IPL 2024, SRH vs KKR: ಫೈನಲ್‌ಗೆ ಎಂಟ್ರಿಕೊಟ್ಟ ಕೋಲ್ಕತ್ತಾ, ಹೈದರಾಬಾದ್‌ ವಿರುದ್ಧ ಕೆಕೆಆರ್‌ಗೆ ಭರ್ಜರಿ ಗೆಲುವು.

ಐಪಿಎಲ್‌ 2024ರ ಮೊದಲ ಕ್ವಾಲಿಪೈಯರ್‌ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಸನ್‌ರೈರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್‌‌ ರೈಡರ್ಸ್ (SRH vs KKR) ತಂಡಗಳು ಮುಖಾಮುಖಿ ಆಗಿದ್ದವು, ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಪ್ಯಾಟ್‌‌ ಕಮೀನ್ಸ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಈ ಮೂಲಕ ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್ ತಂಡವು ಕೇವಲ 19.3 ಓವರ್‌ಗೆ 159 ರನ್‌ಗಳಿಗೆ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನಟ್ಟಿದ ಕೋಲ್ಕತ್ತಾ ತಂಡವು 13.2 ಓವರ್‌ಗೆ 2 ವಿಕೆಟ್ ನಷ್ಟಕ್ಕೆ 164 ರನ್‌ ಗಳಿಸುವ ಮೂಲಕ ಭರ್ಜರಿ 8 ವಿಕೆಟ್‌‌ಗಳ ಗೆಲುವು ದಾಖಲಿಸುವ ಮೂಲಕ ನೇರವಾಗಿ ಫೈನಲ್‌ಗೆ ಎಂಟ್ರಿಕೊಟ್ಟಿದೆ.

ಫೈನಲ್‌ಗೆ ಕೆಕೆಆರ್ ಎಂಟ್ರಿ:

ಹೈದರಾಬಾದ್ ನೀಡಿದ ಸಾಧಾರಣ ಮೊತ್ತವನ್ನು ಕೆಕೆಆರ್ ಸುಲಭವಾಗಿ ಗೆದ್ದುಬೀಗಿತು. ಕೆಕೆಆರ್ ಉತ್ತಮ ಆರಂಭವನ್ನೇ ಪಡೆದಿತ್ತು. ಓಪನಿಂಗ್ ಗೆ ಬಂದ ರಹಮಾನುಲ್ಲಾ ಗುರ್ಬಾಜ್ ಅಮೋಘ ಆರಂಭ ನೀಡಿ 14 ಎಸೆತಗಳಲ್ಲಿ 23 ರನ್ ಗಳಿಸಿ ಇನಿಂಗ್ಸ್ ಕಟ್ಟಿದರು. ಸುನಿಲ್ ನರೇನ್ ಗೆ ಈ ಪಂದ್ಯದಲ್ಲಿ ಅಬ್ಬರಿಸಲು ಸಾರ್ಧಯವಾಗದಿದ್ದರೂ ಸಹ ತಕ್ಕಮಟ್ಟಿಗೆ ಉತ್ತಮವಾಗಿ ಆಡಿದರು. ವೆಂಕಟೇಶ್ ಅಯ್ಯರ್ 51 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದರೆ, ಅವರಿಗೆ ಆಸರೆಯಾದ ನಾಯಕ ಶ್ರೇಯಸ್ ಅಯ್ಯರ್ ಕೂಡ 58 ರನ್ ಗಳಿಸಿದರು. ಪಂದ್ಯದಲ್ಲಿ ಹೈದರಾಬಾದ್ ತಂಡದ ಬೌಲಿಂಗ್ ಕಳಪೆಯಾಗಿತ್ತು. ಪ್ಯಾಟ್ ಕಮಿನ್ಸ್ ಮತ್ತು ಟಿ ನಟರಾಜನ್ ಮಾತ್ರ ತಲಾ 1-1 ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಫೈನಲ್ ಪ್ರವೇಶಿಸಿದೆ. ಹೈದರಾಬಾದ್ ತಂಡ ಸೋತರೂ ಮತ್ತೊಂದು ಅವಕಾಶ ಸಿಗಲಿದೆ. ಬುಧವಾರ, ಮೇ 22 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ಗೆಲ್ಲುವವರು ಕ್ವಾಲಿಫೈಯರ್ 2ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಅನ್ನು ಎದುರಿಸುತ್ತಾರೆ. ಆದರೆ, ಸೋತ ತಂಡ ಐಪಿಎಲ್ 2024ರಿಂದ ಹೊರಗುಳಿಯಲಿದೆ. ಈಗ ಹೈದರಾಬಾದ್ ವಿರುದ್ಧ ಯಾವ ತಂಡ ಕಣಕ್ಕಿಳಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಬ್ಯಾಟಿಂಗ್‌ನಲ್ಲಿ ಎಡವಿದ ಹೈದರಾಬಾದ್:

ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಋತುವಿನುದ್ದಕ್ಕೂ ವಿಧ್ವಂಸಕತೆ ಮೆರೆದ ಟ್ರಾವಿಸ್ ಹೆಡ್ 2 ಎಸೆತಗಳಲ್ಲಿ 0 ರನ್ ಗಳಿಸಿದರೆ, ಅಭಿಷೇಕ್ 4 ಎಸೆತಗಳಲ್ಲಿ ಕೇವಲ 3 ರನ್ ಗಳಿಸಿದರು. ಈ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಸ್ಥಿತಿ ತುಂಬಾ ಕೆಟ್ಟದಾಗಿತ್ತು. 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡಿತು. ನಿತೀಶ್ ರೆಡ್ಡಿ ಮತ್ತು ಶಹಬಾಜ್ ಅಹ್ಮದ್ ಕೂಡ ಅಗ್ಗವಾಗಿ ಔಟಾದರು. ರೆಡ್ಡಿ 10 ಎಸೆತಗಳಲ್ಲಿ 9 ರನ್ ಗಳಿಸಿದರೆ, ಶಹಬಾಜ್ 1 ಎಸೆತದಲ್ಲಿ 0 ರನ್ ಗಳಿಸಿ ಔಟಾದರು. ತಂಡದ ಪರ ರಾಹುಲ್ ತ್ರಿಪಾಠಿ 55 ರನ್ ಗಳಿಸಿದರು. ಹೆನ್ರಿಕ್ ಕ್ಲಾಸೆನ್ 32 ರನ್ ಗಳಿಸಿದರೆ, ಪ್ಯಾಟ್ ಕಮಿನ್ಸ್ 30 ರನ್ ಗಳಿಸಿದರು. ಈ ಮೂಲಕ ಹೈದರಾಬಾದ್ 19.3 ಓವರ್‌ಗಳಲ್ಲಿ 159 ರನ್ ಗಳಿಸಿತು.

Source : https://kannada.news18.com/news/sports/ipl-2024-qualifier1-srh-vs-kkr-match-kolkata-knight-riders-won-by-8-wickets-skb-1708250.html

 

Leave a Reply

Your email address will not be published. Required fields are marked *