16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ತಲುಪಿದೆ. ಈಗಾಗಲೇ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯ ಮುಕ್ತಾಯಗೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದೆ. ಮೇ 28 ರಂದು ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ ನಡೆಯುವ ಮೂಲಕ 16ನೇ ಆವೃತ್ತಿಯ ಐಪಿಎಲ್ಗೆ ತೆರೆ ಬೀಳಲಿದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾ (Team India) ಆಟಗಾರರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕಣಕ್ಕಿಳಿಯಲಿದೆ. ಐಪಿಎಲ್ ಕ್ವಾಲಿಫೈಯರ್ 2 ಮತ್ತು ಫೈನಲ್ನಲ್ಲಿ ಆಡುವ ಆಟಗಾರರನ್ನು ಹೊರತು ಪಡಿಸಿ ಉಳಿದ ಆಟಗಾರರ ಪೈಕಿ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಒಂದು ಬ್ಯಾಚ್ ಈಗಾಗಲೇ ಲಂಡನ್ಗೆ ತೆರಳಿದೆ. ಹಾಗಾದರೆ, ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC WTC Final) ಪಂದ್ಯ ಯಾವಾಗ?, ಯಾರ ವಿರುದ್ಧ?.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನ ಈ ಐತಿಹಾಸಿಕ ಕಾದಾಟಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಈ ಮಹತ್ವದ ಟೂರ್ನಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾವನ್ನು ಕೂಡ ಪ್ರಕಟ ಮಾಡಿದೆ.
IPL 2023: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಅಂಪೈರ್ ತೀರ್ಪು
ಈ ಹಿಂದೆ ಟೆಸ್ಟ್ ತಂಡದಿಂದ ಹೊರಬಿದ್ದ ಅಜಿಂಕ್ಯಾ ರಹಾನೆ ಕಮ್ಬ್ಯಾಕ್ ಮಾಡಿದ್ದಾರೆ. ಸದ್ಯ ಸಾಗುತ್ತಿರುವ ಐಪಿಎಲ್‌ನಲ್ಲಿ ಸಿಎಸ್ಕೆ ಪರ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ರಹಾನೆ ಸ್ಥಾನ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದು ಶುಭ್ಮನ್ ಗಿಲ್ ಆಯ್ಕೆ ಆಗಿದ್ದಾರೆ. ಕೆಎಸ್ ಭರತ್ ವಿಕೆಟ್ ಕೀಪರ್ ಆಗಿರಲಿದ್ದಾರೆ.
ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಆಲ್ರೌಂಡರ್ಗಳಾಗಿ ನಾಲ್ವರು ಆಯ್ಕೆ ಆಗಿದ್ದು ರವಿಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಥಾಕೂರ್ ಹಾಗೂ ರವಿಚಂದ್ರನ್ ಅಶ್ವಿನ್ ಇದ್ದಾರೆ. ವೇಗಿಗಳ ವಿಭಾಗದಲ್ಲಿ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನಾದ್ಕಟ್ ಸ್ಥಾನ ಪಡೆದುಕೊಂಡಿದ್ದಾರೆ.
ಕೂಕಬುರಾ ಬಾಲ್ vs ಡ್ಯೂಕ್ಸ್ ಬಾಲ್:
ಈ ಮಹತ್ವದ ಪಂದ್ಯಕ್ಕೆ ಕೂಕಬುರಾ ಬಾಲ್ ಬದಲು ಡ್ಯೂಕ್ಸ್ ಚೆಂಡನ್ನೇ ನಾವು ಉಪಯೋಗಿಸುತ್ತೇವೆ ಎಂದು ಬಿಸಿಸಿಐ ಹೇಳಿದೆ. ಇದರ ನಡುವೆ ಆಸ್ಟ್ರೇಲಿಯಾ ತಂಡದ ಮಾಜಿ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಡ್ಯೂಕ್‌ಗಿಂತ ಕೂಕಬುರಾ ಚೆಂಡು ಉತ್ತಮ ಎಂದು ಹೇಳಿದ್ದಾರೆ. ”ಓವಲ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮವಾಗಿರುತ್ತದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸ್ಪಿನ್ನರ್ಗಳಿಗೆ ಸಹ ಬೆಂಬಲಿಸುತ್ತದೆ. ಡ್ಯೂಕ್ ಅಷ್ಟೊಂದು ಪರಿಣಾಮಕಾರಿ ಇಲ್ಲ. ಹೀಗಾಗಿ ಕೂಕಬುರಾ ಚೆಂಡು ಬಳಕೆ ಆಗಲಿ,” ಎಂದು ಪಾಂಟಿಂಗ್ ಹೇಳಿದ್ದರು.
ಆದರೆ, ಪಾಂಟಿಂಗ್ ಹೇಳಿಕೆಯನ್ನು ಬಿಸಿಸಿಐ ವಿರೋಧಿಸಿದ್ದು, ನಾವು ಕೂಕಬೂರಾ ಚೆಂಡಿನಲ್ಲಿ ಟೆಸ್ಟ್ ಚಾಂಪಿಯನ್ಶಿಪ್ ಆಡಲ್ಲ. ಡ್ಯೂಕ್ಸ್ ಬಾಲ್ನಲ್ಲೇ ಕಣಕ್ಕಿಳಿಯುತ್ತೇವೆ ಎಂದು ಹೇಳಿದೆ. ”ನಾವು ಡ್ಯೂಕ್ಸ್ ಬಾಲ್ ಜೊತೆ ಆಡುತ್ತೇವೆ. ನಮ್ಮ ಆಟಗಾರರು ಈಗಾಗಲೇ ಡ್ಯೂಕ್ಸ್‌ನೊಂದಿಗೆ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಐಪಿಎಲ್‌ನಲ್ಲಿ ಫೈನಲ್‌ಗೆ ತಯಾರಾಗಲು ವೇಗಿಗಳಿಗೆ ಡ್ಯೂಕ್ಸ್ ಬಾಲ್ ಕೂಡ ನೀಡಲಾಗಿದೆ. ಚೆಂಡಿನ ಬದಲಾವಣೆಯ ಬಗ್ಗೆ ನಾವು ಏನನ್ನೂ ಕೇಳಿಲ್ಲ. ಪಾಂಟಿಂಗ್ ಈ ಬಗ್ಗೆ ಎಲ್ಲಿ ಮಾತನಾಡಿದರೊ ನಮಗೆ ಗೊತ್ತಿಲ್ಲ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್ಸೈಡ್‌ಸ್ಪೋರ್ಟ್‌ಗೆ ತಿಳಿಸಿದ್ದಾರೆ.
WTC ಫೈನಲ್‌ಗೆ ಭಾರತದ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹದ್. ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