
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 17 ಮೊಳಕಾಲ್ಕೂರು ತಾಲ್ಲೂಕಿನ ಅರಣ್ಯ ಮತ್ತು ಕಂದಾಯ ಜಮೀನಿನ ಗಡಿ ಗುರುತು ಮಾಡಬೇಕು, ಹಾಗೂ ತಾಲ್ಲೂಕಿನ ಫಾರಂ ನಂ: 57ರ ಬಗರ್ ಹುಕ್ಕುಂ ರೈತರಿಗೆ ಸಾಗುವಳಿ ಕೊಡಲು ಅನುವು ಮಾಡಿಕೊಡುವಂತೆ ಆಗ್ರಹಿಸಿ ಭಾರತೀಯ ಕಮ್ಯುನಿಸ್ಟ್ ಪಕ್ಷದವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಅರಣ್ಯ ಸಚಿವ ಈಶ್ವರಖಂಡ್ರೆಯವರಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಜಿ.ಸಿ.ಸುರೇಶ್ ಬಾಬು ಮೊಳಕಾಲ್ಲೂರು ತಾಲ್ಲೂಕಿನ ದೇವಸಮುದ್ರ ಹೋಬಳಿಯ ರಾಂಪುರ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂ:47 ರಾಂಪುರ, ಸರ್ವೇ ನಂ :14 ಬಸಾಪುರ, ಸರ್ವೇ ನಂ: 23 ದಡಗೂರು, ಸರ್ವೇ ನಂ: 32 ವಡ್ಡರಹಳ್ಳಿ ಸಂಬಂಧಿಸಿದ ಅರಣ್ಯ ಹಕ್ಕು ಅರ್ಜಿದಾರರು ಮತ್ತು ಬಗರ್ ಹುಕುಂ ಅರ್ಜಿ ರೈತ ಫಲಾನುಭವಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಕಾರಣ ಏನಂದರೆ ಅರಣ್ಯ ಮತ್ತು ಕಂದಾಯ ಭೂಮಿಯನ್ನು ಇದುವರೆಗೆ ಎರಡು ಇಲಾಖೆಗಳು ಗಡಿ ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಸುಮಾರು 50-60 ವರ್ಷಗಳಿಂದ ವ್ಯವಸ್ಥೆ ಮಾಡಿಕೊಂಡು ಬಂದರು ಅರಣ್ಯ ಭೂಮಿ ಅರ್ಜಿದಾರರು ಮತ್ತು ಬಗರ್ ಹುಕುಂ ಅರ್ಜಿದಾರರು ಅಕ್ರಮ-ಸಕ್ರಮ ಕೋರಿ ಸಲ್ಲಿಸಿದ ಅರ್ಜಿಗಳು ವಜಾಗೊಳ್ಳುತ್ತಲೇ ಬಂದಿವೆ. ಕಂದಾಯ ಇಲಾಖೆ ಅರಣ್ಯ ಜಮೀನು ಎಂದು ಅರಣ್ಯ ಇಲಾಖೆ ಕಂದಾಯ ಜಮೀನು ಎಂದು ಸಬೂಬು ಹೇಳಿ ಅರ್ಜಿಗಳನ್ನು ವಜಾ ಮಾಡುತ್ತಲೇ ಬಂದಿದೆ ಎಂದು ದೂರಿದರು.
