IPL 2025: 9 ಸ್ವದೇಶಿ, ಒಬ್ಬ ವಿದೇಶಿ; ಎಲ್ಲಾ ಐಪಿಎಲ್​ ತಂಡಗಳ ನಾಯಕರ ಪಟ್ಟಿ ಇಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2025) 18 ನೇ ಸೀಸನ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದ್ದು, ಅಂತಿಮ ಪಂದ್ಯವು ಮೇ 25, 2025 ರಂದು ನಡೆಯಲಿದೆ. ಇದೀಗ ಈ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಎಲ್ಲಾ ತಂಡಗಳು ಅಂತಿಮ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಈ ನಡುವೆ ಯಾವ್ಯಾವ ತಂಡಗಳು ನೂತನ ನಾಯಕನ ಹುಡುಕಾಟದಲ್ಲಿದ್ದವೋ, ಆ ಎಲ್ಲಾ ತಂಡಗಳಿಗೆ ನಾಯಕರ ನೇಮಕವಾಗಿದೆ. ಇದರೊಂದಿಗೆ ಎಲ್ಲಾ 10 ತಂಡಗಳ ನಾಯಕರು ಯಾರ್ಯಾರು ಎಂಬುದು ಖಚಿತವಾಗಿದೆ. ವಾಸ್ತವವಾಗಿ 9 ತಂಡಗಳ ನಾಯಕರ ವಿವರ ಈಗಾಗಲೇ ಹೊರಬಿದ್ದಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ತನ್ನ ತಂಡಕ್ಕೆ ನಾಯಕನನ್ನು ಹೆಸರಿಸಿರಲಿಲ್ಲ. ಆದರೀಗ ಡೆಲ್ಲಿ ಫ್ರಾಂಚೈಸಿ ಅಕ್ಷರ್ ಪಟೇಲ್ ಅವರನ್ನು ತಂಡದ ನಾಯಕನಾಗಿ ನೇಮಿಸಿದೆ. ವಿಶೇಷವೆಂದರೆ ಈ ಬಾರಿ ಒಟ್ಟು 5 ತಂಡಗಳು ಹೊಸ ನಾಯಕರೊಂದಿಗೆ ಆಡಲಿವೆ. ಹಾಗೆಯೇ 9 ತಂಡಗಳನ್ನು ಭಾರತೀಯ ಆಟಗಾರರು ಮುನ್ನಡೆಸಿದರೆ, ಒಂದು ತಂಡದ ನಾಯಕತ್ವ ಮಾತ್ರ ವಿದೇಶಿ ಆಟಗಾರನ ಕೈಯಲಿದೆ.

5 ತಂಡಗಳಿಗೆ ನೂತನ ನಾಯಕರು

ಐಪಿಎಲ್ 2025 ಕ್ಕೂ ಮುನ್ನ, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಹೊಸ ನಾಯಕರನ್ನು ನೇಮಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಅಕ್ಷರ್ ಪಟೇಲ್ ಅವರ ಕೈಯಲ್ಲಿದ್ದರೆ, ರಿಷಭ್ ಪಂತ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ರಜತ್ ಪಟಿದಾರ್ ಮೇಲೆ ವಿಶ್ವಾಸ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಪಂಜಾಬ್ ಕಿಂಗ್ಸ್​ಗೆ ಶ್ರೇಯಸ್ ಅಯ್ಯರ್ ನಾಯಕನಾದರೆ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಅಜಿಂಕ್ಯ ರಹಾನೆ ಮುನ್ನಡೆಸಲಿದ್ದಾರೆ.

ಏಕೈಕ ವಿದೇಶಿ ನಾಯಕ

ಉಳಿದ 5 ತಂಡಗಳು ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ನಾಯಕನ ಮೇಲೆ ವಿಶ್ವಾಸ ವ್ಯಕ್ತಪಡಿಸಿವೆ. ಅದರಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ರುತುರಾಜ್ ಗಾಯಕ್ವಾಡ್ ಬಳಿ ಇದ್ದರೆ, ಮುಂಬೈ ಇಂಡಿಯನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಗುಜರಾತ್ ಟೈಟಾನ್ಸ್ ತಂಡಕ್ಕೆ ಶುಭ್​ಮನ್ ಗಿಲ್ ನಾಯಕರಾದರೆ, ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಜು ಸ್ಯಾಮ್ಸನ್ ಹಾಗೆಯೇ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಪ್ಯಾಟ್ ಕಮ್ಮಿನ್ಸ್‌ ನಾಯಕರಾಗಿ ಮುಂದುವರೆಯಲಿದ್ದಾರೆ.

