ಐಪಿಎಲ್ 31ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 112 ರನ್ ಗುರಿ ಬೆನ್ನಟ್ಟಲು ವಿಫಲವಾದ ಕೋಲ್ಕತ್ತಾ ನೈಟ್ ರೈಡರ್ಸ್ 95 ರನ್‌ಗಳಿಗೆ ಆಲೌಟ್ ಆಗಿ 16 ರನ್‌ಗಳ ಹೀನಾಯ ಸೋಲು ಕಂಡಿದೆ.

ಐಪಿಎಲ್ನ 31ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹೀನಾಯವಾಗಿ ಸೋಲು ಕಂಡಿದೆ. ಪಂಜಾಬ್ ಕಿಂಗ್ಸ್ ನೀಡಿದ್ದ 112 ರನ್‌ಗಳ ಸುಲಭದ ಗುರಿ ಬೆನ್ನಟ್ಟಲಾಗದೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 15.1 ಓವರ್ಗಳಲ್ಲಿ 95ಕ್ಕೆ ಆಲೌಟ್ ಆಗುವ ಮೂಲಕ 16 ರನ್‌ಗಳ ಹೀನಾಯ ಸೋಲು ಕಂಡಿದೆ. ಇದು ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಮೊತ್ತವನ್ನ ಡಿಫೆಂಡ್ ಮಾಡಿದ ನಿದರ್ಶನವಾಗಿದೆ. ಇದಕ್ಕೂ ಮುನ್ನ ಸಿಎಸ್ಕೆ ಪಂಜಾಬ್ ವಿರುದ್ಧವೇ 116 ರನ್‌ಗಳ ಗುರಿಯನ್ನ ಡಿಫೆಂಡ್ ಮಾಡಿ ಗೆಲುವು ಸಾಧಿಸಿತ್ತು.
112 ರನ್‌ಗಳ ಚೇಸಿಂಗ್ ವೇಳೆ ಆರಂಭದಲ್ಲೇ ಕೆಕೆಆರ್ ಆರಂಭಿಕರ ವಿಕೆಟ್ ಕಳೆದುಕೊಂಡು ಆಘಾತಕ್ಕೆ ಒಳಗಾಗಿತ್ತು. ನರೈನ್ (6) ಹಾಗೂ ಕ್ವಿಂಟನ್ ಡಿಕಾಕ್ ಕೇವಲ 2 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ 3ನೇ ವಿಕೆಟ್ಗೆ ಒಂದಾದ ನಾಯಕ ರಹಾನೆ ಹಾಗೂ ಅಂಗ್ಕ್ರಿಸ್ ರಘುವಂಶಿ 55 ರನ್‌ಗಳ ಜೊತೆಯಾಟ ನಡೆಸಿದರು. ರಹಾನೆ 17 ಎಸೆತಗಳಲ್ಲಿ 17 ರನ್ಗಳಿಸಿ ಚಹಲ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. 10 ರನ್‌ಗಳ ಅಂತರದಲ್ಲಿ ರಘುವಂಶಿ ಕೂಡ ಔಟ್ ಆದರು. ಅವರು 28 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 37 ರನ್ಗಳಿಸಿ ಚಹಲ್ಗೆ 2ನೇ ಬಲಿಯಾದರು. ಇವರಿಬ್ಬರು ಔಟ್ ಆಗುತ್ತಿದ್ದಂತೆ ಕೆಕೆಆರ್ ದಿಢೀರ್ ಕುಸಿತ ಕಂಡು ಸೋಲಿನತ್ತಾ ಮುಖ ಮಾಡಿತು.
