ಬೆಂಗಳೂರು: ಆಂಬುಲೆನ್ಸ್‌ಗೆ ಸಿಗ್ನಲ್ ಜಂಪ್ ಮಾಡಿ ದಾರಿ ಬಿಟ್ಟಿದ್ರಾ? ನಿಮ್ಮ ವಾಹನಗಳ ದಂಡ ಹಾಕಲ್ಲ ಬಿಡಿ.

ಬೆಂಗಳೂರು ವಾಹನ ಸವಾರರಿಗೆ ಗುಡ್ ನ್ಯೂಸ್. ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದರೆ ಅಂತಹ ಕೇಸಿಗೆ ಸಂಬಂಧಪಟ್ಟ ದಂಡವನ್ನು ರದ್ದುಗೊಳಿಸಲಾಗುತ್ತದೆ.

ಬೆಂಗಳೂರು (ಜು.15): ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಮುಖ ರಸ್ತೆಗಳು ಹಾಗೂ ಜಂಕ್ಷನ್‌ಗಳಲ್ಲಿ ಆಂಬುಲೆನ್ಸ್‌ಗೆ ಜಾಗ ಮಾಡಿಕೊಡುವುದಕ್ಕಾಗಿ ಟ್ರಾಫಿಕ್ ರೆಡ್ ಸಿಗ್ನಲ್ ಜಂಪ್ ಮಾಡಿದ ವಾಹನಗಳಿಗೆ ವಿಧಿಸಲಾಗಿದ್ದ ದಂಡವನ್ನು ಮನ್ನಾ ಮಾಡಲಗುವುದು ಎಂದು ಬೆಂಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಾಹನ ಚಾಲಕರು ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡಲು ಪ್ರಯತ್ನಿಸಿದಾಗ ಟ್ರಾಫಿಕ್ ಸಿಗ್ನಲ್‌ಗಳನ್ನು ದಾಟುತ್ತಾರೆ. ಆಗ ಟ್ರಾಫಿಕ್ ಕ್ಯಾಮೆರಾಗಳು ಸಿಗ್ನಲ್ ಜಂಪ್ ಮಾಡಿದ ಹಿನ್ನೆಲೆಯಲ್ಲಿ ದಂಡವನ್ನು ವಿಧಿಸಲಾಗುತ್ತಿದೆ. ಇದರಿಂದಾಗಿ ವಾಹನ ಸವಾರರಿಗೆ ಅನಗತ್ಯವಾಗಿ ದಂಡ ಬೀಳಲಾಗುತ್ತಿದೆ. ಆದರೆ, ಇದನ್ನು ಟ್ರಾಫಿಕ್ ಪೊಲೀಸ್ ಕಂಟ್ರೋಮ್‌ ರೂಮಿನಲ್ಲಿ ಸಂಪೂರ್ಣವಾಗಿ ಪರಿಶೀಲನೆ ಮಾಡಿದ ನಂತರ ಹೀಗೆ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ವಾಹನಗಳಿಗೆ ವಿಧಿಸಲಾದ ದಂಡವನ್ನು ರದ್ದುಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್‌ನಲ್ಲಿ ಅಥವಾ ಕರ್ನಾಟಕ ರಾಜ್ಯ ಪೊಲೀಸ್‌ (ಕೆಎಸ್‌ಪಿ) ಅಪ್ಲಿಕೇಶನ್‌ ಮೂಲಕ ಪರಿಶೀಲನೆಯ ನಂತರ ಆಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡುವ ಸಂದರ್ಭದಲ್ಲಿ ವಿಧಿಸಲಾದ ದಂಡವನ್ನು ತಕ್ಷಣವೇ ರದ್ದುಗೊಳಿಸಲಾಗುವುದು. ಇನ್ನುಮುಂದೆ ಟ್ರಾಫಿಕ್ ಸಿಗ್ನಲ್‌ಗಳ ಬಳಿಗೆ ಆಂಬುಲೆನ್ಸ್ ಬರುವುದನ್ನು ಗಮನಿಸಿಕೊಂಡು ತಂತಾನೆ ಟ್ರಾಫಿಕ್ ಸಿಗ್ನಲ್ ಹಸಿರು ಬಣ್ಣಕ್ಕೆ ಪರಿವರ್ತನೆ ಆಗುವಂತೆ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗುವುದು. ಇದರಿಂದ ಆಂಬುಲೆನ್ಸ್‌ಗೆ ದಾರಿ ಬಿಟ್ಟುಕೊಡುವ ಸಂದರ್ಭದಲ್ಲಿ ತಂತಾನೆ ರೆಡ್ ಸಿಗ್ನಲ್ ಹಸಿರು ಬಣ್ಣಕ್ಕೆ ತಿರುಗುತ್ತದೆ ಎಂದು ಹೇಳಿದರು.

