Shukrayana: ಆರಂಭದಲ್ಲಿ, ಆರ್ಬಿಟರ್ ಶುಕ್ರ ಗ್ರಹದ ಸುತ್ತಲೂ ಒಂದು ಅಂಡಾಕಾರದ ಕಕ್ಷೆಯಲ್ಲಿ ಚಲಿಸಲಿದೆ. ಈ ಕಕ್ಷೆಯ ಶುಕ್ರನಿಗೆ ಅತ್ಯಂತ ಸನಿಹದ ಬಿಂದುವನ್ನು ಪೆರಿಯಾಪ್ಸಿಸ್ ಎಂದು ಕರೆಯಲಾಗಿದ್ದು, ಅದು ಶುಕ್ರನ ಮೇಲ್ಮೈಯಿಂದ 500 ಕಿಲೋಮೀಟರ್ ದೂರದಲ್ಲಿದ್ದರೆ, ಕಕ್ಷೆಯಲ್ಲಿ ಶುಕ್ರ ಗ್ರಹದ ಅತ್ಯಂತ ದೂರದ ಬಿಂದು 60,000 ಕಿಲೋಮೀಟರ್ ದೂರದಲ್ಲಿದ್ದು, ಇದನ್ನು ಅಪೊಆಪ್ಸಿಸ್ ಎನ್ನಲಾಗುತ್ತದೆ. ಶುಕ್ರಯಾನ-1 ಉಪಗ್ರಹವನ್ನು ಜಿಎಸ್ಎಲ್‌ವಿ (ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ.

Shukrayana: ಚಂದ್ರಯಾನ-3 ಹಾಗೂ ಮಂಗಳಯಾನ ಯೋಜನೆಗಳ ಯಶಸ್ಸು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಭವಿಷ್ಯದಲ್ಲಿ ಇನ್ನಷ್ಟು ಸವಾಲಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸ್ಫೂರ್ತಿ ನೀಡಿದೆ. ಇಸ್ರೋ ಈಗ ನಮ್ಮ ಸೌರಮಂಡಲದ ಎರಡು ಅತ್ಯಂತ ವೈಪರೀತ್ಯಗಳ ಆಕಾಶಕಾಯಗಳಾದ ಸೂರ್ಯ ಹಾಗೂ ಶುಕ್ರ ಗ್ರಹ (ವೀನಸ್) ಅನ್ವೇಷಣೆ ನಡೆಸಲು ಉದ್ದೇಶಿಸಿದೆ.
ಇಸ್ರೋ ಪ್ರಸ್ತುತ ಸೌರವ್ಯೂಹದ ಅಸಾಧಾರಣ ಗ್ರಹವಾದ ಶುಕ್ರ ಗ್ರಹವನ್ನು ಸುತ್ತುವ ಬಾಹ್ಯಾಕಾಶ ನೌಕೆಯನ್ನು ವಿನ್ಯಾಸಗೊಳಿಸುವ ಮತ್ತು ಅಭಿವೃದ್ಧಿ ಪಡಿಸುವ ಗುರಿ ಹೊಂದಿದೆ. ಈ ಯೋಜನೆ ಮತ್ತು ಇದರ ಆರ್ಬಿಟರ್ ಅನ್ನು ಶುಕ್ರಯಾನ-1 ಎಂಬ ಹೆಸರಿನಿಂದ ಗುರುತಿಸಲಾಗುತ್ತಿದೆ.
