ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 19 : ರಾಜ್ಯದಲ್ಲಿರುವ ಎಲ್ಲಾ ಹಿಂದುಳಿದ ವರ್ಗಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲಾ ಅಲೆಮಾರಿ/ಅರೆ ಆಲೆಮಾರಿ ಜನಾಂಗದವರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಸರಕಾರ ಮಾಡಬೇಕಾಗಿದೆ. ಸಿಇಟಿ ಮತ್ತು ನೀಟ್ ಪರೀಕ್ಷೆಯಲ್ಲಿ ಎಸ್.ಎಸಿ ಮತ್ತು ಎಸ್‍ಟಿ ಜನಾಂಗದ ವಿದ್ಯಾರ್ಥಿಗಳಲ್ಲಿ ನೀಡುವ ಮಾನದಂಡವನ್ನು ನಮ್ಮ ಅಲೆಮಾರಿ ಓಬಿಸಿ. ಎಸ್.ಎಸಿ ಮತ್ತು ಎಸ್‍ಟಿ ವಿದ್ಯಾರ್ಥಿಗಳಿಗೂ ಅನುಸರಿಸಬೇಕು. ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ನಮ್ಮ ಪ್ರತಿಭಾನ್ವಿತ ಅಲೆಮಾರಿ ವಿದ್ಯಾರ್ಥಿಗಳಿಗೆ ಸರಕಾರವೇ ಶುಲ್ಕವನ್ನು ಭರಿಸಿ ಪ್ರವೇಶಾತಿಗೆ ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅಲೆಮಾರಿ/ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಆಗ್ರಹಿಸಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಅತ್ಯಂತ ಶೋಚನೀಯ ರೀತಿಯಲ್ಲಿ ಜೀವನ ಸಾಗಿಸುತ್ತಿರುವ ಅಲೆಮಾರಿ/ಅರೆ ಅಲೆಮಾರಿ ಜನಾಂಗದವರು ವಸತಿ, ನಿವೇಶನ, ಮಕ್ಕಳಿಗೆ ಶಿಕ್ಷಣ ಮುಂತಾದ ಎಲ್ಲಾ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ನಾನು ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿದ್ದಾಗ ರಾಜ್ಯದ ಪ್ರತಿ ಜಿಲ್ಲೆಗಳಿಗೆ, ತಾಲೂಕುಗಳಿಗೆ, ಕೆಲವು ಗ್ರಾಮಗಳಿಗೆ ಭೇಟಿ ನೀಡಿ ಈ ಜನಾಂಗದ ಜೀವನ ಸ್ಥಿತಿಯನ್ನು ಅತೀ ಸಮೀಪದಿಂದ ನೋಡಿದ್ದೇನೆ. ಬಹಳ ಮುಖ್ಯವಾಗಿ ಈ ಜನಾಂಗದ ಮಕ್ಕಳು ಶೈಕ್ಷಣಿಕ ವ್ಯವಸ್ಥೆಯಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ನಮ್ಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಎಲ್ಲಾ ರೀತಿಯ ಸಹಾಯ ಸಹಕಾರ ನೀಡುವ ಮೂಲಕ ಸರಕಾರ ಈ ವಿಚಾರವನ್ನು ಗಂಬೀರವಾಗಿ ಪರಿಗಣಿಸಬೇಕು. ಕೆಲವು ಕಡೆ ಸರಕಾರಿ ಜಾಗದಲ್ಲಿ ನಮ್ಮವರು ಕಳೆದ 10ವರ್ಷ ಗಳಿಗಿಂತ ಹೆಚ್ಚು ಕಾಲ ಡೇರೆ, ಗುಡಿಸಲು, ಟೆಂಟ್ ಹಾಕಿ ಜೀವನ ನಡೆಸುತ್ತಿರುವವರಿಗೆ ಆ ಜಾಗವನ್ನು ಅವರ ಹೆಸರಿನಲ್ಲಿಯೇ ಪಹಣಿ ಪತ್ರ ನೀಡಬೇಕು. ಪ್ರತೀ ಜಿಲ್ಲೆ ತಾಲೂಕಿಗೆ ಸಂಬಂದಿಸಿದಂತೆ ಅಲೆಮಾರಿ ಸಮುದಾಯ ಭವನ ನಿರ್ಮಿಸಬೇಕು. ಅಲೆಮಾರಿ ಜನರ ಅಂತಿಮ ಸಂಸ್ಕಾರಕ್ಕೆ ಅಲೆಮಾರಿ ರುದ್ರಭೂಮಿಯನ್ನು ನಿರ್ಮಿಸಿ ಕೊಡಬೇಕು. ಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡುವುದರ ಮೂಲಕ ನೇರಸಾಲ, ಗಂಗಾ ಕಲ್ಯಾಣ, ಭೂಖರೀದಿ ಯೋಜನೆ, ಸ್ವಸಹಾಯ ಗುಂಪುಗಳಿಗೆ ಆರ್ಥಿಕ ನೆರವು ಉನ್ನತ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಯೋಜನೆ, 5. ಸ್ವ ಉದ್ಯೋಗ, ಉದ್ಯಮಶೀಲತಾ ತರಬೇತಿ ಮುಂತಾದವುಗಳ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಈ ಮೂಲಕ ಅಲೆಮಾರಿ ಜನರು ಇತರರಂತೆ ಸ್ವಾಭಿಮಾನದ ಜೀವನ ನಡೆಸಲು ಅಲೆಮಾರಿ ಜನರ ಸರ್ವತೋಮುಖ ಅಭಿವೃದ್ಧಿಗೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜೋಗಿ ಮಾತನಾಡಿ, ಒಂದು ಕಡೆ ರಾಜ್ಯದ ಕೆಲವು ತಾಲೂಕಿನ ತಹಶೀಲ್ದಾರರು ಆಲೆಮಾರಿ/ಅರೆ ಅಲೆಮಾರಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗುವುದಿಲ್ಲ ಎಂದರೆ ಇನ್ನೊಂದು ಕಡೆ ಅಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳ ಪ್ರವೇಶಾತಿ ಸಂದರ್ಭದಲ್ಲಿ ಮೊರಾರ್ಜಿ ವಸತಿ ಶಾಲೆಯ ಪ್ರಾಚಾರ್ಯರು ಅಲೆಮಾರಿ ಜನಾಂಗ ಎಂದು ನಮೂದಿಸಿರುವ ಜಾತಿ ಪ್ರಮಾಣ ಪತ್ರವನ್ನೇ ತರಬೇಕೆಂದು ದಾಖಲಾತಿಯನ್ನು ನಿರಾಕರಣೆ ಮಾಡುತ್ತಿದ್ದಾರೆ. ಇದರಿಂದಾಗಿ ನಮ್ಮ ಆಲೆಮಾರಿ/ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕೆಲವು ಕಡೆ ಜನಪ್ರತಿನಿಧಿಗಳು ಎಂದುಕೊಳ್ಳುವ ರಾಜಕಾರಣಿಗಳು ತಮ್ಮ ತಾಲೂಕಿನಲ್ಲಿ ತಮಗೆ ಬೇಕಾದ ರೀತಿಯಲ್ಲಿ 75% ಇತರ ತಾಲೂಕಿನ 25% ಮೀಸಲಾತಿಯನ್ನು ನೀಡಬೇಕೆಂದು ಸರಕಾರದಿಂದ ಆದೇಶ ಹೊರಡಿಸಿರುವುದರಿಂದ ಕಡಿಮೆ ವಸತಿ ಶಾಲೆಗಳನ್ನು ಹೊಂದಿರುವ ತಾಲ್ಲೂಕಿನ ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು.ಆಲೆಮಾರಿ ಜನಾಂಗದವರು ಸಮಾಜದಲ್ಲಿ ಇತರರಂತೆ ಅಭಿವೃದ್ಧಿ ಹೊಂದಲು ಇರುವ ಏಕೈಕ ಮಾರ್ಗವೆಂದರೆ ಈ ಜನಾಂಗದವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಈ ವಿಚಾರದಲ್ಲಿ ಸರಕಾರ ವಿಫಲವಾಗಿದೆ ಎಂದು ದೂರಿದರು.
ಜಿಲ್ಲಾಧ್ಯಕ್ಷರಾದ ಲಕ್ಷ್ಮೀಕಾಂತ್.ಎಸ್ ಮಾತನಾಡಿ, ಮೊರಾರ್ಜಿ ದೇಸಾಯಿ ಸೇರಿದಂತೆ ಎಲ್ಲಾ ವಸತಿ ಶಾಲೆಗಳಲ್ಲಿ ನಮ್ಮ ಅಲೆಮಾರಿ ವಿದ್ಯಾರ್ಥಿಗಳಿಗೆ ನೇರ ದಾಖಲಾತಿಗೆ ಅವಕಾಶ ನೀಡಬೇಕು. ಇತರ ಜನಾಂಗಗಳ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಿ ನಮ್ಮ ಅಲೆಮಾರಿ ಜನಾಂಗದ ಶೇಕಡಾ 85ಕ್ಕಿಂತಲೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಿರುವುದು ಖಂಡನೀಯ.
ಕೆಲವು ಕಡೆ ನಮ್ಮ ಹಿರಿಯರು ತಿಳಿಯದೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ತಮ್ಮ ಜಾತಿ ಜನಾಂಗದ ಹೆಸರನ್ನು ಸರಿಯಾಗಿ ನೀಡಿಲ್ಲ. ಇದರಿಂದ ನಮ್ಮ ಅಲೆಮಾರಿ ಮಕ್ಕಳು ಸರಕಾರದ ಮೀಸಲಾತಿಯಿಂದ ವಂಚಿತರಾಗಿದ್ದಾರೆ. ಈ ಬಗ್ಗೆ ಸರಕಾರ, ಸಂಬಂದ ಪಟ್ಟ ಇಲಾಖೆ ಎಚ್ಚೆತ್ತು ಸರಕಾರ ಮಟ್ಟದ ಜಾತಿ ಪರಿಶೀಲನಾ ಸಮಿತಿಗೆ ಇವೆಲ್ಲವನ್ನು ಸರಿಪಡಿಸುವ ಬಗ್ಗೆ ನಿದೇರ್ಶನ ನೀಡಬೇಕು. ಸರಕಾರ ನಮ್ಮ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ನೀಡಿ ವಿಶೇಷ ಮೀಸಲಾತಿಯನ್ನು ಪ್ರಕಟಿಸಬೇಕು. ಈ ಬಗ್ಗೆ ಸರಕಾರ ತಮ್ಮ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದು ಅದನ್ನು ಅನುಷ್ಠಾನಗೊಳಿಸುವ ಬಗ್ಗೆ ನಮ್ಮ ಹಿಂದುಳಿದ ವರ್ಗಗಳ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಲೆಮಾರಿ/ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷ ರಾಮುಗೋಸಾಯಿ, ಮಹಿಳಾ ಜಿಲ್ಲಾಧ್ಯಕ್ಷ ಜ್ಯೋತಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ, ರವಿಕುಮಾರ್.ಎಸ್, ಕಾರ್ಯದರ್ಶಿ ನಾಗರಾಜ್, ತಾಲ್ಲೂಕು ಅಧ್ಯಕ್ಷ ಹೇಮಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು.