ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ,ಜು.11 : ನಾನು ಭ್ರಷ್ಟಾಚಾರ ಸಹಿಸಲ್ಲ. ನಾನು ಸಚ್ಚಾರಿತ್ರ್ಯ ವ್ಯಕ್ತಿ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ರಿಯಲ್ ಎಸ್ಟೇಟ್ ಹಾಗೂ ಹಣ ಕಬಳಿಕೆ ಆರೋಪ ಬಂದಿರುವುದರಿಂದ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ನಾವು ಸಾಚಾ ಇದೀವಿ ಎಂದು ರಾಜ್ಯದ ಜನರಿಗೆ ಸಾರಿ ಸಾರಿ ಹೇಳಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಂದೂಕಾಲ್ ವರ್ಷದ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ಒಂದು ರೂಪಾಯಿ ಅಭಿವೃದ್ದಿ ಕಾರ್ಯ ಮಾಡಲಿಲ್ಲ. ಬದಲಾಗಿ ಸ್ವಜನ ಪಕ್ಷಪಾತದಲ್ಲಿ ಸಿಲುಕಿ, ತಮ್ಮ ಸ್ವರ್ಥಕ್ಕಾಗಿ ಅಧಿಕಾರ ಮಾಡುತ್ತ ಬಂದಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಸಾಕಷ್ಟು ಆರೋಪಗಳು ಬರುತ್ತಿವೆ. ಆದರೂ ಕೂಡ ಸಿದ್ದರಾಮಯ್ಯ ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಪಾಧನೆಗಳು ಬಂದ ಮೇಲೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಅವಕಾಶ ನೀಡಬೇಕು. ಈ ಹಿಂದೆ ರಾಮಕೃಷ್ಣ ಹೆಗಡೆ ಅವರ ಮೇಲೆ ಟೆಲಿಪೋನ್ ಕದ್ದಾಲಿಕೆ ಆರೋಪ ಬಂದಾಗ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ರೀತಿ ಇಂದು ಸಿದ್ದರಾಮಯ್ಯ ಕೂಡ ಮುಂದಾಗಬೇಕು ಎಂದು ಹೇಳಿದ ಅವರು, ಸಿದ್ದರಾಮಯ್ಯ ಅವರು 3 ಎಕರೆ 20 ಗುಂಟೆ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿ ತಮ್ಮ ಹೆಂಡತಿಗೆ ಕೊಟ್ಟಿದ್ದಾರೆ. ಅಲ್ಲದೆ 50-50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಿದ್ದಾರೆ ಇದು ಕೂಡ ಸರ್ಕಾರದ ಸುತ್ತೋಲೆ ಪ್ರಕಾರ ತಪ್ಪಾಗಿದ್ದು, ಇದರಲ್ಲೇ ಸ್ವಷ್ಟವಾಗಿ ಕಾಣುತ್ತಿದೆ ಅಕ್ರಮ ನಡೆದಿದೆ ಎಂಬುದು. ಆದ್ದರಿಂದ ಸಿದ್ದರಾಮಯ್ಯ ಹಾಗೂ ಸಂಬಂದ ಪಟ್ಟ ಸಚಿವರು ರಾಜೀನಾಮೆ ಕೊಟ್ಟು ನಾವು ಸಾಚಾ ಇದೀವಿ ಎಂಬುದನ್ನು ತೋರಿಸಬೇಕು ಎಂದು ಒತ್ತಾಯಿಸಿದರು.
