
16ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದೆ. 2008 ರಲ್ಲಿ ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ನ 16 ನೇ ಸೀಸನ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಹತ್ತು ತಂಡಗಳ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Gujarat Titans and Chennai Super Kings) ಪೈಪೋಟಿ ನಡೆಸಲಿವೆ. ಇನ್ನೊಂದು ಪ್ರಮುಖ ಸಂಗತಿಯೆಂದರೆ ಬರೋಬ್ಬರಿ ನಾಲ್ಕು ವರ್ಷಗಳ ನಂತರ ಈ ಮಿಲಿಯನ್ ಡಾಲರ್ ಟೂರ್ನಿ ಭಾರತದಲ್ಲಿ ಆಯೋಜನೆಯಾಗುತ್ತಿದೆ. ಕೊರೊನಾ ಸೋಂಕಿನಿಂದಾಗಿ ಕಳೆದ 3 ಆವೃತ್ತಿಗಳನ್ನು ಬಿಸಿಸಿಐ (BCCI) ವಿದೇಶಿ ನೆಲದಲ್ಲಿ ಆಡಿಸಿತ್ತು. ಇದೀಗ ತವರಿಗೆ ಮರಳಿರುವ ಈ ಟೂರ್ನಿಗೆ ಇನ್ನಷ್ಟು ರಂಗು ತರಲು ಮುಂದಾಗಿರುವ ಬಿಸಿಸಿಐ ಮಾರ್ಚ್ 31 ರಂದು ಅಹಮದಾಬಾದ್‌ನಲ್ಲಿ ಉದ್ಘಾಟನಾ ಪಂದ್ಯದ ಮೊದಲು ಉದ್ಘಾಟನಾ ಸಮಾರಂಭವನ್ನು ಆಯೋಜಿಸಿದೆ.
ಉದ್ಘಾಟನಾ ಸಮಾರಂಭದಲ್ಲಿ ಯಾರ್ಯಾರಿರಲಿದ್ದಾರೆ?
ಸದ್ಯಕ್ಕೆ ಹೊರಬಿದ್ದಿರುವ ಮಾಹಿತಿ ಪ್ರಕಾರ ಐಪಿಎಲ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಗಾಯಕ ಅರಿಜಿತ್ ಸಿಂಗ್ ಪ್ರದರ್ಶನ ನೀಡಲಿದ್ದಾರೆ. ಹಾಗೆಯೇ ನಟಿ ತಮನ್ನಾ ಭಾಟಿಯಾ ಭಾಗವಹಿಸುವಿಕೆಯನ್ನು ಖಚಿತಪಡಿಸಲಾಗಿದೆ. ಅಲ್ಲದೆ ಈ ಈವೆಂಟ್‌ನಲ್ಲಿ ಪ್ರದರ್ಶನ ನೀಡಲು ರಶ್ಮಿಕಾ ಮಂದಣ್ಣರನ್ನು ಕೇಳಿಕೊಳ್ಳಲಾಗಿದೆ ಎಂಬ ಮಾಹಿತಿ ಇದೆ. ಹಾಗೆಯೇ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ಟೈಗರ್ ಶ್ರಾಫ್ ಕೂಡ ಇರಲಿದ್ದಾರೆ ಎಂಬ ಮಾಹಿತಿ ಇದೆ. ಇಷ್ಟೆ ಅಲ್ಲದೆ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶೇಷ ಲೇಸರ್ ಶೋ ನಡೆಯುವ ಸಾಧ್ಯತೆಯೂ ಇದೆ.
IPL 2023: 11ರ ಬದಲು 15 ಆಟಗಾರರ ಹೆಸರು; ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ? ಇಲ್ಲಿದೆ ವಿವರ
ಎಷ್ಟು ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ?
ಐಪಿಎಲ್ ಉದ್ಘಾಟನಾ ಸಮಾರಂಭವು ಸಂಜೆ 6 ಗಂಟೆಗೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಸುಮಾರು 45 ನಿಮಿಷಗಳ ಕಾಲ ನಡೆಯಲಿದೆ ಎಂಬ ಮಾಹಿತಿ ಇದೆ.
ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ತಂಡದ ನಾಯಕರು?
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಈ ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ 10 ತಂಡಗಳ ನಾಯಕರು ಭಾಗವಹಿಸುವುದಿಲ್ಲ ಎಂಬುದು ತಿಳಿದುಬಂದಿದೆ. ಆದಾಗ್ಯೂ, ಬುಧವಾರದಂದು ಕಡ್ಡಾಯ ನಾಯಕರ ಸಭೆಯಲ್ಲಿ ಎಲ್ಲಾ ನಾಯಕರು ಅಹಮದಾಬಾದ್‌ನಲ್ಲಿ ಭೇಟಿಯಾಗಲಿದ್ದಾರೆ. ಆದರೆ ಈ ಸಮಾರಂಭದ ಬಳಿಕ ಮುಖಾಮುಖಿಯಾಗುವ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಉದ್ಘಾಟನಾ ಸಮಾರಂಭಕ್ಕೆ ಹಾಜರಾಗಲಿದ್ದಾರೆ.
ಸಂಭಾವ್ಯ ಉಭಯ ತಂಡಗಳು
ಗುಜರಾತ್ ಟೈಟಾನ್ಸ್: ಶುಭ್ಮನ್ ಗಿಲ್, ಮ್ಯಾಥ್ಯೂ ವೇಡ್, ಅಭಿನವ್ ಮನೋಹರ್, ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಶಿವಂ ಮಾವಿ, ಆರ್ ಸಾಯಿ ಕಿಶೋರ್, ಅಲ್ಜಾರಿ ಜೋಸೆಫ್, ಯಶ್ ದಯಾಲ್.
ಚೆನ್ನೈ ಸೂಪರ್ ಕಿಂಗ್ಸ್: ರುತುರಾಜ್ ಗಾಯಕ್ವಾಡ್, ಡೆವೋನ್ ಕಾನ್ವೇ, ಅಂಬಟಿ ರಾಯುಡು, ಬೆನ್ ಸ್ಟೋಕ್ಸ್, ಎಂಎಸ್ ಧೋನಿ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಮುಖೇಶ್ ಚೌಧರಿ, ದೀಪಕ್ ಚಾಹರ್, ಮಹೇಶ್ ಟೀಕ್ಷಣ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Views: 0