

ಸೂಪರ್ ಸಂಡೆ ಡಬಲ್ ಹೆಡರ್ ದಿನದಂದು ನಡೆದ ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ (Mumbai Indians and Kolkata Knight Riders) ತಂಡವನ್ನು 5 ವಿಕೆಟ್ಗಳಿಂದ ಮಣಿಸಿ ಟೂರ್ನಿಯಲ್ಲಿ ಎರಡನೇ ಗೆಲುವು ಸಾಧಿಸಿತ್ತು. ನಿಯಮಿತ ನಾಯಕ ರೋಹಿತ್ ಶರ್ಮಾ ಬದಲಿಗೆ ಮುಂಬೈ ಇಂಡಿಯನ್ಸ್ ತಂಡದ ಸಾರಥ್ಯ ವಹಿಸಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ತಂಡಕ್ಕೆ ಜಯ ತಂದುಕೊಡುವುದಲ್ಲಿ ಶ್ರಮವಹಿಸಿದ್ದರು. ಆದರೆ ಪಂದ್ಯದ ನಡುವೆ ಸೂರ್ಯ ಮಾಡಿಕೊಂಡ ಎಡವಟ್ಟಿನಿಂದ ದಂಡದ ಹೊರೆ ಹೊರಬೇಕಾಗಿ ಬಂದಿದೆ. ಸೂರ್ಯಕುಮಾರ್ ಮಾತ್ರವಲ್ಲದೆ ತಂಡದ ಮತ್ತೊಬ್ಬ ಆಟಗಾರ ಹೃತಿಕ್ ಶೋಕೀನ್ಗೂ (Hrithik Shokeen) ದಂಡ ವಿಧಿಸಲಾಗಿದೆ. ಇವರೊಂದಿಗೆ ಕೆಕೆಆರ್ ನಾಯಕ ನಿತೀಶ್ ರಾಣಾ ( Nitish Rana) ಕೂಡ ಐಪಿಎಲ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಡಿ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರತಿಯೊಬ್ಬ ಆಟಗಾರನೂ ವಿಭಿನ್ನ ಶಿಕ್ಷೆಗೆ ಗುರಿಯಾಗಿದ್ದು, ಮ್ಯಾಚ್ ರೆಫರಿ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡ ನಂತರ ಅವರಿಗೆ ಈ ಶಿಕ್ಷೆಯನ್ನು ನೀಡಲಾಗಿದೆ.
ಸೂರ್ಯನಿಗೆ 12 ಲಕ್ಷ ರೂ ದಂಡ
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಸೂರ್ಯಕುಮಾರ್ ಯಾದವ್ ಅವರು ನಿಧಾನಗತಿಯ ಓವರ್ ರೇಟ್ನಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿದೆ. ಹೀಗಾಗಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರೊಂದಿಗೆ ಸೂರ್ಯ ಐಪಿಎಲ್ನಲ್ಲಿ ನಿಧಾನಗತಿಯ ಓವರ್ನಿಂದಾಗಿ ದಂಡನೆಗೆ ಒಳಗಾದ ನಾಲ್ಕನೇ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ಆರ್ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ರಾಜಸ್ಥಾನ್ ನಾಯಕ ಸಂಜು ಸ್ಯಾಮ್ಸನ್ ಮತ್ತು ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೂ ದಂಡ ವಿಧಿಸಲಾಗಿದೆ.
IPL 2023: ಈ ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಹೊಡೆಸಿಕೊಂಡಿರುವ ಬೌಲರ್ಗಳಿವರು
ರಾಣಾಗೆ ಪಂದ್ಯ ಶುಲ್ಕದಲ್ಲಿ ಶೇ.25ರಷ್ಟು ಕಡಿತ
ಪಂದ್ಯದ ವೇಳೆ ಮೈದಾನದಲ್ಲಿ ಅಸಭ್ಯ ಭಾಷೆ ಬಳಸಿದ ಕೆಕೆಆರ್ ನಾಯಕ ನಿತೀಶ್ ರಾಣಾ ಶಿಕ್ಷೆಗೆ ಗುರಿಯಾಗಿದ್ದಾರೆ. ಪಂದ್ಯದ ರೆಫರಿ, ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.21 ರ ಅಡಿಯಲ್ಲಿ ತಪ್ಪಿತಸ್ಥರೆಂದು ರಾಣಾ ವಿರುದ್ಧ ಆರೋಪ ಹೊರಿಸಿದ್ದಾರೆ. ಹೀಗಾಗಿ ಅವರ ಪಂದ್ಯದ ಶುಲ್ಕವನ್ನು ಶಿಕ್ಷೆಯಾಗಿ ಶೇಕಡಾ 25 ರಷ್ಟು ಕಡಿತಗೊಳಿಸಲಾಗಿದೆ.
ಹೃತಿಕ್ ಶೋಕೀನ್ಗೆ ಭಾರೀ ದಂಡ
ನಿತೀಶ್ ರಾಣಾ ಅಲ್ಲದೆ ಮುಂಬೈ ಇಂಡಿಯನ್ಸ್ ಬೌಲರ್ ಹೃತಿಕ್ ಶೋಕೀನ್ ಕೂಡ ನಿಯಮ ಉಲ್ಲಂಘನೆಗಾಗಿ ದಂಡ ಕಟ್ಟಬೇಕಾಗಿದೆ. ಪಂದ್ಯ ಶುಲ್ಕದ ಶೇ 10ರಷ್ಟನ್ನು ದಂಡವಾಗಿ ಕಡಿತಗೊಳಿಸಲಾಗಿದೆ. ಐಪಿಎಲ್ನ ನೀತಿ ಸಂಹಿತೆಯ ಸೆಕ್ಷನ್ 2.5 ರ ಅಡಿಯಲ್ಲಿ ಅವರನ್ನು ಹಂತ 1 ರ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ.
ವಾಸ್ತವವಾಗಿ, ನಿತೀಶ್ ಮತ್ತು ಹೃತಿಕ್ ಇಬ್ಬರ ನಡುವೆ ಮೈದಾನದಲ್ಲಿ ವಾಗ್ವಾದ ನಡೆದಿತ್ತು, ನಂತರ ಸಾಕಷ್ಟು ಗಲಾಟೆ ನಡೆದಿತ್ತು. ಕೆಕೆಆರ್ ಇನ್ನಿಂಗ್ಸ್ನ 9 ನೇ ಓವರ್ನಲ್ಲಿ ನಿತೀಶ್ ರಾಣಾ ಅವರ ವಿಕೆಟ್ ಅನ್ನು ಹೃತಿಕ್ ಶೋಕೀನ್ ಪಡೆದಾಗ ಈ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ವೆಂಕಟೇಶ್ ಅಯ್ಯರ್ ಅವರ ಬಿರುಸಿನ ಶತಕದ ಹಿನ್ನಲೆಯಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ಗೆ 186 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಮುಂಬೈ ಕಿಶನ್ ಅವರ ಅರ್ಧಶತಕದ ನೆರವಿನಿಂದ 17.4 ಓವರ್ಗಳಲ್ಲಿ ಗುರಿ ಸಾಧಿಸಿತು.