IPL 2023: ಕೊಹ್ಲಿಯನ್ನು ಕೆಣಕಿದ್ದಕ್ಕೆ ರಿವೇಂಜ್? ನವೀನ್​ಗೆ ತಿರುಗೇಟು ಕೊಟ್ಟ ಮುಂಬೈ ಆಟಗಾರರು ..!

ಮುಂಬೈ ಇಂಡಿಯನ್ಸ್ ಕ್ವಾಲಿಫೈಯರ್ 2 ಪ್ರವೇಶಿಸಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ತಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 81 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಎಲಿಮಿನೇಟರ್​ನಲ್ಲಿಯೇ ಲಕ್ನೋ ಪಯಣ ಅಂತ್ಯಗೊಂಡಿದೆ.ಇಡೀ ಟೂರ್ನಿಯಲ್ಲಿ ಲಕ್ನೋ ತಂಡ ತನ್ನ ಆಟದಿಂದ ಹೆಸರುವಾಸಿಯಾಗಿದಕ್ಕಿಂತ ಹೆಚ್ಚಾಗಿ ತಂಡದ ವೇಗಿ ನವೀನ್ ಉಲ್ ಹಕ್ ಮಾಡಿಕೊಂಡ ರಾದ್ಧಾಂತಗಳಿಂದಲೇ ಹೆಚ್ಚು ಚರ್ಚೆಯಲ್ಲಿತ್ತು. ಇದೀಗ ಐಪಿಎಲ್ ಪಯಣ ಮುಗಿಸಿರುವ ನವೀನ್​ಗೆ ಕೊನೆಯ ಪಂದ್ಯದಲ್ಲೂ ಮುಜುಗರ ಎದುರಾಗಿದೆ.ಲಕ್ನೋ ತಂಡವನ್ನು 81 ರನ್​ಗಳಿಂದ ಮಣಿಸಿದ ಮುಂಬೈ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತು. ಅದರಲ್ಲೂ ತಂಡದ ಯುವ ಆಟಗಾರರು ಮಾವಿನ ಹಣ್ಣುಗಳ ಮುಂದೆ ಕುಳಿತು ತೆಗೆದುಕೊಂಡಿರುವ ಫೋಟೋ ಇದೀಗ ಸಖತ್ ವೈರಲ್ ಆಗುತ್ತಿದೆ. ಲಕ್ನೋ ವೇಗಿ ನವೀನ್​ಗೆ ಟಕ್ಕರ್ ಕೊಡಲೆಂದೆ ಮುಂಬೈ ಆಟಗಾರರು ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಎಂಬ ಕೂಗು ಕೇಳಿಬರುತ್ತಿದೆ.ವಾಸ್ತವವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ವಿರಾಟ್ ಕೊಹ್ಲಿ ಜತೆ ನವೀನ್ ಉಲ್ ಹಕ್ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಈ ಇಬ್ಬರ ನಡುವಿನ ಕಾದಾಟ ಐಪಿಎಲ್​ಗೆ ಮತ್ತಷ್ಟು ರಂಗುತಂದಿತ್ತು. ಇದು ಇಷ್ಟಕ್ಕೆ ನಿಲ್ಲದೆ ಕೊಹ್ಲಿ ವಿಕೆಟ್ ಬಿದ್ದ ಬಳಿಕ ನವೀನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾವಿನ ಹಣ್ಣಿನ ಫೋಟೋ ಹಾಕಿ ಕೊಹ್ಲಿಯನ್ನು ಟ್ರೋಲ್ ಮಾಡಲು ಯತ್ನಿಸಿದ್ದರು. ಇದಾದ ಬಳಿಕ ನವೀನ್ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದೀಗ ಮುಂಬೈ ವಿರುದ್ಧ ಮತ್ತೆ ತಂಡಕ್ಕೆ ಎಂಟ್ರಿಕೊಟ್ಟಿದ್ದ ನವೀನ್ ಫಾರ್ಮ್‌ಗೆ ಮರಳಿ ಮುಂಬೈ ಇಂಡಿಯನ್ಸ್‌ನ 3 ಆಟಗಾರರನ್ನು ಬಲಿಪಶು ಮಾಡಿದ್ದರು. ನವೀನ್ 38 ರನ್ ನೀಡಿ 4 ವಿಕೆಟ್ ಪಡೆದರು. ಈ 4 ವಿಕೆಟ್ ಪಡೆದಾಗಲೂ ನವೀನ್ ತಮ್ಮ ಕಿವಿಗಳನ್ನು ಮುಚ್ಚಿ ಹಿಡಿದು ವಿಭಿನ್ನವಾಗಿ ಸಂಭ್ರಮಿಸಿದ್ದರು. ಇದು ಕೂಡ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು.ಪಂದ್ಯ ಮುಗಿದ ಬಳಿಕ ಮುಂಬೈ ಆಟಗಾರರು ಕೂಡ ನವೀನ್​ಗೆ ಸರಿಯಾಗಿ ಟಾಂಗ್ ನೀಡಿದ್ದು, ಟೇಬಲ್‌ ಮೇಲೆ ಮೂರು ಮಾವಿನ ಹಣ್ಣುಗಳನ್ನು ಇಟ್ಟಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದ ಸಂದೀಪ್‌ ವಾರಿಯರ್‌, ಈ ಫೋಟೋಗೆ ಮಾವಿನ ಸಿಹಿ ಸೀಸನ್ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋದಲ್ಲಿ ಸಂದೀಪ್ ವಾರಿಯರ್‌ ಕಣ್ಣು ಮುಚ್ಚಿದ್ದರೆ, ಕುಮಾರ ಕಾರ್ತಿಕೇಯ ಬಾಯಿ ಮುಚ್ಚಿಕೊಂಡಿದ್ದಾರೆ ಹಾಗೂ ವಿಷ್ಣು ವಿನೋದ್‌ ಕಿವಿಯನ್ನು ಮುಚ್ಚಿಕೊಂಡಿರುವುದನ್ನು ನೋಡಬಹುದು.ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಖತ್ ವೈರಲ್ ಆಗಿದೆ. ಇದನ್ನು ಗಮನಿಸಿದ ಸಂದೀಪ್ ಕೂಡಲೇ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಈ ಫೋಟೋ ಸಖತ್ ವೈರಲ್ ಆಗಿದೆ

source https://tv9kannada.com/photo-gallery/cricket-photos/ipl-2023-mumbai-indians-players-troll-naveen-ul-haq-later-post-delete-psr-586721.html

Leave a Reply

Your email address will not be published. Required fields are marked *