ಎಸ್ಸಿ, ಎಸ್ಟಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಬೇನಾಮಿ ಅಕೌಂಟ್‍ಗಳಿಗೆ ಹಣ ಜಮೆ ಆಗುತ್ತೆ ಎಂದರೆ ಏನು ಅರ್ಥ. 187 ಕೋಟಿ ರೂ ಹಗರಣ ನಡೆಸಿ, ಬೇರೆ ಬೇರೆ ಬ್ಯಾಂಕ್‍ನಲ್ಲಿ ಖಾತೆ ತೆರೆದು ಹಣ ಜಮೆ ಮಾಡಿರುವುದು ಇತಿಹಾಸದಲ್ಲೇ ಮೊದಲು. ಇದಕ್ಕೆ ಸಿದ್ದರಾಮಯ್ಯ ನೇರ ಹೊಣೆ ಹೊರಬೇಕು `ವಾಲ್ಮೀಕಿ ನಿಗಮದ ಹಗರಣದಲ್ಲಿ ಇಡಿ ಬಂದಿರುವುದು ಬ್ಯಾಂಕುಗಳ ಕಾರಣಕ್ಕೆ. ಇದೊಂದು ಅಂತರ ರಾಜ್ಯ ಹಗರಣ. ಬ್ಯಾಂಕ್ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಈ ಪ್ರಕರಣದಲ್ಲಿ ನೀವು ತಪ್ಪೇ ಮಾಡಿಲ್ಲ ಅನ್ನುವುದಾದರೆ ಭೈರತಿ ಸುರೇಶ್ ಓಡಿ ಹೋಗಿ ಅಧಿಕಾರಿಗಳನ್ನು ಅಮಾನತು ಮಾಡಿದ್ಯಾಕೆ. ಎಲ್ಲ ದಾಖಲೆಗಳನ್ನು ಬೆಂಗಳೂರಿಗೆ ತರಲಾಗಿದೆ. ತಿದ್ದುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅವರು ಮೌಲ್ಯಾಧಾರಿತ ರಾಜಕಾರಣಿ ಎನ್ನುವುದನ್ನು ಸಾಬೀತು ಮಾಡಲಿ’ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸಿಬಿಐ, ಇಡಿ, ಇಂಕಮ್ ಟ್ಯಾಕ್ಸ್ ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಸದಾ ಆರೋಪ ಮಾಡುತ್ತಾರೆ ಇದು ತಪ್ಪು ಮಾಹಿತಿ. ಸ್ವಯತ್ತ ಸಂಸ್ಥೆಗಳು. ಯಾರ ಮೇಲೆ ಬೇಕಾದರೂ ತನಿಖೆ ನಡೆಸು ಅಧಿಕಾರವನ್ನು ಈ ಸಂಸ್ಥೆಗಳು ಹೊಂದಿವೆ. ಆ ಅಧಿಕಾರದ ಮೇಲೆ ತನಿಖೆ ನಡೆಸುತ್ತಿವೆ. ಇದರಲ್ಲಿ ಕೇಂದ್ರ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಅಲ್ಲದೆ ಮೊದಲು 50 ವರ್ಷ ಅಧಿಕಾರ ನಡೆಸಿದ ಕಾಂಗ್ರೇಸ್ ಸಾವಿರಾರು ಪ್ರಕರಣ ನಡೆಸಿದ್ದಾರೆ. ಹಾಗಾದರೆ ನೀವು ಕೂಡ ಈ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡಿದ್ದಿರಾ ? ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರ ರೀಯಲ್ ಎಸ್ಟೇಟ್ ಹಗರಣ ಮಾಡಿದೆ. ಈ ಹಗರಣಗಳ ಕುರಿತು ಸದನದಲ್ಲಿ ಚರ್ಚೆ ನಡೆಸಲು ಮುಂದಾದರೆ ಅಂತಹ ಶಾಸಕರನ್ನು ಸಿದ್ದರಾಮಯ್ಯನವರು ಸದನದಲ್ಲೇ ಬೆದರಿಸುವ ತಂತ್ರಗಾರಿಕೆಯಲ್ಲಿ ಮಾತನಾಡುತ್ತಾರೆ. ಮತ್ತೊಂದೆಡೆ ನಾನು ಭ್ರಷ್ಟಚಾರ ರಹಿತ ವ್ಯಕ್ತಿ ಎಂದು ಹೇಳುತ್ತಾರೆ. ಇದರಲ್ಲಿ ಸತ್ಯ ತಿಳಿಯಬೇಕಾದರೆ ಸೂಕ್ತ ತನಿಖೆ ಆಗಬೇಕು ಆದ್ದರಿಂದ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ತಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವ ಉಳಿಸಿಕೊಳ್ಳಬೇಕು. ಪ್ರಕರಣಗಳನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿಗೆ ಅಗೌರವದಿಂದ ಮಾತನಾಡುವ ರಾಹುಲ್ ಗಾಂಧಿ ತಮ್ಮ ಕಾಂಗ್ರೇಸ್ ಮುಖ್ಯಮಂತ್ರಿ ಸಿದ್ದರಾಮಯ್ಯ ಏನೆಲ್ಲಾ ಹಗರಣ ಮಾಡಿದ್ದಾರೆ ಎಂಬುದರ ಬಗ್ಗೆ ಸಂಸತ್‍ನಲ್ಲಿ ಮಾತನಾಡಬೇಕು ಎಂದು ಒತ್ತಾಯಿಸಿ ಮೈಸೂರಿನಲ್ಲಿ ಜಮೀನು ಕಳೆದುಕೊಂಡವರು ಬಡವರು, ಆದರೆ ನಿವೇಶನ ಪಡೆದವರು ಶ್ರೀಮಂತರಾಗಿದ್ದಾರೆ. ಸೈಟುಗಳನ್ನು ಬಿಟ್ಟುಕೊಡುತ್ತೇನೆ ಎಂದು ಹೇಳುವ ಸಿದ್ದರಾಮಯ್ಯ ಅವರ ಉದಾರತೆ ನಮಗೆ ಬೇಡವಾಗಿದ್ದು, ರಾಜೀನಾಮೆ ಕೊಟ್ಟು ಪ್ರಕರಣವನ್ನು ಎದುರಿಸಬೇಕು ಎಂದು ಆಗ್ರಹಿಸಿದರು.
