ಅಳುವುದು ನೈಸರ್ಗಿಕ ಮತ್ತು ಶಕ್ತಿಯುತ ವಿಧಾನವಾಗಿದ್ದು, ಅದು ನಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಮನದ ಒತ್ತಡವನ್ನು ಕಡಿಮೆ ಮಾಡುತ್ತದೆ. ಸುಪ್ತ ಭಾವನೆಗಳನ್ನು ಶುದ್ಧೀಕರಿಸುತ್ತದೆ.
![](https://samagrasuddi.co.in/wp-content/uploads/2023/08/image-81.png)
ಬೆಂಗಳೂರು : ಮಾನವ ಭಾವನೆಗಳ ಕಟ್ಟೆ ಒಡೆದಾಗ ಅದು ಕಣ್ಣೀರಿನ ರೂಪದಲ್ಲಿ ಹೊರ ಬರುತ್ತದೆ. ನಾವು ಜೀವನದಲ್ಲಿ ಎದುರಿಸುವ ಸವಾಲುಗಳು, ಸವಾಲುಗಳನ್ನು ಮೆಟ್ಟಿ ನಿಂತು ಸಾಧಿಸುವ ವಿಜಯ ಕಣ್ಣೀರಿಗೆ ಕಾರಣವಾಗಬಹುದು. ಕೆಲವರು ಅದೇನೇ ಆದರೂ ಅಳುವುದಿಲ್ಲ ಎನ್ನುವ ಗಟ್ಟಿ ನಿರ್ಧಾರ ಮಾಡಿರುತ್ತಾರೆ. ಕಣ್ಣೀರು ಹಾಕುವುದು ದೌರ್ಬಲ್ಯದ ಸಂಕೇತ ಎನ್ನುವುದು ಹಲವರ ಅಭಿಪ್ರಾಯ. ಆದರೆ ಇದು ತಪ್ಪು ಭಾವನೆ. ಅಳು ಅಥವಾ ಕಣ್ಣೀರು ದೌರ್ಬಲ್ಯವಲ್ಲ. ಇದು ಮನಸ್ಸು ದುರ್ಬಲವಾಗದಂತೆ ತಡೆಯುವ ಸಹಜ ಚಿಕಿತ್ಸಕ. ನಮ್ಮ ಮಾನಸಿಕ ಯೋಗಕ್ಷೇಮವನ್ನು ಗಮನಾರ್ಹವಾಗಿ ಸುಧಾರಿಸುವ ನೈಸರ್ಗಿಕ ಪ್ರಕ್ರಿಯೆ ಕಣ್ಣೀರು. ಈ ಲೇಖನದಲ್ಲಿ, ನಾವು ಮಾನಸಿಕ ಆರೋಗ್ಯದ ಮೇಲೆ ಅಳುವುದರ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.
ಒತ್ತಡ ಪರಿಹಾರ : ಅಳುವ ಮೊದಲ ಮತ್ತು ಅತ್ಯಂತ ಸ್ಪಷ್ಟ ಪ್ರಯೋಜನವೆಂದರೆ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯ. ನಾವು ಅತ್ತಾಗ ನಮ್ಮ ದೇಹವು ಒತ್ತಡದ ಹಾರ್ಮೋನ್‌ಗಳು ಮತ್ತು ಟಾಕ್ಸಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಅದು ನಮ್ಮ ಮನಸ್ಸನ್ನು ಹಗುರವಾಗಿಸುತ್ತದೆ. ನಮ್ಮೆದುರು ಇರುವ ಸನ್ನಿವೇಶವನ್ನು ಹಗುರವಾಗಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಕಣ್ಣೀರು ದೇಹದ ನೈಸರ್ಗಿಕ ನೋವು ನಿವಾರಕ ಅಷ್ಟೇ ಅಲ್ಲ ಇದು ಚಿತ್ತ-ವರ್ಧಿಸುವ ಎಂಡಾರ್ಫಿನ್‌ಗಳ ಉತ್ಪಾದನೆಯನ್ನು ಹೆಚ್ಚು ಮಾಡುತ್ತದೆ. ಇದು ಆತಂಕವನ್ನು ಕಡಿಮೆ ಮಾಡುತ್ತದೆ.