ಈ ಯೋಜನೆಯ ಪ್ರಮುಖ ಉದ್ದೇಶ ಸೌರಮಂಡಲದ ಅತ್ಯಂತ ಬಿಸಿಯಾದ ಗ್ರಹವಾಗಿರುವ ಶುಕ್ರ ಗ್ರಹದ ಮೇಲ್ಮೈಯಲ್ಲಿ ಅವಿತಿರುವ ರಹಸ್ಯಗಳನ್ನು ಪತ್ತೆಹಚ್ಚುವುದಾಗಿದೆ. ಅದರೊಡನೆ, ಶುಕ್ರಯಾನ-1 ಶುಕ್ರ ಗ್ರಹದ ಮೇಲಿರುವ ಗಂಧಕಾಮ್ಲದ (ಸಲ್ಫ್ಯೂರಿಕ್ ಆ್ಯಸಿಡ್) ಮೋಡಗಳ ಹಿಂದಿರುವ ರಹಸ್ಯ ವಿದ್ಯಮಾನಗಳನ್ನು ಅರಿಯುವ ಉದ್ದೇಶವನ್ನು ಹೊಂದಿದೆ. ಈ ಯೋಜನೆಯ ಉಡಾವಣೆ ಡಿಸೆಂಬರ್ 2024ರಲ್ಲಿ ನೆರವೇರುವ ಸಾಧ್ಯತೆಗಳಿವೆ.
ಆರಂಭದಲ್ಲಿ, ಆರ್ಬಿಟರ ಶುಕ್ರ ಗ್ರಹದ ಸುತ್ತಲೂ ಒಂದು ಅಂಡಾಕಾರದ ಕಕ್ಷೆಯಲ್ಲಿ ಚಲಿಸಲಿದೆ. ಈ ಕಕ್ಷೆಯ ಶುಕ್ರನಿಗೆ ಅತ್ಯಂತ ಸನಿಹದ ಬಿಂದುವನ್ನು ಪೆರಿಯಾಪ್ಸಿಸ್ ಎಂದು ಕರೆಯಲಾಗಿದ್ದು, ಅದು ಶುಕ್ರನ ಮೇಲ್ಮೈಯಿಂದ 500 ಕಿಲೋಮೀಟರ್ ದೂರದಲ್ಲಿದ್ದರೆ, ಕಕ್ಷೆಯಲ್ಲಿ ಶುಕ್ರ ಗ್ರಹದ ಅತ್ಯಂತ ದೂರದ ಬಿಂದು 60,000 ಕಿಲೋಮೀಟರ್ ದೂರದಲ್ಲಿದ್ದು, ಇದನ್ನು ಅಪೊಆಪ್ಸಿಸ್ ಎನ್ನಲಾಗುತ್ತದೆ. ಶುಕ್ರಯಾನ-1 ಉಪಗ್ರಹವನ್ನು ಜಿಎಸ್ಎಲ್‌ವಿ (ಜಿಯೋಸಿಂಕ್ರೊನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ರಾಕೆಟ್ ಮೂಲಕ ಉಡಾವಣೆಗೊಳಿಸಲಾಗುತ್ತದೆ.
ಭಾರತದ ಮುಂಬರುವ ಶುಕ್ರ ಅನ್ವೇಷಣಾ ಯೋಜನೆಯಲ್ಲಿ ಸ್ವೀಡನ್ ಸಹ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು, ಶುಕ್ರ ಗ್ರಹದ ಅಧ್ಯಯನ ನಡೆಸಲು ಅತ್ಯವಶ್ಯಕವಾದ ಕೆಲವು ವೈಜ್ಞಾನಿಕ ಉಪಕರಣಗಳನ್ನು ಒದಗಿಸಲಿದೆ.
ಶುಕ್ರ ಸೂರ್ಯನಿಗೆ ಅತ್ಯಂತ ಹತ್ತಿರದ ಗ್ರಹವಾಗಿದ್ದು, ಭೂಮಿಯ ಅತ್ಯಂತ ಸನಿಹದ ಗ್ರಹವೂ ಆಗಿದೆ. ಶುಕ್ರ ಗ್ರಹ ಅತಿ ಹೆಚ್ಚು ಬಂಡೆಗಳನ್ನು ಹೊಂದಿರುವ, ಸೂರ್ಯನ ಸನಿಹದ ನಾಲ್ಕು ಗ್ರಹಗಳಲ್ಲಿ ಒಂದಾಗಿದೆ. ಗಾತ್ರ ಮತ್ತು ಸಾಂದ್ರತೆಯ ದೃಷ್ಟಿಯಿಂದ, ಶುಕ್ರ ಮತ್ತು ಭೂಮಿ ಸಮಾನವಾಗಿ ಕಂಡುಬರುವುದರಿಂದ, ಅದನ್ನು ಭೂಮಿಯ ಅವಳಿ ಎಂದೂ ಕರೆಯಲಾಗುತ್ತದೆ. ಆದರೆ, ಈ ಎರಡೂ ಗ್ರಹಗಳ ಮಧ್ಯೆ ಸಂಪೂರ್ಣ ಭಿನ್ನತೆಗಳಿರುವುದರಿಂದ, ಅವುಗಳು ಒಂದನ್ನೊಂದು ಹೋಲುವ ಅವಳಿಗಳು ಎಂದು ಭಾವಿಸಬಾರದು!