ಮೊಳಕಾಲ್ಕೂರು ತಾಲ್ಲೂಕಿನಲ್ಲಿ ಸದರಿ ಸುಮಾರು 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಫಾರಂ 57ರಲ್ಲಿ ಅಕ್ರಮ-ಸಕ್ರಮ ಕೋರಿ ಅರ್ಜಿಗಳನ್ನು 2019ರಲ್ಲಿ ಸಲ್ಲಿಸಿರುತ್ತಾರೆ. ಇದರ ಪೂರಕವಾಗಿ ತಾಲ್ಲೂಕು ಆಡಳಿತ 1490 ಅರ್ಜಿಗಳಲ್ಲಿ 493 ಅರ್ಜಿಗಳನ್ನು ಆಯ್ಕೆ ಮಾಡಿ ಹಂಚಲು ಈ ಹಿಂದೆ ಆಧ್ಯತೆ ಮಾಡುವ ಹಂತದಲ್ಲಿ ಇರುವಾಗ ಇನ್ನೊಮ್ಮೆ ಸರ್ಕಾರ ಮರು ಅರ್ಜಿಗಳನ್ನು ಸ್ವೀಕರಿಸಲು ಕಾಲಾವಕಾಶ ನೀಡಿ ಮತ್ತೆ ಅರ್ಜಿ ಆಹ್ವಾನಿಸಲಾಗಿತ್ತು. ಪ್ರಸ್ತುತ ಮೊಳಕಾಲ್ಲೂರು ತಾಲ್ಲೂಕಿನಲ್ಲಿ ಒಟ್ಟು 212 ಅರ್ಜಿ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಮೊಳಕಾಲ್ಕೂರು ತಾಲ್ಲೂಕಿನಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ತಾಲ್ಲೂಕು ಆಡಳಿತ ಕಚೇರಿ ಮುಂದೆ ಬಹಳಷ್ಟು ಹೋರಾಟಗಳು ಮಾಡಿ ಪ್ರಸ್ತುತ ಸರ್ಕಾರ ರೈತರ ಪೂರಕ ಕಾನೂನು ಜಾರಿಗೆ ತಂದಿದೆ ಎಂದು ಕಾರಣ ಹೇಳಿ ವಿಳಂಬ ಮಾಡುತ್ತಿದ್ದಾರೆ. ಇದರ ಜೊತೆಗೆ ಮೊಳಕಾಲ್ಕೂರು ತಾಲ್ಲೂಕಿನಲ್ಲಿ ನೆಪ ಮಾತ್ರಕ್ಕೆ ನೇಮಕ ಮಾಡಿದ “ಬಗರ್ ಹುಕುಂ” ಸಮಿತಿ ನಿಷ್ಕ್ರಿಯಗೊಂಡಿದೆ. ಸರ್ಕಾರದ ಆದೇಶದ ನೆಪ ಹೇಳಿ ಆಯ್ಕೆಯಾದ ಸದಸ್ಯರು ಯಾರು ಎಂಬುವುದು ರೈತರಿಗೆ ತಿಳಿಯದಂತಾಗಿದೆ. ರೈತರು ಭೂಮಿಯನ್ನು ನಂಬಿ ತುಂಡು ಜಮೀನಿಗೆ ಅಕ್ರಮ-ಸಕ್ರಮ ಕೋರಿದವರಿಗೆ ಮುಂದೆ ಎಲ್ಲಿ ಭೂಮಿ ಕೈ ತಪ್ಪಿ ಹೋಗುತ್ತದೆ ಎಂಬ ಆತಂಕದಲ್ಲಿದ್ದಾರೆ. ತಾತ ಉಳುಮೆ ಮಾಡಿರುವ ಜಮೀನು ಮೊಮ್ಮಗ ಮುದುಕನಾದರೂ ಹಕ್ಕುಪತ್ರ ಸಿಗದೇ ಇರುವುದು ದುರಂತವೇ ಸರಿ. ಎಂದರು.