ಮೇಲೆ ಹೇಳಿದಂತೆ ಒಟ್ಟು 10 ತಂಡಗಳ ಪೈಕಿ, 9 ತಂಡಗಳಿಗೆ ಭಾರತೀಯ ಆಟಗಾರರು ನಾಯಕರಾಗಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಮಾತ್ರ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್​ಗೆ ತಂಡದ ನಾಯಕತ್ವದ ಜವಬ್ದಾರಿ ನೀಡಿದೆ. ಈ ಮೂಲಕ ಈ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ಏಕೈಕ ವಿದೇಶಿ ನಾಯಕ ಪ್ಯಾಟ್ ಕಮ್ಮಿನ್ಸ್‌ ಆಗಿದ್ದಾರೆ. ಪ್ರಸ್ತುತ ಪ್ಯಾಟ್ ಕಮ್ಮಿನ್ಸ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಐಪಿಎಲ್‌ ಆರಂಭವಾಗುವ ಸಮಯಕ್ಕೆ ಅವರು ಫಿಟ್ ಆಗುವ ನಿರೀಕ್ಷೆಯಿದೆ. ಪಾದದ ಗಾಯದಿಂದ ಬಳಲುತ್ತಿದ್ದ ಪ್ಯಾಟ್ ಕಮ್ಮಿನ್ಸ್ ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಪಂದ್ಯಾವಳಿಗಳಲ್ಲಿ ಆಡಲು ಸಹ ಸಾಧ್ಯವಾಗಲಿಲ್ಲ. ಆದಾಗ್ಯೂ ಅವರು ಚೇತರಿಕೆಯ ಹಾದಿಯಲ್ಲಿದ್ದು, ಮತ್ತೊಮ್ಮೆ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ.

ಎಲ್ಲಾ ತಂಡಗಳ ನಾಯಕರು

  1. ಚೆನ್ನೈ ಸೂಪರ್ ಕಿಂಗ್ಸ್ (CSK) – ರುತುರಾಜ್ ಗಾಯಕ್ವಾಡ್
  2. ಲಕ್ನೋ ಸೂಪರ್ ಜೈಂಟ್ಸ್ (LSG) – ರಿಷಭ್ ಪಂತ್
  3. ರಾಜಸ್ಥಾನ್ ರಾಯಲ್ಸ್ (RR) – ಸಂಜು ಸ್ಯಾಮ್ಸನ್
  4. ಸನ್‌ರೈಸರ್ಸ್ ಹೈದರಾಬಾದ್ (SRH) – ಪ್ಯಾಟ್ ಕಮ್ಮಿನ್ಸ್
  5. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) – ರಜತ್ ಪಾಟಿದಾರ್
  6. ಪಂಜಾಬ್ ಕಿಂಗ್ಸ್ (PBKS) – ಶ್ರೇಯಸ್ ಅಯ್ಯರ್
  7. ಮುಂಬೈ ಇಂಡಿಯನ್ಸ್ (MI) – ಹಾರ್ದಿಕ್ ಪಾಂಡ್ಯ
  8. ಕೋಲ್ಕತ್ತಾ ನೈಟ್ ರೈಡರ್ಸ್ (KKR) – ಅಜಿಂಕ್ಯ ರಹಾನೆ
  9. ಗುಜರಾತ್ ಟೈಟಾನ್ಸ್ (GT) – ಶುಭ್​ಮನ್ ಗಿಲ್
  10. ಡೆಲ್ಲಿ ಕ್ಯಾಪಿಟಲ್ಸ್ (DC) – ಅಕ್ಷರ್ ಪಟೇಲ್

Source : https://tv9kannada.com/sports/cricket-news/ipl-2025-captains-full-list-psr-991297.html

Leave a Reply

Your email address will not be published. Required fields are marked *