ಶುಕ್ರ ಗ್ರಹ ಸೂರ್ಯನಿಂದ 67,350,106 ಕಿಲೋಮೀಟರ್‌ಗಳಷ್ಟು ದೂರದಲ್ಲಿದ್ದು, ಶುಕ್ರ ಗ್ರಹದ ಒಂದು ವರ್ಷ ಭೂಮಿಯ 225 ದಿನಗಳಿಗೆ ಸಮಾನವಾಗಿರುತ್ತದೆ.
ಶುಕ್ರ ಗ್ರಹದ ಮೇಲೆ ಅತ್ಯಂತ ದಪ್ಪನೆಯ, ಇಂಗಾಲದ ಡೈಆಕ್ಸೈಡ್ ತುಂಬಿರುವ ವಿಷಪೂರಿತ ಗಾಳಿಯಿದ್ದು, ಅದರ ಮೇಲೆ ದಟ್ಟವಾದ, ಗಂಧಕಾಮ್ಲದಿಂದ ನಿರ್ಮಿಸಲ್ಪಟ್ಟ ಹಳದಿ ಮೋಡಗಳಿವೆ. ಈ ಮೋಡಗಳು ಉಷ್ಣತೆಯನ್ನು ಶುಕ್ರ ಗ್ರಹದ ಮೇಲ್ಮೈಯಲ್ಲೇ ಹಿಡಿದಿಡುವುದರಿಂದ, ಶುಕ್ರ ಗ್ರಹದ ವಾತಾವರಣ ಅತ್ಯಂತ ತಾಪಮಾನದಿಂದ ಕೂಡಿರುತ್ತದೆ. ಸೂರ್ಯನಿಗೆ ಅತ್ಯಂತ ಸನಿಹದಲ್ಲಿರುವ ಬುಧ ಗ್ರಹವನ್ನು ಹೊರತುಪಡಿಸಿ, ಶುಕ್ರ ಗ್ರಹ ಸೌರಮಂಡಲದ ಅತ್ಯಂತ ಬಿಸಿಯಾದ ಗ್ರಹವಾಗಿದೆ. ಶುಕ್ರ ಗ್ರಹದ ಮೇಲ್ಮೈ ತಾಪಮಾನ 900 ಡಿಗ್ರಿ ಫ್ಯಾರನ್‌ಹೀಟ್ (475 ಡಿಗ್ರಿ ಸೆಲ್ಸಿಯಸ್) ಆಗಿದ್ದು, ಸೀಸವನ್ನೂ ಕರಗಿಸಬಲ್ಲಷ್ಟು ಬಿಸಿಯಾಗಿರುತ್ತದೆ. ಶುಕ್ರ ಗ್ರಹದ ಮೇಲ್ಮೈ ಕೆಂಪು ಬಣ್ಣದ್ದಾಗಿದ್ದು, ಅತ್ಯಂತ ಎತ್ತರವಾದ ಪರ್ವತಗಳಿದ್ದು, ಹಲವು ಜ್ವಾಲಾಮುಖಿಗಳ ಕುರುಹುಗಳಿವೆ. ಹಲವು ವಿಜ್ಞಾನಿಗಳು ಇವುಗಳಲ್ಲಿ ಒಂದಷ್ಟು ಜ್ವಾಲಾಮುಖಿಗಳು ಇನ್ನೂ ಸಕ್ರಿಯವಾಗಿರಬಹುದು ಎಂದು ಭಾವಿಸುತ್ತಾರೆ.
