ಬೆಂಗಳೂರು, ಜೂನ್. 22: ಕನ್ನಡದ ಖ್ಯಾತ ಸಾಹಿತಿ, ನಾಡೋಜಾ ಡಾ. ಕಮಲ ಹಂಪನಾ ಅವರು ಶನಿವಾರ (ಜೂನ್ 22) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಕಮಲ ಹಂಪನಾ ಅವರು ಪತಿ, ಖ್ಯಾತ ಸಾಹಿತಿ ಹಂಪ ನಾಗರಾಜಯ್ಯ, ಮೂವರು ಮಕ್ಕಳು ಹಾಗೂ ಅಪಾರ ಸಾಹಿತ್ಯಾಭಿಮಾನಿಗಳನ್ನು ಅಗಲಿದ್ದಾರೆ.

ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು, ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ ಇರುವ ತಮ್ಮ ಮಗಳು ಆರತಿ ಮನೆಯಲ್ಲಿ ವಾಸವಿದ್ದರು. ಶುಕ್ರವಾರ ರಾತ್ರಿ 10 ಗಂಟೆ ವೇಳೆಗೆ ಅವರಿಗೆ ಹೃದಯಾಘಾತವಾಗಿತ್ತು. ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕಮಲಾ ಹಂಪನಾ ಅವರು ತಮ್ಮ ದೇಹವನ್ನು ರಾಮಯ್ಯ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಕಮಲಾ ಹಂಪನಾ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸೇರಿ ಹಲವರು ಕಂಬನಿ ಮಿಡಿದಿದ್ದಾರೆ.
ಬೆಂಗಳೂರಿನ ದೇವನಹಳ್ಳಿಯಲ್ಲಿ 1935ರ ಅಕ್ಟೋಬರ್ 28ರಂದು ಸಿ. ರಂಗಧಾಮನಾಯಕ್ ಮತ್ತು ಲಕ್ಷಮ್ಮ ದಂಪತಿ ಪುತ್ರಿಯಾಗಿ ಕಮಲಾ ಹಂಪನಾ ಜನಿಸಿದರು. ತುಮಕೂರು ಮತ್ತು ಮೈಸೂರಿನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿ 1956ರಲ್ಲಿ ಕನ್ನಡ ಅಧ್ಯಾಪಕಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಬೆಂಗಳೂರು ಮತ್ತು ಮೈಸೂರು ಮಹಾರಾಣಿ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ, ಬೆಂಗಳೂರಿನ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಿವೃತ್ತರಾದ ಮೇಲೆ ಮೈಸೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾನಿಲಯಗಳಲ್ಲಿಯೂ ಸೇವೆ ಸಲ್ಲಿಸಿದ್ದರು.
ಕಮಲಾ ಹಂಪನಾ ಅವರು 60 ವರ್ಷಗಳಕಾಲ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಮಾಡಿದ್ದಾರೆ. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ, ಸಂಶೋಧನಾ ಕೃತಿಗಳಾದ ತುರಂಗ ಭಾರತ – ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ನಾಡು ನುಡಿ ನಾವು, ಜೈನ ಸಾಹಿತ್ಯ ಪರಿಸರ, ಬದ್ದವಣ, ರೋಣದ ಬಸದಿ ಸೇರಿ ಹಲವು ಕಥಾ ಕವನ ಸಂಕಲನಗಳು, ಶಿಶು ಸಾಹಿತ್ಯ, ಅನುವಾದಗಳು, ಕಾದಂಬರಿಗಳನ್ನು ಕನ್ನಡ ಸಾಹಿತ್ಯ ಪ್ರಿಯರಿಗಾಗಿ ಕೊಡುಗೆ ನೀಡಿದ್ದಾರೆ.
2003 ರಲ್ಲಿ ಮೂಡುಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡುವ ನಾಡೋಜ ಪ್ರಶಸ್ತಿ ಸಂದಿವೆ.
ಕಮಲಾ ಹಂಪನಾ ನಿಧನಕ್ಕೆ ಸಚಿವ ಎಂ ಬಿ ಪಾಟೀಲ ಸಂತಾಪ
ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ಸಚಿವ ಎಂ ಬಿ ಪಾಟೀಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಆರು ದಶಕಗಳಿಗೂ ಹೆಚ್ಚು ಕಾಲ ಬೋಧನೆ, ಸಂಶೋಧನೆ ಮತ್ತು ಸಾಹಿತ್ಯ ರಚನೆಗಳಲ್ಲಿ ನಿರತರಾಗಿದ್ದ ಕಮಲಾ ಹಂಪನಾ ಅವರು ಮಹಿಳಾ ಸಬಲೀಕರಣ ಮತ್ತು ಸೃಜನಶೀಲತೆಯ ಪ್ರತೀಕದಂತಿದ್ದರು. ಸಾಹಿತ್ಯದಲ್ಲಿ ಒಂದು ಉನ್ನತ ಮಾದರಿಯನ್ನು ನಿರ್ಮಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದಿದ್ದಾರೆ.
ಸಜ್ಜನಿಕೆ ಮತ್ತು ಸುಸಂಸ್ಕೃತಿಗಳ ಸಂಗಮವಾಗಿದ್ದ ಕಮಲಾ ಅವರ ನಿಧನದಿಂದ ಕನ್ನಡ ಸಾಹಿತ್ಯದ ಚೇತನವೊಂದು ಕಣ್ಮರೆಯಾದಂತಾಗಿದೆ. ಪರಮಾತ್ಮನು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬದ ಸದಸ್ಯರಿಗೆ ನೋವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
Views: 0