IPL 2025: ಮೇ 17 ರಿಂದ ಐಪಿಎಲ್ ದ್ವಿತೀಯಾರ್ಧ, ಜೂನ್ 3 ರಂದು ಫೈನಲ್; ಬಿಸಿಸಿಐ ಅಧಿಕೃತ ಹೇಳಿಕೆ

BCCI Announces IPL 2025 Restart Date: ಭಾರತ ಮತ್ತು ಪಾಕಿಸ್ತಾನದ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ ಅರ್ಧಕ್ಕೆ ನಿಂತಿದ್ದ 2025ರ ಐಪಿಎಲ್ ಟೂರ್ನಮೆಂಟ್ ಅನ್ನು ಮರು ಆರಂಭಿಸುವುದಾಗಿ ಬಿಸಿಸಿಐ ಘೋಷಿಸಿದೆ. ಮೇ 17ರಿಂದ ಉಳಿದ 17 ಪಂದ್ಯಗಳು ಆರಂಭವಾಗಲಿದ್ದು, 6 ನಗರಗಳಲ್ಲಿ ಪಂದ್ಯಗಳು ನಡೆಯಲಿವೆ. ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಸೇನಾ ಕಾರ್ಯಾಚರಣೆಯಿಂದಾಗಿ 2025 ರ ಐಪಿಎಲ್ (IPL 2025) ಅರ್ಧಕ್ಕೆ ನಿಂತಿತ್ತು. ಉಭಯ ದೇಶಗಳ ನಡುವೆ ಯುದ್ಧದ ಭೀತಿ ಎದುರಾಗಿದ್ದರಿಂದ ಮೇ 8 ರಂದು ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದ ಬಿಸಿಸಿಐ (BCCI), 2025 ರ ಐಪಿಎಲ್ ಅನ್ನು ಒಂದು ವಾರ ಮುಂದೂಡಿರುವುದಾಗಿ ಮೇ 9 ರಂದು ಘೋಷಿಸಿತ್ತು. ಆದರೀಗ ಎರಡೂ ದೇಶಗಳು ಕದನ ವಿರಾಮ ಘೋಷಿಸಿರುವ ಕಾರಣ ಬಿಸಿಸಿಐ ಉಳಿದ ಪಂದ್ಯಗಳಿಗೆ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹೊಸ ವೇಳಾಪಟ್ಟಿಯ ಪ್ರಕಾರ, ಮೇ 17 ರಿಂದ ಲೀಗ್ ಮತ್ತೆ ಪ್ರಾರಂಭವಾಗಲಿದ್ದು, ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹಾಗೆಯೇ ಫೈನಲ್ ಪಂದ್ಯವು ಜೂನ್ 3 ರಂದು ನಡೆಯಲಿದೆ. ಈ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.

ಹೊಸ ವೇಳಾಪಟ್ಟಿ ಪ್ರಕಟ

ಉಳಿದ ಪಂದ್ಯಗಳನ್ನು ಬೆಂಗಳೂರು, ದೆಹಲಿ, ಲಕ್ನೋ, ಮುಂಬೈ, ಅಹಮದಾಬಾದ್ ಮತ್ತು ಜೈಪುರ ಸೇರಿದಂತೆ 6 ಸ್ಥಳಗಳಲ್ಲಿ ನಡೆಸಲು ಬಿಸಿಸಿಐ ನಿರ್ಧರಿಸಿದೆ. ಈ ಅವಧಿಯಲ್ಲಿ, ಉಳಿದ ಲೀಗ್ ಪಂದ್ಯಗಳನ್ನು ಮೇ 17 ರಿಂದ ಮೇ 25 ರವರೆಗೆ ಆಡಲಾಗುವುದು, ಇದರಲ್ಲಿ 2 ಡಬಲ್ ಹೆಡರ್‌ ಪಂದ್ಯಗಳು ಸೇರಿವೆ. ಅಂದರೆ ಒಂದೇ ದಿನ 2 ಪಂದ್ಯಗಳು ನಡೆಯಲಿದ್ದು, ಈ  ಡಬಲ್ ಹೆಡರ್ ಪಂದ್ಯಗಳನ್ನು ಎರಡು ಭಾನುವಾರಗಳಂದು ನಡೆಸಲು ತೀರ್ಮಾನಿಸಲಾಗಿದೆ.  ಇದಲ್ಲದೆ, ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಆದರೆ ಲೀಗ್ ಪಂದ್ಯಗಳಿಗೆ ಸ್ಥಳಗಳನ್ನು ಪ್ರಕಟಿಸಿರುವ ಬಿಸಿಸಿಐ ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ಇನ್ನೂ ನಿರ್ಧರಿಸಿಲ್ಲ.

