
ಐಪಿಎಲ್ (IPL 2023) ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸತತ ಎರಡನೇ ಸೋಲು ಕಂಡಿದೆ. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ (Mumbai Indians vs Lucknow Super Giants) ವಿರುದ್ಧ 81 ರನ್‌ಗಳಿಂದ ಸೋತ ಲಕ್ನೋ ಟೂರ್ನಿಯಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಿತು. ಪಂದ್ಯದುದ್ದಕ್ಕೂ ಲಕ್ನೋ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಎಲ್ಲಿಯೂ ಗೆಲುವಿಗಾಗಿ ಹೋರಾಟ ನೀಡಿದ್ದು ಕಂಡು ಬರಲಿಲ್ಲ. ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡವಾಗಿರುವ ಮುಂಬೈ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಲಕ್ನೋ ತಂಡಕ್ಕೆ 183 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಗುರಿ ಬೆನ್ನಟ್ಟಿದ ಕೃನಾಲ್ ಪಾಂಡ್ಯ ತಂಡಕ್ಕೆ ಸಂಪೂರ್ಣ 20 ಓವರ್ ಕೂಡ ಆಡಲು ಸಾಧ್ಯವಾಗಲಿಲ್ಲ. ಕೇವಲ 16.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡ ಲಕ್ನೋ 101 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಈ ಕಳಪೆ ಪ್ರದರ್ಶನ ನೋಡಿದ ತಂಡದ ಮಾಲೀಕ ಸಂಜೀವ್ ಗೋಯೆಂಕಾ (Sanjiv Goenka) ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ವಾಸ್ತವವಾಗಿ ಪಂದ್ಯ ಮುಗಿದ ಬಳಿಕ ತಂಡದ ಮೆಂಟರ್ ಗೌತಮ್ ಗಂಭೀರ್ ಎದುರು ಸಂಜೀವ್ ಗೋಯೆಂಕಾ ಮೈದಾನದಲ್ಲೇ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಈ ಇಬ್ಬರ ನಡುವಿನ ಮಾತುಕತೆಯ ವಿಡಿಯೋ ನೋಡಿದ ನೆಟ್ಟಿಗರು ಗಂಭೀರ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಗೌತಮ್ ಗಂಭೀರ್ ಅವರ ಕೆಲಸಕ್ಕೆ ಕುತ್ತು ಎದುರಾಗಬಹುದು ಎಂದು ನೆಟ್ಟಿಗರು ಗಂಭೀರ್ ಅವರ ಕಾಲೆಳೆದಿದ್ದಾರೆ.
IPL 2023: ಕೊಹ್ಲಿಯನ್ನು ಕೆಣಕಿದ್ದಕ್ಕೆ ರಿವೇಂಜ್? ನವೀನ್ಗೆ ತಿರುಗೇಟು ಕೊಟ್ಟ ಮುಂಬೈ ಆಟಗಾರರು ..!
ಫೋಟೋ ವೈರಲ್
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ ತಂಡದ ಮಾಲೀಕ ಗೋಯೆಂಕಾ ಕೋಪಗೊಂಡಿರುವುದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಈ ನಡುವೆ ಗಂಭೀರ್ ಅವರ ಮನವೊಲಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಹೀಗಾಗಿ ತಂಡದ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ಸಂಜೀವ್ ಗೋಯೆಂಕಾ, ಗಂಭೀರ್ ಅವರನ್ನು ಮೆಂಟರ್ ಹುದ್ದೆಯಿಂದ ಕೆಳಗಿಳಿಸಬಹುದು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
View this post on Instagram
ವಿವಾದದಲ್ಲಿ ಲಕ್ನೋ ತಂಡ
ಈ ಪಂದ್ಯದಲ್ಲಿ ಲಕ್ನೋ ತಂಡ ಒಂದಲ್ಲ ಎರಡಲ್ಲ ಹಲವು ತಪ್ಪುಗಳನ್ನು ಮಾಡಿತು. ತಂಡದ ಬೌಲಿಂಗ್ ವಿಭಾಗ ಸರಿಯಾಗಿ ಕೆಲಸ ಮಾಡಲಿಲ್ಲ. ಅಲ್ಲದೆ ಸತತ ವಿಕೆಟ್ ಉರುಳುತ್ತಿದ್ದರೂ ಬ್ಯಾಟ್ಸ್ಮನ್ಗಳು ಜವಬ್ದಾರಿಯ ಬ್ಯಾಟಿಂಗ್ ನಡೆಸಲಿಲ್ಲ. ನಾಯಕನೂ ಸೇರಿದಂತೆ ತಂಡದ ಪ್ರಮುಖ ಬ್ಯಾಟರ್ಗಳಾದ ಸ್ಟೋಯ್ನಿಸ್, ಪೂರನ್, ಹೂಡ ಅಗ್ಗವಾಗಿ ವಿಕೆಟ್ ಒಪ್ಪಿಸಿದರು. ಇದು ಕೂಡ ತಂಡದ ಮಾಲೀಕರ ಕೋಪಕ್ಕೆ ಕಾರಣವಾಗಿರಬಹುದು. ಇದಲ್ಲದೆ ಆಟದ ಹೊರತಾಗಿ ಲಕ್ನೋ ತಂಡ ಇಡೀ ಟೂರ್ನಿಯಲ್ಲಿ ವಿವಾದಗಳಿಂದಲೇ ಗಮನ ಸೆಳೆದಿತ್ತು. ತಂಡದ ಬೌಲರ್ ನವೀನ್ ಉಲ್ ಹಕ್ ಮತ್ತು ಮೆಂಟರ್ ಗೌತಮ್ ಗಂಭೀರ್ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು.
ಮೈದಾನದ ಬಳಿಕ ಸೋಶಿಯಲ್ ಮೀಡಿಯಾದಲ್ಲೂ ಈ ವಿವಾದ ಮುಂದುವರೆದಿತ್ತು. ಇದು ಲಕ್ನೋ ತಂಡದ ಮೇಲೆ ಸಾಲಷ್ಟು ಪರಿಣಾಮ ಬೀರಿತ್ತು. ಇದೀಗ ಸಂಜೀವ್ ಗೋಯೆಂಕಾ ಜೊತೆಗಿನ ಗೌತಮ್ ಗಂಭೀರ್ ಫೋಟೋ ನೋಡಿದರೆ, ಇದು ಲಕ್ನೋ ತಂಡದ ಜೊತೆ ಗಂಭೀರ್ ಅವರ ಕೊನೆಯ ಸೀಸನ್ ಎಂಬ ಮಾತು ಕೇಳಿಬರುತ್ತಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