IPL 2023: RCB ಅಭಿಮಾನಿಗಳಿಗೆ ಖಡಕ್ ಸೂಚನೆ ನೀಡಿದ ಗಂಭೀರ್..!

IPL 2023: ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಆರ್​ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಫಾಫ್ ಡುಪ್ಲೆಸಿಸ್ ಉತ್ತಮ ಆರಂಭ ಒದಗಿಸಿದ್ದರು.
ಮೊದಲ ವಿಕೆಟ್​ಗೆ 96 ರನ್​ಗಳ ಜೊತೆಯಾಟವಾಡಿದ ಕಿಂಗ್ ಕೊಹ್ಲಿ 44 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 61 ರನ್​ ಬಾರಿಸಿ ಔಟಾದರು. ಆ ಬಳಿಕ ಬಂದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಬಿರುಸಿನ ಬ್ಯಾಟಿಂಗ್ ಮೂಲಕ 115 ರನ್​ಗಳ ಜೊತೆಯಾಟವಾಡಿದರು. ಈ ವೇಳೆ ಡುಪ್ಲೆಸಿಸ್ 46 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ ಅಜೇಯ 76 ರನ್​ ಬಾರಿಸಿದರೆ, ಗ್ಲೆನ್ ಮ್ಯಾಕ್ಸ್​ವೆಲ್ 29 ಎಸೆತಗಳಲ್ಲಿ 6 ಸಿಡಿಲಬ್ಬರದ ಸಿಕ್ಸ್ ಹಾಗೂ 3 ಫೋರ್​ನೊಂದಿಗೆ 59 ರನ್​ ಕಲೆಹಾಕಿದರು. ಪರಿಣಾಮ ಆರ್​ಸಿಬಿ ತಂಡದ ಮೊತ್ತವು 212 ಕ್ಕೆ ಬಂದು ನಿಂತಿತು.ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆರ್​ಸಿಬಿ ಬೌಲರ್ ಮೊಹಮ್ಮದ್ ಸಿರಾಜ್ ಆರಂಭಿಕ ಆಘಾತ ನೀಡಿದ್ದರು. ಕೇವಲ 23 ರನ್​ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಲಕ್ನೋ ತಂಡಕ್ಕೆ ಆ ಬಳಿಕ ನೆರವಾಗಿದ್ದು ಮಾರ್ಕಸ್ ಸ್ಟೋಯಿನಿಸ್. ಕೇವಲ 30 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಫೋರ್​ನೊಂದಿಗೆ ಸ್ಟೋಯಿನಿಸ್ 65 ರನ್​ ಬಾರಿಸಿದರು.ಆ ನಂತರ ಬಂದ ನಿಕೋಲಸ್ ಪೂರನ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು. 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದ ಪೂರನ್ ಅಂತಿಮವಾಗಿ 19 ಎಸೆತಗಳಲ್ಲಿ 7 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ನೊಂದಿಗೆ 62 ರನ್​ ಚಚ್ಚಿದರು. ಅಲ್ಲಿಗೆ ಪಂದ್ಯವು ಲಕ್ನೋ ಸೂಪರ್ ಜೈಂಟ್ಸ್​ ಕಡೆ ವಾಲಿತು.
ಇನ್ನು ಆಯುಷ್ ಬದೋನಿಯ 30 ರನ್​ಗಳ ನೆರವಿನಿಂದ ಪಂದ್ಯವು ಅಂತಿಮ ಓವರ್​ನತ್ತ ಸಾಗಿತು. ಕೊನೆಯ ಓವರ್​ನಲ್ಲಿ 5 ರನ್​ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ ಉನಾದ್ಕಟ್ 1 ರನ್​ ತೆಗೆದರು. 2ನೇ ಎಸೆತದಲ್ಲಿ ಮಾರ್ಕ್​ ವುಡ್ ಬೌಲ್ಡ್ ಆದರು. ಇನ್ನು 3ನೇ ಎಸೆತದಲ್ಲಿ ರವಿ ಬಿಷ್ಣೋಯ್ 2 ರನ್ ಕಲೆಹಾಕಿದರು. 4ನೇ ಎಸೆತದಲ್ಲಿ 1 ರನ್​. ಅಲ್ಲಿಗೆ ಸ್ಕೋರ್ ಸಮಗೊಂಡಿತು. ಆದರೆ 5ನೇ ಎಸೆತದಲ್ಲಿ ಉನಾದ್ಕಟ್ ಔಟ್ ಆಗುವುದರೊಂದಿಗೆ ಪಂದ್ಯವು ಮತ್ತೆ ರೋಚಕತೆಯತ್ತ ಸಾಗಿತು.ಇತ್ತ ಸೂಪರ್ ಓವರ್ ನಿರೀಕ್ಷೆಯಲ್ಲಿ ಆರ್​ಸಿಬಿ ತಂಡವು ಫೀಲ್ಡಿಂಗ್ ಸೆಟ್ ಮಾಡಿತು. ಆದರೆ ಅಂತಿಮ ಎಸೆತದಲ್ಲಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಚೆಂಡು ಹಿಡಿಯಲು ವಿಫಲರಾದ ಕಾರಣ ಅವೇಶ್ ಖಾನ್ 1 ಬೈ ರನ್ ಓಡಿದರು. ಇದರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು 1 ವಿಕೆಟ್​ನಿಂದ ಗೆಲುವು ದಾಖಲಿಸಿತು.ಇಡೀ ಪ್ರೇಕ್ಷಕರನ್ನು ತುದಿಗಾಲಲ್ಲಿ ಕುಳ್ಳಿರಿಸಿದ್ದ ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಗಾಂಭೀರ್ಯತೆಗೆ ಒಳಗಾಗಿದ್ದರು. ಕೊನೆಯ ಎಸೆತದವರೆಗೂ ಫುಲ್ ಟೆನ್ಶನ್​ನಲ್ಲಿ ಕಾಣಿಸಿಕೊಂಡ ಗಂಭೀರ್ ಲಕ್ನೋ ಗೆಲ್ಲುತ್ತಿದ್ದಂತೆ ಭರ್ಜರಿಯಾಗಿ ಸಂಭ್ರಮಿಸಿದರು.ಅಷ್ಟೇ ಅಲ್ಲದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಗುರಿಯಾಗಿಸಿ ಬಾಯಿ ಮುಚ್ಕೊಂಡಿರಬೇಕು ಎಂದು ಸನ್ನೆ ಮಾಡಿದರು. ಇದೀಗ ಗೌತಮ್ ಗಂಭೀರ್ ಅವರ ಖಡಕ್ ಸೂಚನೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಮ್ ಇಂಡಿಯಾದ ಮಾಜಿ ಆಟಗಾರನ ನಡೆಗೆ ಆಕ್ರೋಶಗಳು ವ್ಯಕ್ತವಾಗುತ್ತಿದೆ.

source https://tv9kannada.com/photo-gallery/cricket-photos/ipl-2023-lsgs-gautam-gambhir-angrily-silences-rcb-fans-kannada-news-zp-au50-553810.html

Views: 0

Leave a Reply

Your email address will not be published. Required fields are marked *