ಕುಂಭಮೇಳ ಕಾಲ್ತುಳಿತಕ್ಕೆ ಸಿಲುಕಿ ಕನ್ನಡಿಗರ ಕಣ್ಣೀರು: ಸಂಪರ್ಕಕ್ಕೆ ಸಿಗದ ಐವರು, ಸಂಬಂಧಿಕರ ಅಳಲು.

ದೇಶದ ಮೂಲೆಮೂಲೆಯಿಂದಲೂ ಭಕ್ತರು ಪ್ರಯಾಗ್​ರಾಜ್​ಗೆ ತೆರಳಿ ಕುಂಭಮೇಳದಲ್ಲಿ ಭಾಗಿಯಾಗುತ್ತಿದ್ದಾರೆ. ಮಹಾ ಕುಂಭಮೇಳದಲ್ಲಿ ಮಿಂದೆದ್ದು ಪುನೀತರಾಗುತ್ತಿದ್ದಾರೆ. ಕೋಟಿ ಕೋಟಿ ಭಕ್ತರು ಭಾಗವಹಿಸುತ್ತಿರುವ ಕುಂಭಮೇಳ ಕಾಲ್ತುಳಿತ ಸಂಭವಿಸಿದೆ. ಪ್ರಯಾಗರಾಜ್​ನಲ್ಲಿ ಕನ್ನಡಿಗರು ಕೂಡ ಸಿಲುಕಿದ್ದಾರೆ. ಬೆಳಗಾವಿಯ ಇಬ್ಬರು ಗಾಯಗೊಂಡಿದ್ದಾರೆ. ರಾಜ್ಯದಿಂದ ಹೋದವರ ಪೈಕಿ ಐವರು ಸಂಕರ್ಪಕ್ಕೆ ಸಿಕ್ಕಿಲ್ಲ.

ಬೆಂಗಳೂರು, ಜನವರಿ 29: ಉತ್ತರ ಪ್ರದೇಶದ ಪ್ರಯಾಗ್​ರಾಜ್​​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದಾಗಿ ಕನ್ನಡಿಗರು ಕೂಡ ಕಣ್ಣೀರು ಹಾಕುವಂತಾಗಿದೆ. ಪುಣ್ಯಸ್ನಾನಕ್ಕೆ ಅಂತಾ ಹೋದವರ ಪಾಡು ಹೇಳತೀರದಾಗಿದೆ. ಬೆಳಗಾವಿಯಿಂದ ಖಾಸಗಿ ಬಸ್​ನಲ್ಲಿ ಮೂವತ್ತು ಜನರ ತಂಡ ಪ್ರಯಾಗರಾಜ್​ಗೆ ಹೋಗಿತ್ತು. ಈ ಪೈಕಿ ಕಾಲ್ತುಳಿತದ ಬಳಿಕ ಐವರು ನಾಪತ್ತೆ ಆಗಿದ್ದಾರೆ. ಬೆಳಗ್ಗೆಯಿಂದಲೂ ಸಂಪರ್ಕಕ್ಕೆ ಸಿಗದ ಕಾರಣ ಸಂಬಂಧಿಕರಲ್ಲಿ ಆತಂಕ ಮನೆ ಮಾಡಿದೆ.

ಕುಂಭಮೇಳ ಕಾಲ್ತುಳಿತದಲ್ಲಿ ಬೆಳಗಾವಿ ದಂಪತಿಗೆ ಗಾಯ

ಬೆಳಗಾವಿ ನಗರದ ಶೆಟ್ಟಿಗಲ್ಲಿಯ ದಂಪತಿ ಅರುಣ್ ಕೋಪರ್ಡೆ, ಕಾಂಚನಾ ಕೋಪರ್ಡೆ ಕಾಲ್ತುಳಿತದಲ್ಲಿ ಗಾಯಗೊಂಡಿದ್ದಾರೆ. ಚದುರಿ ಹೋಗಿದ್ದ ಇಬ್ಬರಿಗೂ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಬೆಳಗಾವಿಯಲ್ಲಿರುವ ದಂಪತಿಯ ಪುತ್ರ ಕಂಗಲಾಗಿಬಿಟ್ಟಿದ್ದಾರೆ.

