Jawan review: ಬಹುನಿರೀಕ್ಷಿತ ಚಿತ್ರ ‘ಜವಾನ್’ ಇಂದು ತೆರೆ ಕಂಡಿದ್ದು, ಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ಸ್ವೀಕರಿಸಿದೆ.

‘ಪಠಾಣ್’ ಸೂಪರ್ ಹಿಟ್ ನಂತರ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜವಾನ್’.
ಖ್ಯಾತ ತಮಿಳು ನಿರ್ದೇಶಕ ಅಟ್ಲೀ ಆಯಕ್ಷನ್ ಕಟ್ ಹೇಳಿರುವ ಈ ಸಿನಿಮಾ ಇಂದು (ಸೆಪ್ಟಂಬರ್ 7) ತೆರೆ ಕಂಡಿದೆ. ದೇಶದ ಹಲವು ಕಡೆಗಳಲ್ಲಿ ಚಿತ್ರವು ಗುರುವಾರ ಬೆಳಗ್ಗೆ 6 ಗಂಟೆಯ ಶೋದೊಂದಿಗೆ ಬಿಡುಗಡೆಯಾಯಿತು. ಸಿನಿಮಾ ವೀಕ್ಷಿಸಿದ ಶಾರುಖ್ ಅಭಿಮಾನಿಗಳು ಈಗಾಗಲೇ ‘ಜವಾನ್’ ಅನ್ನು ಬ್ಲಾಕ್ಬಸ್ಟರ್ ಎಂದು ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ಜವಾನ್’ ವಿಮರ್ಶೆಗಳ ಸುರಿಮಳೆಯೇ ಆಗುತ್ತಿದೆ.
ಹೇಗಿದೆ ಸಿನಿಮಾ..? ‘ಜವಾನ್’ ಸಿನಿಮಾ ವೀಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಲು ಎಕ್ಸ್ ಅನ್ನು ವೇದಿಕೆಯನ್ನಾಗಿ ಬಳಸಿಕೊಂಡರು. ಪ್ರೇಕ್ಷಕರ ಪ್ರಕಾರ, ಚಿತ್ರದಲ್ಲಿನ ಶಾರುಖ್ ಖಾನ್ ನಟನೆಯು ಈ ಮೊದಲಿನ ಎಲ್ಲಾ ಸಿನಿಮಾಗಿಂತ ನೆಕ್ಸ್ಟ್ ಲೆವೆಲ್ನಲ್ಲಿದೆ. ಅಟ್ಲೀ ಅವರ ಕಥೆಯು ಅತ್ಯಂತ ಆಕರ್ಷಕವಾಗಿದ್ದು, ಉತ್ತಮವಾಗಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ವಿಜಯ್ ಸೇತುಪತಿ ಬಗ್ಗೆ ಹೇಳಬೇಕೆಂದಿಲ್ಲ. ಅತ್ಯದ್ಭುತವಾಗಿ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ.
ದೀಪಿಕಾ ಪಡುಕೋಣೆ ತಮ್ಮ ಪಾತ್ರಕ್ಕೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ನಯನತಾರಾ ಚಿತ್ರದಲ್ಲಿ ವಿಶೇಷ ಗಮನ ಸೆಳೆದಿದ್ದು, ಅತ್ಯುತ್ತಮ ನಟನೆಯನ್ನು ನೀಡಿದ್ದಾರೆ. ಅನಿರುದ್ಧ್ ಚಂದರ್ ಸಂಗೀತ ಸಂಯೋಜನೆ ‘ಜವಾನ್’ ಸಿನಿಮಾವನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದೆ. ಕೆಲವು ಸಣ್ಣ ಪುಟ್ಟ ಸಮಸ್ಯೆಗಳಿದ್ದರೂ ಸಹ, ಒಟ್ಟಾರೆಯಾಗಿ ಚಿತ್ರವು ಬ್ಲಾಕ್ಬಸ್ಟರ್ ಆಗಿದೆ. ಶಾರುಖ್ ಅಭಿಮಾನಿಗಳು ‘ಜವಾನ್’ ಮೇಲೆ ಇಟ್ಟುಕೊಂಡಿದ್ದ, ನಿರೀಕ್ಷೆ ಹುಸಿಯಾಗದೆ ಪ್ರೇಕ್ಷಕರಿಗೆ ದೊಡ್ಡ ಮಟ್ಟದಲ್ಲಿ ಮನರಂಜನೆ ನೀಡಿದೆ.