ಐಪಿಎಲ್ ಪತ್ರಿಕಾ ಪ್ರಕಟಣೆ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಐಪಿಎಲ್, ‘ಟಾಟಾ ಐಪಿಎಲ್ 2025 ಪುನರಾರಂಭವನ್ನು ಘೋಷಿಸಲು ಬಿಸಿಸಿಐ ಸಂತೋಷಪಡುತ್ತಿದೆ. ಐಪಿಎಲ್ ದ್ವಿತೀಯಾರ್ಧ ಮೇ 17 ರಿಂದ ಪ್ರಾರಂಭವಾಗಿ ಜೂನ್ 3 ರಂದು ನಡೆಯುವ ಫೈನಲ್‌ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಅವಧಿಯಲ್ಲಿ ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ನಡೆಯಲಿವೆ. ಹೊಸ ವೇಳಾಪಟ್ಟಿಯಲ್ಲಿ ಎರಡು ಡಬಲ್-ಹೆಡರ್‌ಗಳು ಸೇರಿವೆ. ಪ್ಲೇಆಫ್ ಪಂದ್ಯಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದ್ದು, ಕ್ವಾಲಿಫೈಯರ್ 1 – ಮೇ 29 ರಂದು, ಎಲಿಮಿನೇಟರ್ – ಮೇ 30 ರಮದು, ಕ್ವಾಲಿಫೈಯರ್ 2 – ಜೂನ್ 1 ರಂದು ಮತ್ತು ಫೈನಲ್ ಪಂದ್ಯ ಜೂನ್ 3 ರಂದು ನಡೆಯಲಿದೆ. ಪ್ಲೇಆಫ್ ಪಂದ್ಯಗಳ ಸ್ಥಳಗಳನ್ನು ನಂತರ ಘೋಷಿಸಲಾಗುವುದು. ಕ್ರಿಕೆಟ್ ಸುರಕ್ಷಿತವಾಗಿ ಮರಳಲು ಕಾರಣರಾದ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಮತ್ತೊಮ್ಮೆ ನಮನ ಸಲ್ಲಿಸಲು ಬಿಸಿಸಿಐ ಈ ಅವಕಾಶವನ್ನು ಬಳಸಿಕೊಳ್ಳುತ್ತದೆ ಎಂದು ತಿಳಿಸಿದೆ.

ಉಳಿದ ಪಂದ್ಯಗಳ ವೇಳಾಪಟ್ಟಿ

ದಿನಾಂಕಮುಖಾಮುಖಿಸಮಯಸ್ಥಳ
17-05-2025ಆರ್​ಸಿಬಿ vs ಕೆಕೆಆರ್ಸಂಜೆ 7:30ಬೆಂಗಳೂರು
18-05-2025ರಾಜಸ್ಥಾನ vs ಪಂಜಾಬ್ಮಧ್ಯಾಹ್ನ 3:30ಜೈಪುರ
18-05-2025ಡೆಲ್ಲಿ vs ಗುಜರಾತ್ಸಂಜೆ 7:30ದೆಹಲಿ
19-05-2025ಲಕ್ನೋ vs ಹೈದರಾಬಾದ್ಸಂಜೆ 7:30ಲಕ್ನೋ
20-05-2025ಸಿಎಸ್​ಕೆ vs ರಾಜಸ್ಥಾನ್ಸಂಜೆ 7:30ದೆಹಲಿ
21-05-2025ಮುಂಬೈ vs ಡೆಲ್ಲಿಸಂಜೆ 7:30ಮುಂಬೈ
22-05-2025ಗುಜರಾತ್ vs ಲಕ್ನೋಸಂಜೆ 7:30ಅಹಮದಾಬಾದ್
23-05-2025ಆರ್​ಸಿಬಿ vs ಹೈದರಾಬಾದ್ಸಂಜೆ 7:30ಬೆಂಗಳೂರು
24-05-2025ಪಂಜಾಬ್ vs ಡೆಲ್ಲಿಸಂಜೆ 7:30ಜೈಪುರ
25-05-2025ಗುಜರಾತ್ vs ಸಿಎಸ್​ಕೆಮಧ್ಯಾಹ್ನ 3:30ಅಹಮದಾಬಾದ್
25-05-2025ಹೈದರಾಬಾದ್ vs ಕೋಲ್ಕತ್ತಾಸಂಜೆ 7:30ದೆಹಲಿ
26-05-2025ಪಂಜಾಬ್ vs ಮುಂಬೈಸಂಜೆ 7:30ಜೈಪುರ
27-05-2025ಲಕ್ನೋ vs ಆರ್​ಸಿಬಿಸಂಜೆ 7:30ಲಕ್ನೋ
29-05-2025ಕ್ವಾಲಿಫೈಯರ್ 1ಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ
30-05-2025ಎಲಿಮಿನೇಟರ್ಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ
01-06-2025ಕ್ವಾಲಿಫೈಯರ್ 2ಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ
03-06-2025ಫೈನಲ್ ಪಂದ್ಯಸಂಜೆ 7:30ಸ್ಥಳ ನಿಗದಿ ಪಡಿಸಿಲ್ಲ

Source : TV9 Kannada

Leave a Reply

Your email address will not be published. Required fields are marked *