ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಿ ಶಾಕ್ ಕೊಟ್ಟ ಜಿಯೋ.

ನವದೆಹಲಿ, ಆಗಸ್ಟ್ 6: ಬಹಳ ಜನಪ್ರಿಯವಾಗಿದ್ದ ಮತ್ತು ಅನ್​ಲಿಮಿಟೆಡ್ 5ಜಿ ಡಾಟಾ ಕೊಡುತ್ತಿದ್ದ ಎರಡು ಜನಪ್ರಿಯ ಪ್ಲಾನ್​ಗಳನ್ನು ರಿಲಾಯನ್ಸ್ ಜಿಯೋ ಕೈಬಿಟ್ಟಿದೆ. ಜಿಯೋದಲ್ಲಿ 395 ರೂ ಮತ್ತು 1,559 ರೂ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್​ಗಳು ಇನ್ಮುಂದೆ ಸಿಕ್ಕುವುದಿಲ್ಲ. ತನ್ನ ಸರಾಸರಿ ಆದಾಯ (ಎಆರ್​ಪಿಯು) ಹೆಚ್ಚಿಸಲು ರಿಲಾಯನ್ಸ್ ಜಿಯೋ ಮಾಡಿರುವ ದೊಡ್ಡ ಪ್ಲಾನ್​ನ ಒಂದು ಭಾಗ ಇದು ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್​ಗಳಲ್ಲಿ ಸಾಕಷ್ಟು ವ್ಯತ್ಯಯಗಳಾಗುವ ಸಾಧ್ಯತೆ ಇದೆ.

ರಿಲಾಯನ್ಸ್ ಜಿಯೋ ಕೈಬಿಟ್ಟಿರುವ 395 ರೂ ಪ್ಲಾನ್ 84 ದಿನಗಳ ವ್ಯಾಲಿಡಿಟಿ ಹೊಂದಿತ್ತು. 1,559 ರೂ ಪ್ಲಾನ್ 336 ದಿನದ ವ್ಯಾಲಿಡಿಟಿ ಹೊದಿತ್ತು. ಈ ಎರಡೂ ಪ್ಲಾನ್​ಗಳು ಅನ್​ಲಿಮಿಟೆಡ್ 5ಜಿ ಡಾಟಾ ಆಫರ್ ಮಾಡುತ್ತಿದ್ದವು. ಬಹಳಷ್ಟು ಗ್ರಾಹಕರು ಈ ಪ್ಲಾನ್​ಗಳನ್ನು ಸಬ್​ಸ್ಕ್ರೈಬ್ ಮಾಡಿದ್ದರು. ಇದು ಜಿಯೋದ ಎಆರ್​ಪಿಯುಗೆ (ಪ್ರತೀ ಬಳಕೆದಾರನಿಂದ ಸಿಗುವ ಸರಾಸರಿ ಆದಾಯ) ಹೊಡೆತ ಬಿದ್ದಿದೆ. ಈ ಕಾರಣಕ್ಕೆ ಪ್ಲಾನ್​ಗಳನ್ನು ಜಿಯೋ ಕೈಬಿಟ್ಟಿರಬಹುದು.

ಜುಲೈನಲ್ಲಿ ಜಿಯೋ ಕೈಗೊಂಡ ದರ ಹೆಚ್ಚಳ

  • 2ಜಿಬಿ ಡಾಟಾ ಮತ್ತು 28 ದಿನ ವ್ಯಾಲಿಡಿಟಿಯ ಪ್ಲಾನ್ ದರ 155 ರೂನಿಂದ 189 ರೂಗೆ ಹೆಚ್ಚಳ
  • ದಿನಕ್ಕೆ 1ಜಿಬಿ ಡಾಟಾ, 28 ದಿನ ವ್ಯಾಲಿಡಿಯ ಪ್ಲಾನ್ ದರ: 209ರೂನಿಂದ 249 ರೂಗೆ ಏರಿಕೆ.
  • ದಿನಕ್ಕೆ 1.5ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್ ದರ: 239 ರೂನಿಂದ 299 ರೂಗೆ ಏರಿಕೆ.
  • ದಿನಕ್ಕೆ 2ಜಿಬಿ ಡಾಟಾ, 28 ದಿನ ವ್ಯಾಲಿಡಿಟಿಯ ಪ್ಲಾನ್​ನ ದರ 299 ರೂನಿಂದ 349 ರೂಗೆ ಹೆಚ್ಚಳ.

ರಿಲಾಯನ್ಸ್ ಜಿಯೋದ ಈ ಬೇಸ್ ಪ್ಲಾನ್​ಗಳಷ್ಟೇ ಅಲ್ಲ, 84 ದಿನಗಳದ್ದು, 56 ದಿನಗಳದ್ದು, ಒಂದು ವರ್ಷದ್ದು ಹೀಗೆ ದೀರ್ಘಾವಧಿ ಪ್ಲಾನ್​ಗಳ ದರಗಳಲ್ಲಿ ಸಾಕಷ್ಟು ಹೆಚ್ಚಳ ಮಾಡಲಾಗಿದೆ. 365 ದಿನಗಳ ವ್ಯಾಲಿಡಿಟಿ ಮತ್ತು ದಿನಕ್ಕೆ 2.5 ಜಿಬಿ ಡಾಟಾ ಕೊಡುತ್ತಿದ್ದ 2,999 ರೂ ಪ್ಲಾನ್​ನ ದರವನ್ನು 600 ರೂನಷ್ಟು ಹೆಚ್ಚಿಸಲಾಗಿದೆ.

5ಜಿ ನೆಟ್ವರ್ಕ್​ಗೆ ಬಹಳಷ್ಟು ಹೂಡಿಕೆ ಮಾಡಿರುವ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳು ಕಳೆದ ತಿಂಗಳು ಸ್ವಾಭಾವಿಕವಾಗಿ ಟೆಲಿಕಾಂ ದರಗಳನ್ನು ಏರಿಕೆ ಮಾಡಿದ್ದವು. ಇಲ್ಲಿ ಬಿಎಸ್ಸೆನ್ನೆಲ್ ಮಾತ್ರವೇ ಇನ್ನೂ 5ಜಿ ಅಖಾಡಕ್ಕೆ ಇಳಿಯದೇ ಇರುವುದು. ಹೀಗಾಗಿ, ಬಿಎಸ್ಸೆನ್ನೆಲ್ ಅಗ್ಗದ ದರದಲ್ಲಿ 3ಜಿ ಮತ್ತು 4ಜಿ ಸೇವೆ ನೀಡಿ, ಸಾಕಷ್ಟು ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಆದರೆ, 5ಜಿ ಸರ್ವಿಸ್ ಬಯಸುವವರಿಗೆ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಮಾತ್ರವೇ ಸದ್ಯಕ್ಕೆ ಇರುವ ಆಯ್ಕೆ.

Source : https://tv9kannada.com/business/reliance-jio-gives-up-its-popular-rs-395-and-1559-recharge-plans-details-in-kannada-snvs-878548.html

 

Leave a Reply

Your email address will not be published. Required fields are marked *