ಕಾಲ್ತುಳಿತದಿಂದ ಪಾರಾಗಿ ನಿಟ್ಟುಸಿರು ಬಿಟ್ಟ ಐವರು

Karnataka People In Kumbh Mela

ಈ ಫೋಟೋದಲ್ಲಿ ಕೈ ಮುಗಿದು ನಿಂತಿರೋ ಆರು ಮಂದಿ ಪೈಕಿ, ಐವರು ಕನ್ನಡಿಗರು. ತ್ರಿವಣಿ ಸಂಗಮದಲ್ಲಿ ಮಿಂದೆದ್ದು ಪುನೀತರಾಗಬೇಕೆಂದು ಮಹಾ ಕುಂಭಮೇಳಕ್ಕೆ ಹೋಗಿದ್ದರು. ಆದರೆ ದಿಢೀರ್ ಸಂಭವಿಸಿದ ಕಾಲ್ತುಳಿತಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ. ಕೂದಲೆಳೆ ಅಂತರದಿಂದ ಪಾರಾಗಿ ಚಿಕ್ಕಬಳ್ಳಾಪುರದ ನಾಲ್ವರು, ನೆಲಮಂಗಲದ ಓರ್ವ ನಿಟ್ಟುಸಿರು ಬಿಟ್ಟಿದ್ದಾರೆ.

ತಪ್ಪಿಸಿಕೊಳ್ಳಲು ದಾರಿಯೇ ಸಿಕ್ಕಿಲ್ಲ: ಕಣ್ಣೀರಿಟ್ಟ ಮಹಿಳೆ

ಕಾಲ್ತುಳಿತದ ಭೀಕರತೆಯನ್ನು ಕನ್ನಡತಿ ಸರೋಜಿನಿ ಎಂಬಾಕೆ ಬಿಚ್ಚಿಟ್ಟಿದ್ದು ಕಣ್ಣೀರಿಟ್ಟಿದ್ದಾರೆ. 2 ಬಸ್​ನಲ್ಲಿ 60 ಜನ ಬಂದಿದ್ದೆವು. 9 ಜನ ಸ್ನಾನ ಮಾಡುವುದಕ್ಕೆ ಹೋದಾಗ ಕಾಲ್ತುಳಿತ ಸಂಭವಿಸಿತು. ತಪ್ಪಿಸಿಕೊಳ್ಳಲು ನಮಗೆ ಯಾವುದೇ ದಾರಿಯೇ ಸಿಕ್ಕಿಲ್ಲ ಎಂದು ಸರೋಜಿನಿ ಬಿಕ್ಕಿಬಿಕ್ಕಿ ಅತ್ತಿದ್ದಾರೆ.

ಈ ಮಧ್ಯೆ, ಮಹಾಕುಂಬಮೇಳದಲ್ಲಿ ಅವ್ಯವಸ್ಥೆ ತಾಂಡವ ಆಡುತ್ತಿದೆ ಎಂದು ಕನ್ನಡಿಗರು ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರಿನ ಉಮೇಶ್ ಈ ಬಗ್ಗೆ ಮಾತನಾಡಿದ್ದು, ಗಾಯ ಆಗಿದೆ, ಆಸ್ಪತ್ರೆಗೆ ಹೋಗಿ ಬಂದಿದ್ದೇನೆ. 22 ಕಿ.ಮೀ ನಡೆದುಕೊಂಡು ಹೋಗಿದ್ದೇನೆ. ಭಕ್ತರಿಗೆ ಯಾವುದೇ ವಾಹನದ ವ್ಯವಸ್ಥೆ ಮಾಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಮಹಾ ಕುಂಭಮೇಳದಲ್ಲಿ ಕಲಬುರಗಿ ಭಕ್ತರು ಸುರಕ್ಷಿತ

ಕಲಬುರಗಿ ಜಿಲ್ಲೆಯ ಯಲಕಪಳ್ಳಿ ಗ್ರಾಮಸ್ಥರು ಪ್ರಯಾಗರಾಜ್​​ನಲ್ಲಿ ಸುರಕ್ಷಿತರಾಗಿದ್ದಾರೆ. ಯಲಕಪಳ್ಳಿ ಗ್ರಾಮಸ್ಥರು ಅಮೃತ ಸ್ನಾನ ಮಾಡಿದ ಸ್ಥಳದಿಂದ 5 ಕಿಮೀ ದೂರ ಕಾಲ್ತುಳಿತ ಸಂಭವಿಸಿದೆ.

Source : https://tv9kannada.com/karnataka/maha-kumbh-stampede-tears-of-kannadigas-in-prayagraj-karnatakas-five-people-missing-gsp-970897.html

Leave a Reply

Your email address will not be published. Required fields are marked *