IPL 2023: ಉಮ್ರಾನ್ ಬೆಂಕಿ ಬೌಲಿಂಗ್: ಕಣ್ಣು ಮಿಟುಕಿಸುವಷ್ಟರಲ್ಲಿ ಪಡಿಕ್ಕಲ್ ಕ್ಲೀನ್ ಬೌಲ್ಡ್

IPL 2023: Umran Malik’s Pace sends the stump flying to dismiss Devdutt Padikkal

IPL 2023 SRH vs RR: ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 4ನೇ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಎಸ್​ಆರ್​ಹೆಚ್ ತಂಡದ ಹಂಗಾಮಿ ನಾಯಕ ಭುವನೇಶ್ವರ್ ಕುಮಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ನಾಯಕ ನಿರ್ಧಾರ ತಪ್ಪು ಎಂಬುದನ್ನು ಪವರ್​​ಪ್ಲೇನಲ್ಲೇ ಆರ್​ಆರ್​ ತಂಡದ ಆರಂಭಿಕ ಜೋಸ್ ಬಟ್ಲರ್ (Jos Buttler) ನಿರೂಪಿಸಿದ್ದರು. ಯಶಸ್ವಿ ಜೈಸ್ವಾಲ್ ಜೊತೆಗೂಡಿ ಇನಿಂಗ್ಸ್ ಆರಂಭಿಸಿದ ಬಟ್ಲರ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಿಡಿಲಬ್ಬರದ ಆರಂಭ ಒದಗಿಸಿದ್ದರು.

ಅದರಲ್ಲೂ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಜೋಸ್ ಬಟ್ಲರ್ ಅಬ್ಬರಿಸಿದರು. 22 ಎಸೆತಗಳಲ್ಲಿ 7 ಫೋರ್ ಹಾಗೂ 3 ಸಿಕ್ಸ್​ನೊಂದಿಗೆ 54 ರನ್​ ಬಾರಿಸಿ ಬಟ್ಲರ್ ನಿರ್ಗಮಿಸಿದರು. ಆ ಬಳಿಕ ಸಂಜು ಸ್ಯಾಮ್ಸನ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ ಯಶಸ್ವಿ ಜೈಸ್ವಾಲ್ (54) ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಮೊದಲ 4 ಎಸೆತಗಳಲ್ಲಿ 2 ರನ್​ಗಳಿಸಿ ಕ್ರೀಸ್ ಕಚ್ಚಿ ನಿಲ್ಲುವ ಯತ್ನದಲ್ಲಿದ್ದ ಪಡಿಕ್ಕಲ್​ಗೆ ಮಾರಕವಾಗಿದ್ದು ಉಮ್ರಾನ್ ಮಲಿಕ್ ಅವರ ಬೆಂಕಿ ಎಸೆತ.

ಜಮ್ಮು ಎಕ್ಸ್​ಪ್ರೆಸ್ ಖ್ಯಾತಿಯ ಉಮ್ರಾನ್ ಮಲಿಕ್ ಎಸೆದ 15ನೇ ಓವರ್​ನ ಮೊದಲ ಎಸೆತವು 149 ಕಿ.ಮೀ ವೇಗದಲ್ಲಿ ತೇಲಿ ಬಂತು. ಇದಕ್ಕೆ ಉತ್ತರ ನೀಡಲು ದೇವದತ್ ಪಡಿಕ್ಕಲ್ ಕಣ್ಣು ಬಿಡುವಷ್ಟರಲ್ಲಿ ಕ್ಲೀನ್ ಬೌಲ್ಡ್ ಆಗಿದ್ದರು. ಇತ್ತ ಭಾರತೀಯ ಆಟಗಾರನ್ನು ಬೌಲ್ಡ್ ಮಾಡಿ ಸಂಭ್ರಮಿಸಲು ಮುಂದಾದ ಮಲಿಕ್ ಆ ಬಳಿಕ ಸುಮ್ಮನಾದರು. ಇದೀಗ ಉಮ್ರಾನ್ ಮಲಿಕ್ ಅವರ ಈ ಬೆಂಕಿ ಬೌಲಿಂಗ್​ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ 3 ಓವರ್ ಎಸೆದ ಮಲಿಕ್ 32 ರನ್​ ನೀಡಿ ಕೇವಲ 1 ವಿಕೆಟ್ ಪಡೆಯಲಷ್ಟೇ ಶಕ್ತರಾದರು. ಅತ್ತ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್​ ಕಲೆಹಾಕಿತು.

ಸನ್​ರೈಸರ್ಸ್ ಹೈದರಾಬಾದ್ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ , ಅಭಿಷೇಕ್ ಶರ್ಮಾ , ರಾಹುಲ್ ತ್ರಿಪಾಠಿ , ಹ್ಯಾರಿ ಬ್ರೂಕ್ , ಗ್ಲೆನ್ ಫಿಲಿಪ್ಸ್ ( ವಿಕೆಟ್ ಕೀಪರ್ ) , ವಾಷಿಂಗ್ಟನ್ ಸುಂದರ್ , ಭುವನೇಶ್ವರ್ ಕುಮಾರ್ (ನಾಯಕ) , ಆದಿಲ್ ರಶೀದ್ , ಟಿ. ನಟರಾಜನ್ , ಉಮ್ರಾನ್ ಮಲಿಕ್ , ಫಜಲ್ಹಕ್ ಫಾರೂಕಿ

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಜೋಸ್ ಬಟ್ಲರ್ , ದೇವದತ್ ಪಡಿಕ್ಕಲ್ , ಸಂಜು ಸ್ಯಾಮ್ಸನ್ (ನಾಯಕ) , ರಿಯಾನ್ ಪರಾಗ್ , ಶಿಮ್ರಾನ್ ಹೆಟ್ಮೆಯರ್ , ಜೇಸನ್ ಹೋಲ್ಡರ್ , ರವಿಚಂದ್ರನ್ ಅಶ್ವಿನ್ , ಟ್ರೆಂಟ್ ಬೌಲ್ಟ್ , ಕೆ ಎಂ ಆಸಿಫ್ , ಯುಜ್ವೇಂದ್ರ ಚಾಹಲ್.

 

source https://tv9kannada.com/sports/cricket-news/ipl-2023-umran-maliks-pace-sends-the-stump-flying-to-dismiss-devdutt-padikkal-kannada-news-zp-au50-547952.html

Views: 0

Leave a Reply

Your email address will not be published. Required fields are marked *