ಶುಕ್ರ ಗ್ರಹದ ಮೇಲ್ಮೈ ಗಾಳಿಯ ಒತ್ತಡ ಅತ್ಯಂತ ಹೆಚ್ಚಿನದಾಗಿದ್ದು, ಭೂಮಿಯ ಗಾಳಿಯ ಒತ್ತಡಕ್ಕಿಂತ 90 ಪಟ್ಟಿಗೂ ಹೆಚ್ಚಾಗಿದೆ. ಇದನ್ನು ಭೂಮಿಯ ಮೇಲ್ಮೈಯಿಂದ ಕೆಳಗೆ, ಸಮುದ್ರದಲ್ಲಿ 1 ಮೈಲಿಗಳಷ್ಟು ಆಳದಲ್ಲಿ (ಅಂದಾಜು 1,600 ಮೀಟರ್) ಇರುವ ಒತ್ತಡಕ್ಕೆ ಹೋಲಿಸಬಹುದು.
ಶುಕ್ರ ಮತ್ತು ಭೂಮಿಗೆ ಇರುವ ಇನ್ನೊಂದು ವ್ಯತ್ಯಾಸವೆಂದರೆ, ಸೌರಮಂಡಲದ ಬಹುತೇಕ ಇತರ ಗ್ರಹಗಳಿಗೆ ಹೋಲಿಸಿದರೆ, ಶುಕ್ರ ಗ್ರಹ ತನ್ನ ಕಕ್ಷೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಪರಿಭ್ರಮಣೆ ನಡೆಸುತ್ತದೆ. ಅಂದರೆ, ಶುಕ್ರ ಗ್ರಹದಲ್ಲಿ ಉಳಿದು ನೋಡುವಾಗ, ಪಶ್ಚಿಮ ದಿಕ್ಕಿನಲ್ಲಿ ಸೂರ್ಯೋದಯವಾಗಿ, ಪೂರ್ವದಲ್ಲಿ ಸೂರ್ಯಾಸ್ತವಾಗುತ್ತದೆ. ಇದು ಭೂಮಿಯಲ್ಲಿ ನಾವು ಗಮನಿಸುವುದಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಆದರೆ, ಸೌರಮಂಡಲದಲ್ಲಿ ಶುಕ್ರ ಗ್ರಹ ಮಾತ್ರವೇ ಇಂತಹ ಸಾಮಾನ್ಯವಲ್ಲದ ಹಿಮ್ಮುಖ ಚಲನೆ ಹೊಂದಿರುವುದಲ್ಲ. ಯುರೇನಸ್ ಗ್ರಹವೂ ವಿಶಿಷ್ಟವಾದ ಪಕ್ಕಕ್ಕೆ ಸರಿದ ಚಲನೆಯನ್ನು ಹೊಂದಿದೆ.
ಬಾಹ್ಯಾಕಾಶ ನೌಕೆಗಳು ಅನ್ವೇಷಿಸಿದಂತೆ ಶುಕ್ರ ಗ್ರಹ:
ಶುಕ್ರ ಗ್ರಹ ಬಾಹ್ಯಾಕಾಶ ನೌಕೆ ಭೇಟಿ ನೀಡಿರುವ ಮೊದಲ ಗ್ರಹವಾಗಿದೆ. ನಾಸಾದ ಮರೀನರ್ 2 ಬಾಹ್ಯಾಕಾಶ ನೌಕೆ ಡಿಸೆಂಬರ್ 14, 1962ರಂದು ಯಶಸ್ವಿಯಾಗಿ ಶುಕ್ರ ಗ್ರಹವನ್ನು ಬಳಸಿ ಚಲಿಸಿ, ಮೋಡ ಆವರಿಸಿದ ಈ ಗ್ರಹವನ್ನು ಗಮನಿಸಿತು. ಅದಾದ ಬಳಿಕ, ಅಮೆರಿಕಾ ಮತ್ತು ಇತರ ದೇಶಗಳ ಬಾಹ್ಯಾಕಾಶ ಸಂಸ್ಥೆಗಳು ಶುಕ್ರ ಗ್ರಹದ ಅನ್ವೇಷಣೆ ನಡೆಸಿವೆ. ಉದಾಹರಣೆಗೆ, ನಾಸಾದ ಮೆಗಲನ್ ಬಾಹ್ಯಾಕಾಶ ನೌಕೆ ಒಂದು ರೇಡಾರನ್ನು ಬಳಸಿಕೊಂಡು ಶುಕ್ರ ಗ್ರಹದ ಮೇಲ್ಮೈಯ ನಕ್ಷೆ ರಚಿಸಿತು. ಸೋವಿಯತ್ ಬಾಹ್ಯಾಕಾಶ ನೌಕೆ ಶುಕ್ರ ಗ್ರಹದ ಮೇಲೆ ಇಳಿಯುವ ಪ್ರಯತ್ನಗಳಲ್ಲಿ ಅತಿದೊಡ್ಡ ಯಶಸ್ಸು ಸಂಪಾದಿಸಿತಾದರೂ, ಅಲ್ಲಿನ ಅಪರಿಮಿತವಾದ ತಾಪಮಾನ ಮತ್ತು ಒತ್ತಡದ ಕಾರಣದಿಂದ ಅದು ಹೆಚ್ಚು ಸಮಯ ನಾಶವಾಗದೆ ಉಳಿಯಲು ಸಾಧ್ಯವಾಗಲಿಲ್ಲ. ಅಮೆರಿಕಾದ ಶುಕ್ರ ಅನ್ವೇಷಣಾ ಯೋಜನೆಗಳಲ್ಲಿ ಒಂದಾದ, ನಾಸಾ ಸಂಸ್ಥೆಯ ಪಯೋನಿರ್ ವೀನಸ್ ಮಲ್ಟಿಪ್ರೋಬ್ 1978ರಲ್ಲಿ ಶುಕ್ರ ಗ್ರಹದ ಮೇಲ್ಮೈಯಲ್ಲಿ ಇಳಿದ ಬಳಿಕ, ಬಹುತೇಕ ಒಂದು ಗಂಟೆಯಷ್ಟು ಕಾಲ ಉಳಿದಿತ್ತು.
ಶುಕ್ರ ಗ್ರಹದೆಡೆಗಿನ ಇತ್ತೀಚಿನ ಯೋಜನೆಗಳಲ್ಲಿ ಇಎಸ್ಎಯ ವೀನಸ್ ಎಕ್ಸ್‌ಪ್ರೆಸ್ ಪ್ರಮುಖವಾಗಿದ್ದು, 2006ರಿಂದ 2016ರ ನಡುವೆ ಶುಕ್ರ ಗ್ರಹದ ಪರಿಭ್ರಮಣೆ ನಡೆಸಿತು. ಜಪಾನಿನ ಅಕಾಟ್ಸುಕಿ ವೀನಸ್ ಕ್ಲೈಮೇಟ್ ಆರ್ಬಿಟರ್ 2016ರಿಂದ ಶುಕ್ರ ಗ್ರಹದ ಪರಿಭ್ರಮಣೆ ನಡೆಸುತ್ತಿದೆ.
ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಹಲವು ಬಾರಿ ಶುಕ್ರ ಗ್ರಹದ ಸನಿಹದಲ್ಲಿ ಹಾದುಹೋಗಿದೆ. ಫೆಬ್ರವರಿ 9, 2022ರಂದು ನಾಸಾ ಈ ಬಾಹ್ಯಾಕಾಶ ನೌಕೆ ಫೆಬ್ರವರಿ 2021ರಲ್ಲಿ ಶುಕ್ರ ಗ್ರಹದ ಬಳಿ ಹಾದು ಹೋಗುವಾಗ ತೆಗೆದ ಅದರ ಮೇಲ್ಮೈ ಚಿತ್ರಗಳನ್ನು ಬಿಡುಗಡೆಗೊಳಿಸಿತು.
ಲೇಖಕರು- ಗಿರೀಶ್ ಲಿಂಗಣ್ಣ
(ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1