ಮುಂಬೈ: 16 ವರ್ಷ ಪ್ರಾಯದ ಮುಂಬೈನ ಬಾಲಕಿಯೊಬ್ಬಳು ಎವರೆಸ್ಟ್ ಪರ್ವತವನ್ನು ಯಶಸ್ವಿಯಾಗಿ ಏರಿದ್ದಾಳೆ. ಈ ಮೂಲಕ ನೇಪಾಳ ಭಾಗದಿಂದ ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ ಅತ್ಯಂತ ಕಿರಿಯ ಭಾರತೀಯ ಎಂಬ ದಾಖಲೆ ಬರೆದಿದ್ದಾಳೆ.
ಮುಂಬೈನ ನೇವಿ ಚಿಲ್ಡ್ರನ್ ಸ್ಕೂಲ್ ನ 12ನೇ ತರಗತಿಯಲ್ಲಿ ಕಲಿಯುತ್ತಿರುವ ಕಾಮ್ಯಾ ಕಾರ್ತಿಕೇಯನ್ ಅವರು ಈ ಸಾಧನೆ ಮಾಡಿದ ಬಾಲಕಿ.ತಂದೆ ಕಾರ್ತಿಕೇಯನ್ ಜೊತೆಗೆ ಕಾಮ್ಯಾ ಈ ಸಾಧನೆ ಮಾಡಿದ್ದಾಳೆ. ಏಪ್ರಿಲ್ 3 ರಂದು ಮೌಂಟ್ ಎವರೆಸ್ಟ್ (8,849 ಮೀಟರ್) ಏರಲು ತಮ್ಮ ಯಾತ್ರೆಯನ್ನು ಪ್ರಾರಂಭಿಸಿದ ಅವರು ಮೇ 20 ರಂದು ಉತ್ತುಂಗವನ್ನು ತಲುಪಿದರು ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಕಾಮ್ಯ ಅವರ ಸಾಧನೆಗಾಗಿ ಪಶ್ಚಿಮ ನೌಕಾ ಕಮಾಂಡ್ ಅವರ ಚಿತ್ರದೊಂದಿಗೆ ಟ್ವೀಟ್ ಮಾಡಿದೆ, ‘ಈ ಸಾಧನೆಯ ನಂತರ, ನೇಪಾಳದ ಕಡೆಯಿಂದ ವಿಶ್ವದ ಅತಿ ಎತ್ತರದ ಶಿಖರವನ್ನು ಏರಿದ ವಿಶ್ವದ ಎರಡನೇ ಕಿರಿಯ ಹುಡುಗಿ ಮತ್ತು ಕಿರಿಯ ಭಾರತೀಯ ಪರ್ವತಾರೋಹಿಯಾಗಿದ್ದಾರೆ’ ಎಂದು ಬರೆದುಕೊಂಡಿದೆ.