`ಮುಖ್ಯಮಂತ್ರಿಗಳೇ ಅತೀ ದೊಡ್ಡ ರಿಯಲ್ ಎಸ್ಟೇಟ್ ಹಗರಣದಲ್ಲಿ ಭಾಗಿಯಾಗಿರುವುದು ರಾಜ್ಯದ ಇತಿಹಾಸದಲ್ಲಿ ಮೊದಲು. ಮುಡಾದಲ್ಲಿ ನಿವೇಶನಕ್ಕಾಗಿ 62 ಸಾವಿರ ಜನ ಅರ್ಜಿ ಹಾಕಿ ಕಾಯುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ತಮ್ಮ ಅಧಿಕಾರ, ಪ್ರಭಾವ ಬಳಸಿ 1995 ರ ಕಾಯ್ದೆ ಅನ್ವಯ ಎಂದು ಉಲ್ಲೇಖಿಸಿ, ಅರ್ಕಾವತಿ ಬಡಾವಣೆಗೆ 2005 ರಲ್ಲಿ ರೂಪುಗೊಂಡ ನಿಯಮವನ್ನು ಬಳಕೆ ಮಾಡಿಕೊಂಡು ಮೈಸೂರಿನ ವಿಜಯನಗರದಂತಹ ಬಡಾವಣೆಗಳಲ್ಲಿ ನಿವೇಶನ ತೆಗೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.
`2010 ರಲ್ಲಿ ಸಿದ್ದರಾಮಯ್ಯ ಪತ್ನಿ ಹೆಸರಿಗೆ ಜಮೀನು ಬಂದಿದೆ. ಆದರೆ, ಅದಕ್ಕಿಂತ ಹಿಂದೆಯೇ ರಚನೆಯಾದ ಬಡಾವಣೆಯಲ್ಲಿ ನಿವೇಶನ ಪಡೆದಿದ್ದಾರೆ. ಸಮಾಜದಲ್ಲಿ ಸಾಧನೆ ಮಾಡಿದವರಿಗೆ ಶೇ.25 ರಷ್ಟುನಿವೇಶನ ಕೊಡಬೇಕು. ಆದರೆ, ಅಲ್ಲಿಯೂ ಇವರು ಕೈ ಹಾಕಿದ್ದಾರೆ. ಕೆಸರೆ ಜಮೀನಿನಲ್ಲಿ ಸಿದ್ದರಾಮಯ್ಯ ಕೈ ಕೆಸರಾಗಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಎಂ.ಚಂದ್ರಪ್ಪ, ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಜಿಲ್ಲಾಧ್ಯಕ್ಷ ಮುರುಳಿ ಮಂಡಲ ಆಧ್ಯಕ್ಷ ನವೀನ್ ಚಾಲುಕ್ಯ, ಗ್ರಾಮಾಂತರ ಅಧ್ಯಕ್ಷ ಕಲ್ಲೇಶಯ್ಯ, ಪ್ರಧಾನ ಕಾರ್ಯದರ್ಶಿ ಸುರೇಶ್‍ಸಿದ್ದಾಪುರ, ಸಂಪತ್‍ಕುಮಾರ್, ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ರಾಮರೆಡ್ಡಿ, ತಿಪ್ಪೇಸ್ವಾಮಿ, ಸೇರಿದಂತೆ ಇತರರು ಹಾಜರಿದ್ದರು.