Junior Asia Cup Hockey 2023: ಪಾಕ್ ಮುಂದೆ ಭಾರತವೇ ಬಲಿಷ್ಠ; ಇಂದು ಬದ್ಧವೈರಿಗಳ ನಡುವೆ ಫೈನಲ್ ಕಾಳಗ!

ಒಮಾನ್‌ನ ಸಲಾಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗುರುವಾರ ನಡೆಯಲಿರುವ ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.  ಈ ಬದ್ಧ ವೈರಿಗಳ ಕಾಳಗ ರಾತ್ರಿ 9:30ಕ್ಕೆ ಪ್ರಾರಂಭವಾಗಲಿದೆ ಮತ್ತು ಭಾರತದಲ್ಲಿ ನೇರ ಪ್ರಸಾರವಾಗಲಿದೆ.ಪುರುಷರ ಜೂನಿಯರ್ ಏಷ್ಯಾಕಪ್ 2023 ಹಾಕಿಯಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಅಜೇಯರಾಗಿ ಫೈನಲ್​ಗೆ ಎಂಟ್ರಿಕೊಟ್ಟಿವೆ. ಈ ಮೊದಲು ಲೀಗ್ ಹಂತಗಳಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯ 1-1 ರಲ್ಲಿ ಡ್ರಾಗೊಂಡಿತ್ತು. ಆದಾಗ್ಯೂ, ಭಾರತ ತಂಡ, ಪಾಕ್ ತಂಡಕ್ಕಿಂತ ಹೆಚ್ಚಿನ ಗೋಲು ಬಾರಿಸಿರುವುದರಿಂದಾಗಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಚೈನೀಸ್ ತೈಪೆ ವಿರುದ್ಧ 18-0 ಮತ್ತು ಜಪಾನ್ ವಿರುದ್ಧ 3-1 ಅಂತರದ ಜಯದೊಂದಿಗೆ ತನ್ನ ಅಭಿಯಾನ ಆರಂಭಿಸಿತ್ತು. ಆ ಬಳಿಕ ಭಾರತ ತನ್ನ ಅಂತಿಮ ಗುಂಪಿನ ಪಂದ್ಯದಲ್ಲಿ ಥಾಯ್ಲೆಂಡ್‌ ಅನ್ನು 17-0 ಅಂತರದಿಂದ ಸೋಲಿಸಿತು.  ನಂತರ ಸೆಮಿಫೈನಲ್‌ನಲ್ಲಿ ಕೊರಿಯಾ ತಂಡವನ್ನು 9-1 ಗೋಲುಗಳಿಂದ ಮಣಿಸಿದ ಭಾರತ ಇದೀಗ ಫೈನಲ್​ಗೆ ಎಂಟ್ರಿಕೊಟ್ಟಿದೆ.ಏತನ್ಮಧ್ಯೆ, ಪಾಕಿಸ್ತಾನ ಹಾಕಿ ತಂಡವು ತನ್ನ ಆರಂಭಿಕ ಪಂದ್ಯದಲ್ಲಿ 15-1 ರಿಂದ ಚೈನೀಸ್ ತೈಪೆಯನ್ನು ಸೋಲಿಸಿತ್ತು. ನಂತರದ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು 9-0 ಅಂತರದಿಂದ ಸೋಲಿಸಿದರೆ, ಅಂತಿಮ ಲೀಗ್ ಪಂದ್ಯದಲ್ಲಿ ಜಪಾನ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿತ್ತು. ಬಳಿಕ ಸೆಮಿಸ್‌ನಲ್ಲಿ ಮಲೇಷ್ಯಾವನ್ನು 6-2 ಗೋಲುಗಳಿಂದ ಸೋಲಿಸಿದ ಪಾಕ್, ಇದೀಗ ಭಾರತದ ವಿರುದ್ಧ ಫೈನಲ್​ನಲ್ಲಿ ಕಾದಾಡಲಿದೆ.ಪ್ರಸ್ತುತ ಒಂಬತ್ತು ಗೋಲುಗಳೊಂದಿಗೆ ಟೂರ್ನಮೆಂಟ್‌ನ ಜಂಟಿ ಅಗ್ರ ಸ್ಕೋರರ್ ಆಗಿರುವ ಪಾಕಿಸ್ತಾನದ ಅಬ್ದುಲ್ ರೆಹಮಾನ್ ಮತ್ತು ಏಳು ಸ್ಟ್ರೈಕ್‌ಗಳನ್ನು ಹೊಂದಿರುವ ಭಾರತದ ಆಕ್ರಮಣಕಾರಿ ಆಟಗಾರ ಅರಿಜೀತ್ ಸಿಂಗ್ ಹುಂಡಾಲ್ ನಡುವಿನ ಯುದ್ಧಕ್ಕೆ ಫೈನಲ್ ವೇದಿಕೆ ಸಜ್ಜಾಗಿದೆ.ಭಾರತ ಮತ್ತು ಪಾಕಿಸ್ತಾನ ಈ ಹಿಂದೆ ಮೂರು ಬಾರಿ ಜೂನಿಯರ್ ಏಷ್ಯಾಕಪ್ ಹಾಕಿಯ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದವು. 1996ರ ಫೈನಲ್‌ನಲ್ಲಿ ಪಾಕಿಸ್ತಾನ ಗೆದ್ದರೆ, 2004ರಲ್ಲಿ ಭಾರತ ಜಯಭೇರಿ ಬಾರಿಸಿತ್ತು.2015 ರಲ್ಲಿ ಮಲೇಷ್ಯಾದಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ ಭಾರತವು ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.

source https://tv9kannada.com/photo-gallery/mens-hockey-junior-asia-cup-2023-india-to-face-pakistan-in-the-finals-psr-591753.html

Leave a Reply

Your email address will not be published. Required fields are marked *