ ಪತಿರಾನಾಗೆ ಬೌಲಿಂಗ್ ಮಾಡಲು ಹೇಳಿದರು. ಆದರೆ ಅಂಪೈರ್ ಅದನ್ನು ತಡೆದರು. ಏಕೆಂದರೆ ತನ್ನ ಖೋಟಾದ ಮೊದಲ ಓವರ್ ಮುಗಿದ ನಂತರ ಪತಿರಾನ 9 ನಿಮಿಷಗಳ ವಿರಾಮ ತೆಗೆದುಕೊಂಡು ಮೈದಾನದಿಂದ ಹೊರಗಿದ್ದರು. ನಿಯಮಗಳ ಪ್ರಕಾರ ಬ್ರೇಕ್ ತೆಗೆದುಕೊಂಡ ಬೌಲರ್ ವಿರಾಮದ ನಂತರ ಕನಿಷ್ಠ 5 ನಿಮಿಷಗಳ ಕಾಲ ಮೈದಾನದಲ್ಲಿ ಸಮಯ ಕಳೆದಿರಬೇಕು. ಆಗ ಮಾತ್ರ ಆತ ಬೌಲಿಂಗ್ ಮಾಡಲು ಅರ್ಹನಾಗಿರುತ್ತಾನೆ. ಆದರೆ ಪತಿರಾನ ವಿರಾಮದಿಂದ ಬಂದೊಡನೆ ಬೌಲಿಂಗ್ ಮಾಡಲು ಸಿದ್ಧರಾದರು. ಹೀಗಾಗಿ ಅಂಪೈರ್ ಪತಿರಾನ ಬೌಲ್ ಮಾಡದಂತೆ ತಡೆದರು.

ಆದರೆ ಅಂಪೈರ್ ನಿಯಮವನ್ನು ಗೌರವಿಸದ ಸಿಎಸ್‌ಕೆ ನಾಯಕ ಧೋನಿ ಅಂಪೈರ್ ಜೊತೆ ಮಾತಿಗಿಳಿದರು. ಬಳಿಕ ಈ ಇಬ್ಬರ ನಡುವೆ ಬರೋಬ್ಬರಿ 4 ನಿಮಿಷಗಳ ಕಾಲ ಮಾತುಕತೆ ನಡೆಯಿತು. ಆ ವೇಳೆಗೆ ವಿರಾಮದ ನಂತರ ಪತಿರಾನ ಮೈದಾನಕ್ಕೆ ಬಂದು 5 ನಿಮಿಷ ಕಳೆದಿತ್ತು. ಹೀಗಾಗಿ ಅಂಪೈರ್, ಪತಿರಾನ ಬೌಲಿಂಗ್ ಮಾಡಲು ಅವಕಾಶ ನೀಡಿದರು.

MS Dhoni on Retirement: ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ಎಂಎಸ್ ಧೋನಿ..!

ದಂಡ ಅಥವಾ ಒಂದು ಪಂದ್ಯಕ್ಕೆ ನಿಷೇಧ

ಇದೀಗ ಪಂದ್ಯದ ನಂತರ ಈ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದ್ದು, ಧೋನಿ ಉದ್ದೇಶಪೂರ್ವಕವಾಗಿ ಸಮಯ ವ್ಯರ್ಥ ಮಾಡಿದ್ದಾರೆ ಎಂದು ಕ್ರಿಕೆಟ್ ಪಂಡಿತರ ಜೊತೆಗೆ ಹಲವು ನೆಟ್ಟಿಗರು ಕೂಡ ಧೋನಿಯ ನಡೆಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ, ಈ ಬಗ್ಗೆ ಆಡಳಿತ ಮಂಡಳಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಆಡಳಿತ ಮಂಡಳಿ ಧೋನಿಯ ಈ ನಡೆಗೆ ಕ್ರಮಕೈಗೊಂಡರೆ ಅನವಶ್ಯಕವಾಗಿ ಸಮಯ ಹಾಳು ಮಾಡಿದ್ದಕ್ಕಾಗಿ ಧೋನಿಗೆ ದಂಡ ಅಥವಾ ಒಂದು ಪಂದ್ಯಕ್ಕೆ ನಿಷೇಧ ಹೇರಬಹುದಾಗಿದೆ. ವಾಸ್ತವವಾಗಿ ಐಪಿಎಲ್ ನಿಯಮಗಳು ಕೂಡ ಇದನ್ನೇ ಹೇಳುತ್ತವೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗವಾಸ್ಕರ್

ಧೋನಿಯ ಈ ಕ್ರಮದ ಬಗ್ಗೆ ಹಲವು ಕ್ರಿಕೆಟ್ ಪಂಡಿತರು ಅಸಮಾಧಾನ ಹೊರಹಾಕಿದ್ದಾರೆ. ಅವರಲ್ಲಿ ಪ್ಲೇ ಆಫ್ ಪಂದ್ಯಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಧೋನಿಯ ಆಟೋಗ್ರಾಫನ್ನು ತನ್ನ ಅಂಗಿಯ ಮೇಲೆ ಹಾಕಿಸಿಕೊಂಡಿದ್ದ ಮಾಜಿ ಟೀಂ ಇಂಡಿಯಾ ಆಟಗಾರ ಸುನೀಲ್ ಗವಾಸ್ಕರ್ ಕೂಡ ಇದ್ದಾರೆ. ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಗವಾಸ್ಕರ್, ಒತ್ತಡದ ಸಂದರ್ಭಗಳಲ್ಲಿ ಕೆಲವೊಮ್ಮೆ ಅಂಪೈರ್ ತಪ್ಪು ಮಾಡಿದರೂ ಸಹ ನೀವು ಅಂಪೈರ್ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/ms-dhoni-controversy-ms-dhoni-discussion-with-umpire-over-matheesha-pathirana-bowling-four-minute-psr-586023.html

Leave a Reply

Your email address will not be published. Required fields are marked *