ISRO Sun Mission: ಸೂರ್ಯನತ್ತ ಇಸ್ರೊ ಚಿತ್ತ; ಶೀಘ್ರ ನಭಕ್ಕೆ ಹಾರಲಿದೆ ಆದಿತ್ಯ-L1

ಚಂದ್ರಯಾನ-3 ಮಿಷನ್​ ನಂತರ ಇಸ್ರೊ ಈಗ ಸೂರ್ಯನತ್ತ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಮಿಷನ್​ಗೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಕೂಡ ಕೈಜೋಡಿಸಲಿದೆ.

ಚೆನ್ನೈ : 2023 ರ ವರ್ಷವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಂತರ್​ ಗ್ರಹ ಕಾರ್ಯಾಚರಣೆಯ ವರ್ಷ ಎಂದು ಗುರುತಿಸಬಹುದು.

ಶುಕ್ರವಾರ ಚಂದ್ರಯಾನ-3 ನೌಕೆಯ ಉಡಾವಣೆಯ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೂರ್ಯನತ್ತ ತನ್ನ ಚಿತ್ತ ಹರಿಸಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಸೌರ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಆದಿತ್ಯ L1, ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ರಾಕೆಟ್‌ ಮೂಲಕ ಸೂರ್ಯನತ್ತ ಕಳುಹಿಸಲಿದೆ.ISRO ಪ್ರಕಾರ ಆದಿತ್ಯ L1 ಬಾಹ್ಯಾಕಾಶ ನೌಕೆಯನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಮೊದಲ ಲ್ಯಾಗ್ ರೇಂಜ್ ಪಾಯಿಂಟ್ L1 ಸುತ್ತ ಹಾಲೋ ಕಕ್ಷೆಗೆ ಸೇರಿಸಲಾಗುತ್ತದೆ. L1 ಬಿಂದುವಿನ ಸುತ್ತಲಿನ ಉಪಗ್ರಹವು ಸೂರ್ಯನು ಯಾವತ್ತೂ ತನ್ನ ದೃಷ್ಟಿಯಿಂದ ಕಣ್ಮರೆಯಾಗದಂತೆ ಮತ್ತು ಗ್ರಹಣದ ಸಮಯದಲ್ಲಿಯೂ ನಿರಂತರವಾಗಿ ವೀಕ್ಷಿಸುವ ಕಕ್ಷೆಯಲ್ಲಿ ಸ್ಥಾಪನೆಯಾಗಲಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯು ಹೊತ್ತೊಯ್ಯುತ್ತಿರುವ ತನ್ನ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸಲು ಇಸ್ರೋ ಪ್ರಯತ್ನಿಸಿದ ಒಂದೆರಡು ದಿನಗಳ ನಂತರ ಆದಿತ್ಯ L1 ಮಿಷನ್ ಗೆ ಚಾಲನೆ ಸಿಗಲಿದೆ.

ಶುಕ್ರವಾರ ಇಸ್ರೋ ತನ್ನ ಹೆವಿ ಲಿಫ್ಟ್ ರಾಕೆಟ್ LVM3 ಅನ್ನು ಬಳಸಿಕೊಂಡು ಚಂದ್ರಯಾನ -3 ಬಾಹ್ಯಾಕಾಶ ನೌಕೆಯನ್ನು ಕಕ್ಷೆಗೆ ಸೇರಿಸಿದೆ. ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಪ್ರಕಾರ, ಮೂನ್ ಲ್ಯಾಂಡರ್ ಚಂದ್ರನ ಮೇಲೆ ಆಗಸ್ಟ್ 23 ರ ಸಂಜೆ 5.47 ಕ್ಕೆ ಇಳಿಯುವ ನಿರೀಕ್ಷೆಯಿದೆ. ಆದಿತ್ಯ ಇದು ಹಿಂದೂ ಸಂಪ್ರದಾಯದಲ್ಲಿ ಸೂರ್ಯನ ಹೆಸರೇ ಆಗಿದೆ. ಆದಿತ್ಯ ಉಪಗ್ರಹವು ಕರೋನಲ್ ಮಾಸ್ ಎಜೆಕ್ಷನ್‌ಗಳ ಡೈನಾಮಿಕ್ಸ್ ಮತ್ತು ಮೂಲಗಳಂತಹ ಹಲವಾರು ಗುಣಲಕ್ಷಣಗಳನ್ನು ಅಧ್ಯಯನ ಮಾಡಲಿದೆ ಎಂದು ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್​ಎ) ಹೇಳಿದೆ.

