ಹಿರಿಯೂರು/ಯರಬಳ್ಳಿ: ಕುಟುಂಬ ಮತ್ತು ಶಾಲೆಗಳಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಹಣಕಾಸು ಸಂಸ್ಕೃತಿ ಮತ್ತು ಉಳಿತಾಯದ ಅಭ್ಯಾಸವನ್ನು ಕಲಿಸಿದರೆ, ಮುಂದೆ ಅವರು ಉತ್ತಮ ಆರ್ಥಿಕ ನಿರ್ವಹಣೆ ಮಾಡುವ ಜವಾಬ್ದಾರಿಯುತ ನಾಗರಿಕರಾಗಿ ಬೆಳೆಯುತ್ತಾರೆ ಎಂದು ಯರಬಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಮೋಹನ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಯರಬಳ್ಳಿ ಗ್ರಾಮದ ಸರ್ಕಾರಿ ಪಿಎಂಶ್ರೀ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಮಕ್ಕಳ ಬ್ಯಾಂಕ್’ (ಪಿಗ್ಗಿ ಬ್ಯಾಂಕ್) ಉದ್ಘಾಟಿಸಿ ಅವರು ವಿಶೇಷ ಉಪನ್ಯಾಸ ನೀಡಿದರು. ಶಾಲೆಗಳಲ್ಲಿ ಇಂತಹ ಸಣ್ಣ ಉಳಿತಾಯ ಯೋಜನೆಗಳನ್ನು ಪ್ರಾರಂಭಿಸುವುದು ಮಕ್ಕಳಲ್ಲಿ ಆರ್ಥಿಕ ಶಿಸ್ತು ಮತ್ತು ಉತ್ತಮ ಜೀವನಶೈಲಿಯನ್ನು ಬೆಳೆಸಲು ಪೂರಕವಾಗಿದೆ ಎಂದು ಅವರು ತಿಳಿಸಿದರು.
ಪಿಗ್ಗಿ ಬ್ಯಾಂಕ್ನಲ್ಲಿ ಪ್ರತಿದಿನ ಅಲ್ಪ ಮೊತ್ತದ ಹಣವನ್ನು ಉಳಿಸುವ ಮೂಲಕ ಮಕ್ಕಳು ಉಳಿತಾಯದ ಮಹತ್ವವನ್ನು ಕಲಿಯುತ್ತಾರೆ. ಹಣವನ್ನು ಕೂಡಿಟ್ಟು ನಂತರ ಬಳಸುವ ಅನುಭವವು ಅವರಿಗೆ ಹಣದ ಮೌಲ್ಯವನ್ನು ಮನವರಿಕೆ ಮಾಡಿಕೊಡುತ್ತದೆ. ಈ ಉಳಿತಾಯದ ಹಣವು ಮಕ್ಕಳಿಗೆ ಪುಸ್ತಕ ಕೊಳ್ಳಲು ಅಥವಾ ಕುಟುಂಬದ ಕಷ್ಟದ ಸಮಯದಲ್ಲಿ ಶಾಲಾ ಶುಲ್ಕ ಭರಿಸಲು ಸಹಾಯಕವಾಗುವುದಲ್ಲದೆ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ ಎಂದು ಮೋಹನ್ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ನಾಗರಾಜ್ ಮಾತನಾಡಿ, “ಈ ಪಿಗ್ಗಿ ಬ್ಯಾಂಕ್ ಪ್ರತಿ ಶುಕ್ರವಾರದ ಕೊನೆಯ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇವಲ 5 ರೂಪಾಯಿ ಠೇವಣಿಯೊಂದಿಗೆ ಮಕ್ಕಳು ಖಾತೆ ತೆರೆಯಬಹುದು. ಇದಕ್ಕೆ ಪೋಷಕರ ಒಪ್ಪಿಗೆ ಕಡ್ಡಾಯವಾಗಿದೆ. ಖಾತೆ ತೆರೆದ ಮಕ್ಕಳಿಗೆ ಉಳಿತಾಯ ಪುಸ್ತಕ (ಪಾಸ್ಬುಕ್) ನೀಡಲಾಗುವುದು,” ಎಂದು ಯೋಜನೆಯ ರೂಪುರೇಷೆಗಳನ್ನು ತಿಳಿಸಿದರು.
ಉಳಿತಾಯದ ಹಣದಲ್ಲಿ ಒಮ್ಮೆಗೆ ಕೇವಲ 10 ರೂಪಾಯಿ ಮಾತ್ರ ಹಿಂಪಡೆಯಲು ಅವಕಾಶವಿದ್ದು, ಇದು ಮಕ್ಕಳು ಹಣವನ್ನು ಯೋಚಿಸಿ ಖರ್ಚು ಮಾಡುವಂತೆ ಪ್ರೇರೇಪಿಸುತ್ತದೆ. ಕಾರ್ಯಕ್ರಮದಲ್ಲಿ ಹಲವು ಮಕ್ಕಳು 5 ರೂಪಾಯಿ ನೀಡಿ ಖಾತೆ ತೆರೆದರು, ಅವರಿಗೆ ಸಂಘಟಕರು ಪಾಸ್ಬುಕ್ಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಾಯಕ ಸಿಬ್ಬಂದಿ ರಂಗಚಾರ್, ಹಿರಿಯ ಶಿಕ್ಷಕರಾದ ಶ್ರೀಮತಿ ಸವಿತಾ, ವಿಜಯಮ್ಮ, ಅನುಸೂಯಮ್ಮ, ಮಂಜುನಾಥ್, ಮಾರುತಿ, ಸಂತೋಷ್, ದರ್ಶನ್, ರಾಜು, ವೀರೇಂದ್ರ ಹಾಗೂ ಭುವನ್ ಉಪಸ್ಥಿತರಿದ್ದರು.