ಸರ್ವೇ ನಂ : 47, 14. 23, 32ರಲ್ಲಿ ಹಾಕಿದ ಬಗರ್ ಹುಕುಂ ರೈತರ ಸುಮಾರು 500 ಅರ್ಜಿಗಳನ್ನು ಪ್ರಸ್ತುತ ಫಾರಂ ನಂ: 50, 53, 57ರ ಪಟ್ಟಿಗೆ ಪರಿಗಣಿಸಿದೇ ನಿರ್ಲಕ್ಷ್ಯ ಮಾಡಿರುತ್ತಾರೆ. ಸುಮಾರು 500ಕ್ಕೂ ಹೆಚ್ಚು ರೈತರು ಎರಡು ಇಲಾಖೆಗಳ ತಿಕ್ಕಾಟದಲ್ಲಿ ಆತಂತ್ರರಾಗಿರುತ್ತಾರೆ. ಸರ್ವೇ ನಂ: 47, 14, 23, 32ರಲ್ಲಿರುವ ಅರಣ್ಯ ವ್ಯಾಪ್ತಿಗೆ ಬರುವ ರೈತ ಫಲಾನುಭವಿಗಳಿಗೆ ಅರಣ್ಯಭೂಮಿ ರೈತರಿಗೆ ಭೂಮಿ ಹೆಚ್ಚಿಗೆ ಮಾಡಬೇಕು.,ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ತಕ್ಷಣ ಗಡಿ ಗುರುತಿಸಿಕೊಂಡು ರೈತರಿಗೆ ನ್ಯಾಯ ದೊರಕಿಸಿಕೊಡಬೇಕು.,ಫಾರಂ ನಂ: 57ರಲ್ಲಿ ಅರ್ಜಿ ಸಲ್ಲಿಸಿದ ರೈತರ ಅರ್ಜಿಗಳನ್ನು ಕಂದಾಯ ಇಲಾಖೆ ಪರಿಗಣಿಸಬೇಕು. ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಪರಿಶೀಲನೆ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಿ ರೈತರಿಗೆ ಹಕ್ಕು ಪತ್ರ ವಿತರಿಸಬೇಕು ಎಂದು ಒತ್ತಾಯಿಸಿದರು.
ಅಕ್ರಮ-ಸಕ್ರಮ ಕೋರಿ ಸಲ್ಲಿಸಿದ ಫಾರಂ ನಂ: 57 ಅರ್ಜಿ ಫಲಾನುಭವಿಗಳಿಗೆ ತಕ್ಷಣ ಹಕ್ಕು ಪತ್ರ ವಿತರಿಸಬೇಕು.ಹೊಸದಾಗಿ ಅಂದರೆ 2022ರಲ್ಲಿ ಅರ್ಜಿಗಳನ್ನು ಹಾಕಿದ ರೈತರಿಗೆ ಹಕ್ಕು ಪತ್ರ ವಿತರಿಸಬೇಕು. ಪ್ರಸ್ತುತ 493 ಅರ್ಜಿ ರೈತ ಫಲಾನುಭವಿಗಳಿಗೆ ಹಕ್ಕು ಪತ್ರ ತಕ್ಷಣ ವಿತರಿಸಬೇಕು. ಸರ್ಕಾರದಿಂದ ನೇಮಿಸಿದ ಬಗರ್ ಹುಕುಂ ಸಮಿತಿ ಸಭೆ ತಕ್ಷಣ ಕರೆದು ತಾಲ್ಲೂಕು ಆಡಳಿತದಲ್ಲಿ ಸಭೆ ನಡೆಸಬೇಕು. ರೈತರಿಗೆ ತೊಡಕಾಗಿರುವ ಅವೈಜ್ಞಾನಿಕ ಕಾನೂನನ್ನು ತೆರವು ಮಾಡಲು ಸಂಬಂಧ ಪಟ್ಟ ಶಾಸಕರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಮೊಳಕಾಲ್ಮೂರು ಸಿಪಿಐ ತಾಲ್ಲೂಕು ಕಾರ್ಯದರ್ಶಿ ಜಾಫರ್ ಷರೀಫ್, ಜಗನ್ನಾಥ್, ಕೀರ್ತಿ, ಹೊಲಪ್ಪ, ಗಂಗರಾಜು, ಶಾಂತಮೂರ್ತಿ, ಮಾರಣ್ಣ, ಗಂಗಾಧರ್, ನಾಗರಾಜ್, ಲಕ್ಷ್ಮಣ್, ದೊಡ್ಡಮಾರಣ್ಣ, ಗೋಪಾಲ್, ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.