IPL 2023: KGF ತೂಫಾನ್: ಬರೋಬ್ಬರಿ 108 ರನ್​ಗಳು​..!

IPL 2023 RCB vs LSG Highlights: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ KGF ಬಿರುಗಾಳಿ ಎಬ್ಬಿಸಿದ್ದಾರೆ. ಈ ಬಿರುಗಾಳಿಗೆ ಸಿಕ್ಸ್​ಗಳ ಸುರಿಮಳೆಯಾಗಿರುವುದು ವಿಶೇಷ. ಹೌದು, ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆಎಲ್ ರಾಹುಲ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಕನ್ನಡಿಗನ ನಿರ್ಧಾರ ತಪ್ಪು ಎಂಬುದನ್ನು ವಿರಾಟ್ ಕೊಹ್ಲಿ ಆರಂಭದಲ್ಲೇ ನಿರೂಪಿಸಿದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ ಆರ್​ಸಿಬಿಗೆ ಸ್ಪೋಟಕ ಆರಂಭ ಒದಗಿಸಿದರು.ಪವರ್​ಪ್ಲೇನಲ್ಲೇ ಲಕ್ನೋ ಬೌಲರ್​ಗಳ ಬೆಂಡೆತ್ತಿದ ವಿರಾಟ್ ಕೊಹ್ಲಿ-ಫಾಫ್ ಡುಪ್ಲೆಸಿಸ್ ಜೋಡಿ 56 ರನ್​ ಕಲೆಹಾಕಿದ್ದರು. ಆ ಬಳಿಕ 44 ಎಸೆತಗಳಲ್ಲಿ 61 ರನ್​ ಬಾರಿಸಿ ಕೊಹ್ಲಿ ನಿರ್ಗಮಿಸಿದರು. ಇದಾದ ಬಳಿಕ ಜೊತೆಯಾದ ಫಾಫ್ ಡುಪ್ಲೆಸಿಸ್ ಹಾಗೂ ಗ್ಲೆನ್ ಮ್ಯಾಕ್ಸ್​ವೆಲ್ 7 ಓವರ್​ಗಳಲ್ಲಿ 48 ರನ್​ ಕಲೆಹಾಕಿದರು.ಇನ್ನು ಆರ್​ಸಿಬಿ ತಂಡದ ಅಸಲಿ ಆಟ ಶುರುವಾಗಿದ್ದೇ ಕೊನೆಯ 7 ಓವರ್​ಗಳಿರುವಾಗ..ಈ ಹಂತದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೆನ್ ಮ್ಯಾಕ್ಸ್​ವೆಲ್ ಹಾಗೂ ಫಾಫ್ ಡುಪ್ಲೆಸಿಸ್ ಮೈದಾನದ ಮೂಲೆ ಮೂಲೆಗೂ ಸಿಕ್ಸ್​-ಫೋರ್​ಗಳ ಸುರಿಮಳೆಗೈದರು. ಪರಿಣಾಮ ಕೊನೆಯ 42 ಎಸೆತಗಳಲ್ಲಿ ಆರ್​ಸಿಬಿ ತಂಡ ಕಲೆಹಾಕಿದ್ದು ಬರೋಬ್ಬರಿ 108 ರನ್​ಗಳು. ಅಂದರೆ ಪ್ರತಿ ಓವರ್​ಗೆ 15.42 ಸರಾಸರಿಯಲ್ಲಿ ರನ್ ಬಾರಿಸಿದ್ದರು. ಇನ್ನು ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 4 ಸಿಕ್ಸ್ ಸಿಡಿಸಿದರೆ, ಫಾಫ್ ಡುಪ್ಲೆಸಿಸ್ 5 ಸಿಕ್ಸ್ ಬಾರಿಸಿದರು. ಹಾಗೆಯೇ ಗ್ಲೆನ್ ಮ್ಯಾಕ್ಸ್​ವೆಲ್ 6 ಸಿಕ್ಸ್ ಸಿಡಿಸುವ ಮೂಲಕ ಒಂದೆಜ್ಜೆ ಮುಂದೆ ಹೋದರು. K (ಕೊಹ್ಲಿ) G (ಗ್ಲೆನ್ ಮ್ಯಾಕ್ಸ್​ವೆಲ್) F (ಫಾಫ್ ಡುಪ್ಲೆಸಿಸ್)..ತ್ರಿಮೂರ್ತಿಗಳ ಈ ತೂಫಾನ್ ಬ್ಯಾಟಿಂಗ್ ಪರಿಣಾಮ ಆರ್​ಸಿಬಿ ತಂಡವು ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಆರ್​ಸಿಬಿ ​212 ರನ್ ಕಲೆಹಾಕಿತು.
ಇನ್ನು ಈ ಪಂದ್ಯದಲ್ಲಿ KGF 212 ರನ್​ ಬಾರಿಸಿದರೂ ಆರ್​ಸಿಬಿ ತಂಡಕ್ಕೆ ಗೆಲ್ಲಲು ಸಾಧ್ಯವಾಗಿಲ್ಲ ಎಂಬುದೇ ವಿಪರ್ಯಾಸ.

source https://tv9kannada.com/photo-gallery/cricket-photos/ipl-2023-rcb-vs-lsg-highlights-rcb-innings-progression-kannada-news-zp-au50-553408.html

Leave a Reply

Your email address will not be published. Required fields are marked *