
2025 ರ ಐಪಿಎಲ್ಗೆ (IPL 2025) ಸುಖಾಂತ್ಯವೇನೋ ಸಿಕ್ಕಿತು. ಆದರೆ 17 ವರ್ಷಗಳ ಬಳಿಕ ಚಾಂಪಿಯನ್ ಆದ ಖುಷಿ ಆರ್ಸಿಬಿ (RCB) ತಂಡಕ್ಕೆ 18 ಗಂಟೆಯೂ ಉಳಿಯಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದ 11 ಅಮಾಯಕ ಜೀವಗಳು ಬಲಿಯಾದವು. ಇನ್ನು ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಈ ಅವಘಡಕ್ಕೆ ಕಾರಣರಾದವರನ್ನು ಶಿಕ್ಷೆಗೊಳಪಡಿಸಲಾಗಿದೆಯಾದರೂ, ಈ ಅವಘಡ ನಡೆಯದಂತೆ ತಡೆಯಲು ಸಾಕಷ್ಟು ಅವಕಾಶಗಳಿದ್ದವು. ಆದರೆ ಸರ್ಕಾರ, ಆಯೋಜಕರು, ಫ್ರಾಂಚೈಸಿ ಹಾಗೂ ಕೆಎಸ್ಸಿಎಯ ಬೇಜವಾಬ್ದಾರಿ ತನದಿಂದ ಸಾವು ನೋವು ಉಂಟಾಯಿತು. ಇದೀಗ ಇನ್ನು ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ತಡೆಯಲು ಬಿಸಿಸಿಐ (BCCI) ಮಹತ್ವದ ಹೆಜ್ಜೆ ಇಟ್ಟಿದೆ ಎಂದು ವರದಿಯಾಗಿದೆ.
ಬೆಂಗಳೂರಿನಲ್ಲಿ ನಡೆದ ದುರಂತದಿಂದಾಗಿ ಐಪಿಎಲ್ ಸೃಷ್ಟಿಕರ್ತ ಬಿಸಿಸಿಐ ವಿಶ್ವ ಕ್ರಿಕೆಟ್ ಮುಂದೆ ತಲೆ ತಗ್ಗಿಸುವಂತ್ತಾಗಿದೆ. ಹೀಗಾಗಿ ಇನ್ನು ಮುಂದೆ ಈ ತಪ್ಪು ನಡೆಯದಂತೆ ತಡೆಯಲು ಮುಂದಾಗಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ. ಬಿಸಿಸಿಐ ಶೀಘ್ರದಲ್ಲೇ ಈ ಬಗ್ಗೆ ಹೊಸ ಕಾನೂನನ್ನು ತರಲಿದೆ ಎಂದು ಹೇಳಲಾಗುತ್ತಿದೆ.
ಬಿಸಿಸಿಐ ಕಾರ್ಯದರ್ಶಿ ಹೇಳಿದ್ದೇನು?
ಭವಿಷ್ಯದಲ್ಲಿ ಐಪಿಎಲ್ ವಿಜಯೋತ್ಸವ ಆಚರಣೆಗೆ ಮಾರ್ಗಸೂಚಿಗಳನ್ನು ಜಾರಿಗೆ ತರುವ ಬಗ್ಗೆ ಬಿಸಿಸಿಐ ಚಿಂತಿಸುತ್ತಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕ್ರಿಕ್ಬಜ್ಗೆ ತಿಳಿಸಿದ್ದಾರೆ, ‘ಇಂತಹ ದುರಂತಗಳ ನಡೆಯದಂತೆ ಬಿಸಿಸಿಐ ಏನನ್ನಾದರೂ ಮಾಡಬೇಕಾಗುತ್ತದೆ. ನಾವು ಮೌನವಾಗಿರಲು ಸಾಧ್ಯವಿಲ್ಲ. ಇದು ಆರ್ಸಿಬಿಯ ಖಾಸಗಿ ಕಾರ್ಯಕ್ರಮವಾಗಿತ್ತು, ಆದರೆ ಬಿಸಿಸಿಐ ಆಗಿ ನಾವು ಭಾರತದಲ್ಲಿ ಕ್ರಿಕೆಟ್ಗೆ ಜವಾಬ್ದಾರರಾಗಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ನಾವು ಪ್ರಯತ್ನಿಸುತ್ತೇವೆ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಡೆದ ಭೀಕರ ಘಟನೆಗೆ ಪ್ರತಿಕ್ರಿಯೆಯಾಗಿ ಬಿಸಿಸಿಐ ಕಾರ್ಯದರ್ಶಿ ಈ ಹೇಳಿಕೆ ನೀಡಿದ್ದಾರೆ. ಜೂನ್ 5, ಬುಧವಾರ, ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ 11 ಅಭಿಮಾನಿಗಳು ಪ್ರಾಣ ಕಳೆದುಕೊಂಡರು ಮತ್ತು ಅನೇಕರು ಗಾಯಗೊಂಡರು. ಈ ಘಟನೆಯ ನಂತರ, ಕರ್ನಾಟಕ ರಾಜ್ಯ ಸರ್ಕಾರವು ಪೊಲೀಸರು ಮತ್ತು ಆರ್ಸಿಬಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದೆ. ಹಲವರನ್ನು ಬಂಧಿಸಲಾಗಿದೆ.
ಬಿಸಿಸಿಐ ಈಗ ಏನು ಮಾಡುತ್ತದೆ?
ಈಗ ಸುದ್ದಿ ಏನೆಂದರೆ, ಐಪಿಎಲ್ ವಿಜಯೋತ್ಸವದ ಸಂದರ್ಭದಲ್ಲಿ ಇಂತಹ ಘಟನೆಗಳನ್ನು ತಡೆಯಲು ಬಿಸಿಸಿಐ ಒಂದು ವ್ಯವಸ್ಥೆಯನ್ನು ರಚಿಸಲಿದೆ. ಈ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಬಹಿರಂಗಪಡಿಸಲಾಗಿಲ್ಲ. ಆದಾಗ್ಯೂ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ಶೀಘ್ರದಲ್ಲೇ ಚರ್ಚಿಸಲಾಗುವುದು ಎಂದು ಬಿಸಿಸಿಐ ಕಾರ್ಯದರ್ಶಿ ಸೈಕಿಯಾ ಹೇಳಿದ್ದಾರೆ. ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಆರ್ಸಿಬಿಯ ವಿಜಯೋತ್ಸವದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಇಂಗ್ಲೆಂಡ್ ಪ್ರವಾಸಕ್ಕೆ ಹೊರಡುವ ಮೊದಲು, ಅವರು ಅಂತಹ ರೋಡ್ ಶೋಗಳನ್ನು ಕಟ್ಟುನಿಟ್ಟಾಗಿ ವಿರೋಧಿಸುವುದಾಗಿ ಹೇಳಿದರು.
TV9 Kannada