Neeraj Chopra World’s No. 1 Javelin Thrower: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನಂತರ ಶ್ರೇಯಾಂಕದಲ್ಲಿ ಕುಸಿದ ಕಂಡಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ವಿಶ್ವದ ನಂಬರ್ 1 ಜಾವೆಲಿನ್ ಎಸೆತಗಾರ ಪಟ್ಟವನ್ನು ಅಲಂಕರಿಸಿದ್ದಾರೆ. ಆಂಡರ್ಸನ್ ಪೀಟರ್ಸ್ ಅವರನ್ನು ಹಿಂದಿಕ್ಕಿ 1445 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ಅವರ ಸ್ಥಿರ ಪ್ರದರ್ಶನ ಮತ್ತು ಹೊಸ ರಾಷ್ಟ್ರೀಯ ದಾಖಲೆ ನಿರ್ಮಾಣ ಇದಕ್ಕೆ ಕಾರಣ. ಬೆಂಗಳೂರಿನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅವರ ಪ್ರದರ್ಶನಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ.

ಭಾರತಕ್ಕೆ ಎರಡೆರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದುಕೊಟ್ಟಿರುವ ಚಿನ್ನದ ಹುಡುಗ ನೀರಜ್ ಚೋಪ್ರಾ ( Neeraj Chopra) ಇದೀಗ ವಿಶ್ವದ ನಂಬರ್-1 ಜಾವೆಲಿನ್ ಎಸೆತಗಾರ ಎಂಬ ಕಿರೀಟವನ್ನು ಮತ್ತೊಮ್ಮೆ ಮುಡಿಗೇರಿಸಿಕೊಂಡಿದ್ದಾರೆ. ಗ್ರೆನಡಾದ ಆಂಡರ್ಸನ್ ಪೀಟರ್ಸ್‌ರನ್ನು ಹಿಂದಿಕ್ಕಿರುವ ನೀರಜ್ ಮತ್ತೊಮ್ಮೆ ನಂ.1 ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಜಾವೆಲಿನ್ ವಿಶ್ವ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ನೀರಜ್ ಚೋಪ್ರಾ 1445 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರೆ, ಆಂಡರ್ಸನ್ ಪೀಟರ್ಸ್ 1431 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ 1407 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಅರ್ಷದ್ ನದೀಮ್ 1370 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಮತ್ತೆ ಅಗ್ರಸ್ಥಾನಕ್ಕೇರಿದ ನೀರಜ್
ವಾಸ್ತವವಾಗಿ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವಲ್ಲಿ ವಿಫಲರಾಗಿದ್ದ ನೀರಜ್, ಬೆಳ್ಳಿಗೆ ತೃಪ್ತಿಪಡಬೇಕಾಯಿತು. ಆ ಬಳಿಕ ನೀರಜ್ ತಮ್ಮ ನಂ.1 ಪಟ್ಟವನ್ನು ಸಹ ಕಳೆದುಕೊಂಡಿದ್ದರು. ಆದರೆ ಒಲಿಂಪಿಕ್ಸ್ ಬಳಿಕ ಪ್ರತಿ ಪಂದ್ಯಾವಳಿಯಲ್ಲೂ ಸ್ಥಿರವಾಗಿ ಪ್ರದರ್ಶನ ನೀಡುವ ಮೂಲಕ ನೀರಜ್ ಮತ್ತೆ ಅಗ್ರಸ್ಥಾನಕ್ಕೇರುವಲ್ಲಿ ಯಶಸ್ವಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಆಹ್ವಾನಿತ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಈ ಆವೃತ್ತಿಯನ್ನು ಪ್ರಾರಂಭಿಸಿದ್ದ ನೀರಜ್, ಇದಾದ ನಂತರ ಡೈಮಂಡ್ ಲೀಗ್‌ನ ದೋಹಾ ಲೆಗ್‌ನಲ್ಲಿ 90.23 ಮೀಟರ್ ಎಸೆದು ಹೊಸ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದಲ್ಲದೆ 90 ಮೀಟರ್ ದೂರ ಜಾವೆಲಿನ್ ಎಸೆದ ಕೆಲವೇ ಕೆಲವು ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡರು. ಆದಾಗ್ಯೂ, ಈ ಸ್ಪರ್ಧೆಯಲ್ಲಿ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ಪೀಟರ್ಸ್ ವಿರುದ್ಧ ಸೋತಿದ್ದ ನೀರಜ್
ನೀರಜ್ ಚೋಪ್ರಾ ಕೊನೆಯ ಬಾರಿಗೆ 2022 ರಲ್ಲಿ ನಡೆದಿದ್ದ ಪೋಲೆಂಡ್‌ನ ಜನುಸ್ಜ್ ಕುಸೊಸಿನ್ಸ್ಕಿ ಸ್ಮಾರಕ ಕೂಟದಲ್ಲಿ ಆಂಡರ್ಸನ್ ಪೀಟರ್ಸ್ ವಿರುದ್ಧ ಸೋಲನುಭವಿಸಿದ್ದರು. ಆ ಸ್ಪರ್ಧೆಯಲ್ಲಿ ಪೀಟರ್ಸ್ 89.91 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದರೆ, ನೀರಜ್ 88.39 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದಿದ್ದರು. ಅಂದಿನಿಂದ, ನೀರಜ್ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಪ್ರತಿ ಪಂದ್ಯದಲ್ಲೂ ಪೀಟರ್ಸ್ ಅವರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನಲ್ಲಿ ನೀರಜ್ ಚೋಪ್ರಾ
ಜುಲೈ 5 ರಿಂದ ಬೆಂಗಳೂರಿನಲ್ಲಿ ನೀರಜ್ ಚೋಪ್ರಾ ಕ್ಲಾಸಿಕ್ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ವಿಶ್ವದ ಅನೇಕ ಅತ್ಯುತ್ತಮ ಆಟಗಾರರು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಇದಲ್ಲದೆ, ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಸೇರಿದಂತೆ 5 ಭಾರತೀಯ ಆಟಗಾರರು ಸಹ ಈ ಸ್ಪರ್ಧೆಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ. ಭಾರತದಲ್ಲಿ ಮೊದಲ ಬಾರಿಗೆ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಇದಕ್ಕೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಅನುಮೋದನೆ ನೀಡಿದೆ.