10 ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಜಿಯೋ ಫೆನ್ಸಿಂಗ್:
ನಗರದಲ್ಲಿರುವ ಪ್ರಮುಖ 10 ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಆಂಬುಲೆನ್ಸ್ ಬರುವುದನ್ನು 100 ಮೀ. ದೂರಿದಿಂದಲೇ ಜಿಪಿಎಸ್ ಆಧಾರದಲ್ಲಿ ಗುರುತಿಸಿ (ಜಿಯೋ ಫೆನ್ಸಿಂಗ್) ರೆಡ್ ಸಿಗ್ನಲ್ ಇದ್ದಲ್ಲಿ ಕೂಡಲೇ ಹಸಿರು ಸಿಗ್ನಲ್ ನೀಡಲಾಗುತ್ತದೆ. ಇದರಿಂದ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಜನರು ಸರಾಗವಾಗಿ ಮುಂದೆ ಹೋಗುವ ಮೂಲಕ ಆಂಬುಲೆನ್ಸ್‌ಗೆ ದಾರಿ ಮಾಡಿಕೊಡುತ್ತಾರೆ. ಇದರಿಂದ ವಾಹನಗಳಿಗೆ ಬೀಳುವ ದಂಡವನ್ನು ಪೊಲೀಸರು ಪರಿಶೀಲನೆ ಮಾಡಿ ರದ್ದುಗೊಳಿಸುವ ಪ್ರಮೇಯ ಬರುವುದಿಲ್ಲ. ನಗರದ 10 ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಇನ್ನು ಇನ್‌ಫ್ಯಾಂಟ್ರಿ ವೃತ್ತದಲ್ಲಿನ ಸುತ್ತಲಿನ ಆಸ್ಪತ್ರೆಗಳಿಗೆ ಸಂಚಾರ ಮಾಡುವ 80 ಆಂಬುಲೆನ್ಸ್‌ಗಳಿಗೆ ಜಿಪಿಎಸ್‌ ಅಳವಡಿಕೆ ಮಾಡಿದ್ದು, ಅದನ್ನು ಗುರುತಿಸಿ ಟ್ರಾಫಿಕ್ ಸಿಗ್ನಲ್‌ಗಳು ಸ್ವಯಂ ಚಾಲಿತವಾಗಿ ಹಸಿರು ಬಣ್ಣಕ್ಕೆ ತಿರುಗಲಿವೆ. ಇಂತಹ ಎಐ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸಿಗ್ನಲ್‌ಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು. 

ವಿದ್ಯಾರಣ್ಯಪುರದ ನಿವಾಸಿಯೊಬ್ಬರು ಪೊಲೀಸರ ರಸ್ತೆಗಳಲ್ಲಿದ್ದರೂ ಪ್ರಮುಖ ರಸ್ತೆಗಳಲ್ಲಿ ಅಕ್ರಮವಾಗಿ ಪಾರ್ಕಿಂಗ್ ಮಾಡುವುದು ನಿಯಂತ್ರಣ ಆಗುತ್ತಿಲ್ಲ ಎಂದು ದೂರು ನೀಡಿದರು. ಈ ವೇಳೆ ಇಂತಹ ಉಲ್ಲಂಘನೆಗಳನ್ನು ತಡೆಯಲು ಪೊಲೀಸರ ಗಸ್ತು ಹೆಚ್ಚಳ ಮಾಡಲಾಗುವುದು. ಜೊತೆಗೆ, ನಾಗವಾರ ಜಂಕ್ಷನ್ ಬಳಿ ಬಿಎಂಟಿಸಿ ಬಸ್‌ಗಳಿಂದ ದೊಡ್ಡ ಮಟ್ಟದ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಹೇಳಿದರು. ರಸ್ತೆ ಸುರಕ್ಷತೆ ಮತ್ತು ಟ್ರಾಫಿಕ್ ಜಾಮ್ ನಿಯಂತ್ರಣದ ಹಿನ್ನೆಲೆಯಲ್ಲಿ ಎಲ್ಲ ಬಿಎಂಟಿಸಿ ಚಾಲಕರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಹೇಳಿದರು.

Source : https://kannada.asianetnews.com/karnataka-districts/bengaluru-traffic-police-cancel-fines-for-those-who-will-make-way-for-ambulance-in-signals-sat-sgnjbh

Leave a Reply

Your email address will not be published. Required fields are marked *