ಮಧ್ಯಮ ಕ್ರಮಾಂಕ ಸಂಪೂರ್ಣ ವೈಫಲ್ಯ
23 ಕೋಟಿಯ ವೆಂಕಟೇಶ್ ಅಯ್ಯರ್ 4 ಎಸೆತಗಳಲ್ಲಿ 7 ರನ್ಗಳಿಸಿ ಮ್ಯಾಕ್ಸ್‌ವೆಲ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಆಪತ್ಬಾಂಧವ ಎನಿಸಿಕೊಂಡಿದ್ದ ರಿಂಕು ಸಿಂಗ್ (2) ಹಾಗೂ ರಮಣ್ ದೀಪ್ ಸಿಂಗ್ (0) ಸತತ 2 ಎಸೆತಗಳಲ್ಲಿ ಚಹಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಹರ್ಷಿತ್ ರಾಣಾರನ್ನ ಜಾನ್ಸನ್ ಬೌಲ್ಡ್ ಮಾಡುವ ಮೂಲಕ ಪಂದ್ಯವನ್ನ ರೋಚಕ ಘಟಕ್ಕೆ ಕೊಂಡೊಯ್ದರು.
ಮೂರು ತ್ರಿಲ್ಲಿಂಗ್ ಓವರ್
ರಾಣಾ ವಿಕೆಟ್ ಕಳೆದುಕೊಂಡಾಗ ಕೆಕೆಆರ್ 79ಕ್ಕೆ8 ವಿಕೆಟ್ ಕಳೆದುಕೊಂಡಿತ್ತು. ಹಾಗಾಗಿ ಪಂಜಾಬ್ಗೆ ಗೆಲುವು ಸುಲಭವಾಗಬಹುದು ಎನ್ನುವಷ್ಟರಲ್ಲಿ ರಸೆಲ್ ಚಹಲ್ ಎಸೆದ 14ನೇ ಓವರ್ನಲ್ಲಿ 2 ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ ಪಂದ್ಯದಲ್ಲಿ ಕೆಕೆಆರ್ ಉಳಿಯುವಂತೆ ಮಾಡಿದರು. ಆದರೆ ಆ ಓವರ್ನಲ್ಲಿ ರಸೆಲ್ ಸಿಂಗಲ್ ತಗೆದುಕೊಳ್ಳುವಲ್ಲಿ ವಿಫಲರಾದರು.
15ನೇ ಓವರ್ನಲ್ಲಿ ಅರ್ಶದೀಪ್ ಸಿಂಗ್ ಒಂದೂ ರನ್ ನೀಡದೇ ವೈಭವ್ ಅರೋರ (0) ವಿಕೆಟ್ ಪಡೆದು ಕೆಕೆಆ್ 9ನೇ ವಿಕೆಟ್ ಹಾರಿಸಿದರು. ಕೊನೆಯ ವಿಕೆಟ್ಗೆ ಕೆಕೆಆರ್ ಗೆಲ್ಲಲು 17 ರನ್ಗಳಿಸಬೇಕಿತ್ತು. ರಸೆಲ್ ಕ್ರೀಸ್ನಲ್ಲಿದ್ದಿದ್ದರಿಂದ ಗೆಲುವು ಪಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ 16ನೇ ಓವರ್ನಲ್ಲಿ ಮೊದಲ ಎಸೆತದಲ್ಲೇ 17 ರನ್ಗಳಿಸಿದ್ದ ರಸೆಲ್ರನ್ನ ಮಾರ್ಕೊ ಜಾನ್ಸನ್ ಬೌಲ್ಡ್ ಮಾಡುವ ಮೂಲಕ ಪಂಜಾಬ್ಗೆ ಐತಿಹಾಸಿಕ ಗೆಲುವು ತಂದುಕೊಟ್ಟರು.
ಚಹಲ್-ಜಾನ್ಸನ್ ಮಾರಕ ಬೌಲಿಂಗ್
ಅಮೋಘ ಬೌಲಿಂಗ್ ಮಾಡಿ ಯುಜ್ವೇಂದ್ರ ಚಹಲ್ 28ಕೆಕ4 ವಿಕೆಟ್ ಪಡೆದರೆ, ಮಾರ್ಕೊ ಜಾನ್ಸನ್ 17 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಇವರಿಗೆ ಸಾಥ್ ನೀಡಿದ ಅರ್ಶದೀಪ್ ಸಿಂಗ್ 11ಕ್ಕೆ1, ಕ್ಸೇವಿಯರ್ ಬಾರ್ಲೆಟ್ 30ಕ್ಕೆ1, ಮ್ಯಾಕ್ಸ್‌ವೆಲ್ 5ಕ್ಕೆ1 ವಿಕೆಟ್ ಪಡೆದು ಮಿಂಚಿದರು.