ಪ್ರೇಕ್ಷಕರು ಹೇಳಿದ್ದೇನು?: ರಾಜಮೌಳಿ ಮತ್ತು ಶಂಕರ್ ನಂತರ ಕಮರ್ಷಿಯಲ್ ಸಿನಿಮಾದಲ್ಲಿ ತಾನೊಬ್ಬ ರಾಜ ಎಂಬುದನ್ನು ಅಟ್ಲೀ ಸಾಬೀತು ಪಡಿಸಿದ್ದಾರೆ. 2-3 ವರ್ಷಗಳಲ್ಲಿ ಯಾವುದೇ ಬಾಲಿವುಡ್ ನಿರ್ದೇಶಕರು ನೀಡದೇ ಇರುವ ಹಿಂದಿ ಮಸಾಲಾವನ್ನು ಅಟ್ಲೀ ನೀಡಿದ್ದಾರೆ. ನೋಡಿದ ಶಾರುಖ್ ಖಾನ್ ಅಭಿಮಾನಿಗಳು ಹುಚ್ಚರಾಗಿದ್ದಾರೆ. ಫಸ್ಟ್ ಆಫ್ ಮತ್ತು ಸೆಕೆಂಡ್ ಆಫ್ ಎರಡೂ ಕೂಡ ಅತ್ಯುತ್ತಮವಾಗಿದ್ದು, ಈವರೆಗಿನ ಎಲ್ಲಾ ದಾಖಲೆಗಳು ಬ್ರೇಕ್ ಆಗುವುದಂತೂ ಪಕ್ಕಾ ಎಂಬುದು ‘ಜವಾನ್’ ನೋಡಿದ ಪ್ರೇಕ್ಷಕರ ಅಭಿಪ್ರಾಯ.
ಎಕ್ಸ್ನಲ್ಲಿ ಅಭಿಮಾನಿಯೊಬ್ಬರು, “ಜವಾನ್ ಎಂತಹ ಅದ್ಭುತ ಚಿತ್ರ. ಎಸ್ಆರ್ಕೆ ಮಾಸ್ಟರ್ಪೀಸ್. ಚಿತ್ರವು ಮನಸೆಳೆಯುವ ಗೂಸೆಬಂಪ್ಸ್ ಕ್ಷಣಗಳನ್ನು ಸೃಷ್ಟಿಸಿದೆ. ವಿಜಯ್ ಸೇತುಪತಿ ಅಭಿನಯ ತುಂಬಾ ಚೆನ್ನಾಗಿತ್ತು. ಅನಿರುದ್ಧ್ ಸಂಗೀತವು ಥಿಯೇಟರ್ನಲ್ಲಿ ಚಿಂದಿ ಉಡಾಯಿಸಿದೆ. ಅಟ್ಲೀ ಅವರದ್ದು ಎಂತಹ ಅದ್ಭುತ ಕಮ್ಬ್ಯಾಕ್. ಶಾರುಖ್ ಖಾನ್ ನಿಸ್ಸಂದೇಹವಾಗಿ ಬಾಲಿವುಡ್ನ ಕಿಂಗ್” ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಚಿತ್ರಕ್ಕೆ 4 ಸ್ಟಾರ್ಗಳನ್ನು ನೀಡಿದ್ದಾರೆ.
‘ಜವಾನ್’ ನೋಡಲು ಸಿನಿ ಪ್ರೇಮಿಗಳು ಮುಂಜಾನೆಯಿಂದಲೇ ಚಿತ್ರಮಂದಿರಗಳಿಗೆ ಮುಗಿಬಿದ್ದಿದ್ದಾರೆ. ಶಿಳ್ಳೆ, ಚಪ್ಪಾಳೆಗಳ ನಡುವೆ ವಿಶ್ವದಾದ್ಯಂತ ‘ಜವಾನ್’ ಫಿವರ್ ಜೋರಾಗಿದೆ. ಪ್ರಸಿದ್ಧ ಥಿಯೇಟರ್ಗಳ ಮುಂದೆ ಶಾರುಖ್ ಖಾನ್ ಕಟೌಟ್ಗಳನ್ನು ಕೂಡ ಹಾಕಲಾಗಿದೆ. ಸದ್ಯ ‘ಜವಾನ್’ಗೆ ಸಂಬಂಧಿಸಿದ ಸಂಭ್ರಮಾಚರಣೆಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk
ನಮ್ಮ Facebook page: https://www.facebook.com/samagrasudii