ಯುರೋಪಿನ ಕೌರೊ ಮತ್ತು ಗೂನ್​ಹಿಲ್ಲಿ ಬಾಹ್ಯಾಕಾಶ ಕೇಂದ್ರಗಳಿಂದ ಆದಿತ್ಯ-L1 ಅನ್ನು ಟ್ರ್ಯಾಕ್ ಮಾಡಲು ಇಎಸ್​ಎ ಬೆಂಬಲ ನೀಡಲಿದೆ. ಆಸ್ಟ್ರೇಲಿಯಾದ ನ್ಯೂ ನಾರ್ಸಿಯಾ, ಅರ್ಜೆಂಟಿನಾದ ಮಲಾರ್ಕ್​ ಮತ್ತು ಸ್ಪೇನ್​ನ ಸೆಬ್ರೆಯೋಸ್​ಗಳಲ್ಲಿರುವ ಇಎಸ್​ಎ ದ 35 ಮೀಟರ್ ಆಳದ ಸ್ಪೇಸ್ ಆಯಂಟೆನಾಗಳು ಕೂಡ ಆದಿತ್ಯ-L1 ಮಿಷನ್​ಗೆ ಅಗತ್ಯವಾದ ಬೆಂಬಲ ನೀಡಲಿವೆ.

ಜ್ಯೂಸ್, ಬೆಪಿಕೊಲೊಂಬೊ ಮತ್ತು ಸೋಲಾರ್ ಆರ್ಬಿಟರ್‌ನಂತಹ ಸೌರವ್ಯೂಹದ ಪರಿಶೋಧಕಗಳ ನೌಕೆಗಳು ಮತ್ತು ಇತ್ತೀಚೆಗೆ ಉಡಾವಣೆಯಾದ ಯೂಕ್ಲಿಡ್‌ನಂತಹ ಬಾಹ್ಯಾಕಾಶ ವೀಕ್ಷಣಾಲಯಗಳೊಂದಿಗೆ ಸಂವಹನ ನಡೆಸಲು ಈ ನಿಲ್ದಾಣಗಳನ್ನು ಪ್ರತಿದಿನ ಇಎಸ್​ಎ ಬಳಸುತ್ತದೆ. “ಇಎಸ್‌ಎ ಫ್ಲೈಟ್ ಡೈನಾಮಿಕ್ಸ್ ತಜ್ಞರು ಆದಿತ್ಯ-ಎಲ್1ಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆದಿತ್ಯ-ಎಲ್1 ಮಿಷನ್‌ಗಾಗಿ ಇಸ್ರೋ ಬಳಸುವ ‘ಆರ್ಬಿಟ್ ಡಿಟರ್ಮಿನೇಷನ್’ ಸಾಫ್ಟ್‌ವೇರ್‌ ಅನ್ನು ಪರೀಕ್ಷೆ ಮಾಡುವಲ್ಲಿ ಇಎಸ್​ಎ ಸಹಾಯ ಮಾಡಿದೆ. ಬಾಹ್ಯಾಕಾಶ ನೌಕೆ ಎಲ್ಲಿದೆ ಎಂಬುದನ್ನು ನಿಖರವಾಗಿ ಲೆಕ್ಕಾಚಾರ ಮಾಡಲು, ಅದರೊಂದಿಗೆ ಸಂವಹನ ನಡೆಸಲು ಮತ್ತು ಅದರ ವೈಜ್ಞಾನಿಕ ಉಪಕರಣಗಳನ್ನು ಮಾಪನಾಂಕ ನಿರ್ಣಯಿಸಲು ಈ ಸಾಫ್ಟ್‌ವೇರ್ ಅತ್ಯಗತ್ಯ” ಇಎಸ್​ಎ ಹೇಳಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/isro+sun+mission+suryanatta+isro+chitta+shighra+nabhakke+haaralide+aaditya+l1-newsid-n518980588?listname=newspaperLanding&topic=scienceandtechnology&index=5&topicIndex=7&mode=pwa&action=click

Leave a Reply

Your email address will not be published. Required fields are marked *