ಕೈಕೊಟ್ಟ ಟಾಪ್ ಆರ್ಡರ್
ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್ ಮೊದಲೆರಡು ಓವರ್ ನಿಧಾನವಾಗಿ ಆಡಿದರೂ, ನಂತರ ಸ್ಫೋಟಕ ಆಟಕ್ಕೆ ಮುಂದಾಯಿತು.ಆದರೆ 4ನೇ ಓವರ್ನಲ್ಲೇ ಉತ್ತಮ ಫಾರ್ಮ್ನಲ್ಲಿದ್ದ ಪ್ರಿಯಾಂಶ್ ಆರ್ಯ ವಿಕೆಟ್ ಕಳೆದುಕೊಂಡಿತು. ಆರ್ಯ 12 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 22 ರನ್ಗಳಿಸಿ ಹರ್ಷಿತ್ ರಾಣಾಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೇವಲ 2 ಎಸೆತಗಳನ್ನೆದುರಿಸಿ ಸಿಲ್ವರ್ ಡಕ್ ಆದರು.
ಪವರ್ ಪ್ಲೇನಲ್ಲೇ 4 ವಿಕೆಟ್
ಟೂರ್ನಿಯಲ್ಲಿ ಮೊದಲ ಅವಕಾಶ ಪಡೆದಿದ್ದ ಜೋಸ್ ಇಂಗ್ಲಿಸ್ ಕೇವಲ 2 ರನ್ಗಳಿಸಿ ವರುಣ್ ಚಕ್ರವರ್ತಿ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಪವರ್ ಪ್ಲೇನ ಕೊನೆಯ ಓವರ್ನಲ್ಲಿ ಸತತ 2 ಸಿಕ್ಸರ್ ಬಾರಿಸಿದ್ದ ಪ್ರಭಸಿಮ್ರನ್ ಸಿಂಗ್ ಮತ್ತೊಂದು ದೊಡ್ಡ ಹೊಡೆತಕ್ಕೆ ಮುಂದಾಗಿ ಕೊನೆಯ ಓವರ್ನ ಕೊನೆಯ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು. ಪವರ್ ಪ್ಲೇ ಮುಗಿಯುವುದರೊಳಗೆ ಪಂಜಾಬ್ 54 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು.
ನೆಹಾಲ್ ವಧೇರಾ ಹಾಗೂ ಮ್ಯಾಕ್ಸ್‌ವೆಲ್ 5ನೇ ವಿಕೆಟ್ಗೆ 20 ರನ್‌ಗಳ ಜೊತೆಯಾಟ ನೀಡಿ ಚೇತರಿಕೆ ನೀಡುವ ಅಶ್ವಾಸನೆ ನೀಡಿದರಾದರೂ, 9ನೇ ಓವರ್ನಲ್ಲಿ ವಧೇರಾ (10) ಹಾಗೂ 10ನೇ ಓವರ್ನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕೇವಲ 7 ರನ್ಗಳಿಸಿ ಔಟ್ ಆಗುವುದರೊಂದಿಗೆ ಪಂಜಾಬ್ ಸವಾಲಿಗ ಗುರಿ ನೀಡುವ ಚಾನ್ಸ್ ಅಂತ್ಯವಾಯಿತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಸೂರ್ಯಾಂಶ್ ಶೆಡ್ಗೆ 4 ರನ್‌ಗಳಿಗೆ ಔಟ್ ಆದರೆ, ಮಾರ್ಕೊ ಜಾನ್ಸನ್ ನರೈನ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. 16 ಎಸೆತಗಳಲ್ಲಿ 18 ರನ್ಗಳಿಸಿದ್ದ ಶಶಾಂಕ್ ಸಿಂಗ್ 16ನೇ ಓವರ್ನಲ್ಲಿ ವೈಭವ್ ಅರೋರಾ ಬೌಲಿಂಗ್ನಲ್ಲಿ ಎಲ್ಬಿಯಾದರು.