ಭಾವನಾತ್ಮಕ ಶುಚಿಗೊಳಿಸುವಿಕೆ : ಮಳೆ ಹೇಗೆ ಒಂದು ಸಲಕ್ಕೆ ಎಲ್ಲಾ ಕೊಳಕನ್ನು ಶುಚಿಗೊಳಿಸಿ ಬಿಡುತ್ತದೆಯೋ, ಕಣ್ಣೀರು ಕೂಡಾ ಹಾಗೆಯೇ ಭಾವನೆಯನ್ನು ಶುದ್ಧೀಕರಿಸಿ ಬಿಡುತ್ತದೆ. ಇದು ಮನಸ್ಸಿನಲ್ಲಿ ಹೆಪ್ಪು ಗಟ್ಟಿ ಕುಳಿತಿರುವ ಎಲ್ಲಾ ಭಾವನೆಗಳನ್ನು ಬಿಡುಗಡೆ ಮಾಡಲು ಅನುವು ಮಾಡಿಕೊಡುತ್ತದೆ. ದುಃಖ, ಕೋಪ ಅಥವಾ ಹತಾಶೆಯ ಭಾವನೆ ದೀರ್ಘಕಾಲದ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅಳುವುದು ಈ ಭಾವನೆಗಳಿಗೆ ಆರೋಗ್ಯಕರ ಔಟ್ಲೆಟ್ ಅನ್ನು ಒದಗಿಸುತ್ತದೆ. ಮನದಲ್ಲಿ ಅದುಮಿಟ್ಟುಕೊಂಡ ನೋವನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
ಸುಧಾರಿತ ಮೂಡ್ ಮತ್ತು ಪರಾನುಭೂತಿ : ನಾವು ಅಳುವ ಮೂಲಕ ಭಾವನೆಗಳನ್ನು ಹೊರ ಹಾಕುವಾಗ ನಮ್ಮ ಮನಸ್ಥಿತಿ ಸುಧಾರಿಸುತ್ತದೆ. ಭಾವನಾತ್ಮಕವಾಗಿ ನಮ್ಮನ್ನು ಸಮತೋಲನಗೊಳಿಸುತ್ತದೆ. ಹೆಚ್ಚುವರಿಯಾಗಿ, ಅಳುವುದು ಸಹಾನುಭೂತಿ ಮತ್ತು ಸಾಮಾಜಿಕ ಸಂವಹನವನ್ನು ಹೆಚ್ಚಿಸುತ್ತದೆ. ಇತರರು ಅಳುವುದನ್ನು ನೋಡಿದಾಗ, ನಾವು ಅವರೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿ ಬಿಡುತ್ತೇವೆ. ಭಾವನೆಗಳ ಈ ವಿನಿಮಯವು ತಿಳುವಳಿಕೆ ಮತ್ತು ಸಹಾನುಭೂತಿಯನ್ನು ಬೆಳೆಸುತ್ತದೆ. ಇದು ಬಲವಾದ ಮತ್ತು ಅರ್ಥಪೂರ್ಣ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ನರವೈಜ್ಞಾನಿಕ ಪ್ರಯೋಜನಗಳು : ಇತ್ತೀಚಿನ ಅಧ್ಯಯನಗಳು ಅಳುವುದು ಆಕ್ಸಿಟೋಸಿನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತದೆ. ಇದನ್ನು ಸಾಮಾನ್ಯವಾಗಿ “ಬಂಧದ ಹಾರ್ಮೋನ್” ಅಥವಾ “ಪ್ರೀತಿಯ ಹಾರ್ಮೋನ್” ಎಂದು ಕರೆಯಲಾಗುತ್ತದೆ. ಆಕ್ಸಿಟೋಸಿನ್ ನಂಬಿಕೆ ಮತ್ತು ಸಂಪರ್ಕದ ಭಾವನೆಗಳನ್ನು ಬೆಳೆಸುತ್ತದೆ. ಅಲ್ಲದೆ, ಅಳುವುದರಿಂದ ಮೆದುಳಿನಲ್ಲಿ ನರಗಳ ಚಟುವಟಿಕೆ ಹೆಚ್ಚಾಗುತ್ತದೆ. ಇದು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
Source : https://zeenews.india.com/kannada/health/crying-also-has-lot-of-benefit-on-body-and-mind-151208