ಈ ಪಂದ್ಯದಲ್ಲಿ ಗಾಯಾಳು ಕಿವೀಸ್ ವೇಗಿ ಲಾಕಿ ಫರ್ಗ್ಯುಸನ್ ಬದಲಿಗೆ ಕ್ಸೇವಿಯರ್ ಬಾರ್ಟ್ಲೆಟ್ ತಂಡ ಸೇರಿಕೊಂಡಿದ್ದಾರೆ. ಮಾರ್ಕಸ್ ಸ್ಟೋಯ್ನಿಸ್ ಬದಲಿಗೆ ಜೋಸ್ ಇಂಗ್ಲಿಸ್ ಆಡುತ್ತಿದ್ದಾರೆ.
ಇನ್ನು ಕೆಕೆಆರ್ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲುಗಳಿಂದ 6 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಪಿಬಿಕೆಎಸ್ ಕೂಡ 6 ಅಂಕಗಳನ್ನು ಹೊಂದಿದೆ, ಆದರೆ ಕೆಆರ್ಆರ್ ಗಿಂತ ಒಂದು ಪಂದ್ಯ ಕಡಿಮೆ ಆಡಿದೆ. ಆದರೆ ನೆಟ್ ರನ್ರೇಟ್ನಲ್ಲಿ ಕೆಕೆಆರ್ಗಿಂತ ಹಿಂದಿರುವುದರಿಂದ 6ನೇ ಸ್ಥಾನದಲ್ಲಿದೆ.
ಹೆಡ್ ಟು ಹೆಡ್ ದಾಖಲೆ
ಪಂಜಾಬ್ ಮತ್ತು ಕೋಲ್ಕತ್ತಾ ನಡುವೆ ಇದುವರೆಗೆ 33 ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಕೆಕೆಆರ್ ಮೇಲುಗೈ ಸಾಧಿಸಿತ್ತು. ಕೆಕೆಆರ್ 21 ಪಂದ್ಯಗಳನ್ನು ಗೆದ್ದಿದೆ. ಅದೇ ಸಮಯದಲ್ಲಿ, ಪಿಬಿಕೆಎಸ್ ಕೇವಲ 12 ಪಂದ್ಯಗಳಲ್ಲಿ ಜಯ ಸಾಧಿಸಿತು.
ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್
ಕೋಲ್ಕತ್ತಾ ನೈಟ್ ರೈಡರ್ಸ್ : ಸುನಿಲ್ ನರೈನ್, ಕ್ವಿಂಟನ್ ಡಿ ಕಾಕ್ (ವಿಕೀ), ಅಜಿಂಕ್ಯ ರಹಾನೆ (ನಾಯಕ), ಆಂಗ್ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ಎನ್ರಿಚ್ ನೋಕಿಯಾ, ವೈಭವ್ ಅರೋರ
ಪಂಜಾಬ್ ಕಿಂಗ್ಸ್ : ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೀ), ಶ್ರೇಯಸ್ ಅಯ್ಯರ್ (ನಾಯಕ), ಜೋಸ್ ಇಂಗ್ಲಿಸ್, ನೆಹಾಲ್ ವಧೇರಾ, ಗ್ಲೆನ್ ಮ್ಯಾಕ್ಸ್‌ವೆಲ್, ಶಶಾಂಕ್ ಸಿಂಗ್, ಕ್ಸೇವಿಯರ್ ಬಾರ್ಟ್ಲೆಟ್, ಮಾರ್ಕೊ ಜಾನ್ಸೆನ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಲ್.
Source: News 18 Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Views: 0